ಮಂಗಳವಾರ, ಆಗಸ್ಟ್ 20, 2019
27 °C
ನದಿಯುದ್ದಕ್ಕೂ ಆಸ್ತಿಪಾಸ್ತಿ ಮುಳುಗಡೆ, ನೂರಾರು ಜನರ ಸ್ಥಳಾಂತರ: ಶಾಲಾ ಕಾಲೇಜುಗಳಿಗೆ ಇಂದೂ ರಜೆ

ಕಾಳಿಯ ರೌದ್ರಾವತಾರ: ಮನೆ, ರಸ್ತೆ ಜಲಾವೃತ

Published:
Updated:
Prajavani

ಕಾರವಾರ: ಎಲ್ಲಿ ನೋಡಿದರೂ ನೀರು. ನದಿ, ರಸ್ತೆ, ಹೊಲ ಗದ್ದೆಗಳ ಗಡಿಯೇ ತಿಳಿಯದಂಥ ಭಯಾನಕ ಪರಿಸ್ಥಿತಿ. ಕಾಳಿಯ ರೌದ್ರಾವತಾರಕ್ಕೆ ಬೆಚ್ಚಿದ ಇಕ್ಕೆಲಗಳ ನಿವಾಸಿಗಳು ತಮ್ಮ ಮನೆಗಳನ್ನೇ ತೊರೆದು ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮೂರು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಕಾಳಿ ನದಿಯಲ್ಲಿ ನೀರಿನ ಮಟ್ಟ ಹಿಂದೆಂದೂ ಕಾಣದಷ್ಟು ಮಟ್ಟಿಗೆ ಏರಿಕೆಯಾಗಿದೆ. ಕೊಡಸಳ್ಳಿ ಮತ್ತು ಕದ್ರಾ ಅಣೆಕಟ್ಟೆಗಳಿಂದ ಮಂಗಳವಾರ ಸಂಜೆ 1.40 ಲಕ್ಷ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಯಿತು. ಇದರಿಂದ ನೀರಿನ ಮಟ್ಟ ಮತ್ತಷ್ಟು ಏರಿಕೆ ಕಂಡು ಅಕ್ಕಪಕ್ಕದ ಮತ್ತಷ್ಟು ಹಳ್ಳಿಗಳು ಜಲಾವೃತವಾದವು. 

ಖಾರ್ಗೆಜೂಗ ಹಾಗೂ ಉಂಬಳಿಜೂಗ ನಡುಗಡ್ಡೆಗಳಿಂದ ಸೋಮವಾರ ರಾತ್ರಿಯೇ ಸ್ಥಳೀಯರು ಮನೆಗಳನ್ನು ತೊರೆದಿದ್ದಾರೆ. ಖಾರ್ಗೆಜೂಗದ 60 ಕುಟುಂಬಗಳ 102 ಜನರಿಗೆ ಸಿದ್ದರ ಐಟಿಐ ಕಾಲೇಜಿನಲ್ಲಿ ತಾತ್ಕಾಲಿಕ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಇಲ್ಲಿ ಎರಡು ದಿನಗಳಿಂದ ವಿದ್ಯುತ್ ಇಲ್ಲದೇ ಮೊಬೈಲ್ ಫೋನ್‌ಗಳನ್ನೂ ಚಾರ್ಜ್ ಮಾಡಿಕೊಳ್ಳಲಾಗುತ್ತಿಲ್ಲ. ಸಂಬಂಧಿಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂತ್ರಸ್ತರು ಅಸಹಾಯಕತೆ ವ್ಯಕ್ತಪಡಿಸಿದರು. 

ಉಂಬಳಿಜೂಗದ 21 ಕುಟುಂಬಗಳಿಗೆ ಬೋಳೆವಾಡ ಸರ್ಕಾರಿ ಶಾಲೆಯಲ್ಲಿ, ಬಡೆಜೂಗದ 25 ಕುಟುಂಬಗಳಿಗೆ ಸಕಲವಾಡ ಸರ್ಕಾರಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕಾರವಾರ– ಕೈಗಾ ರಸ್ತೆಯ ಬೋಳ್ವೆಯಲ್ಲಿ ಪ್ರಕಾಶ ನಾಯ್ಕ ಹಾಗೂ ಅಶೋಕ ನಾಗೇಶ ನಾಯ್ಕ ಅವರ ಮನೆಗಳಿಗೆ ನೀರು ನುಗ್ಗಿದೆ. ಇತ್ತ ಕಿನ್ನರದಿಂದ ಸಿದ್ದರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೂ ಮುಳುಗಡೆಯಾಗಿದೆ.

ಕುರ್ನಿಪೇಟೆ, ವಿರ್ಜೆ, ಮಲ್ಲಾಪುರದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಸುಮಾರು 60 ಕುಟುಂಬಗಳು ಅಲ್ಲಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕೂಡಲೇ ತಮ್ಮ ಮನೆಗಳನ್ನು ತೊರೆದರು. ಹಲವರು ಎತ್ತರದ ಪ್ರದೇಶದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡಿದ್ದಾರೆ. ಕೆಲವರು ಪುನರ್ವಸತಿ ಕೇಂದ್ರಗಳಲ್ಲಿದ್ದಾರೆ.

ಮುಳುಗಡೆ ಪ್ರದೇಶದಲ್ಲಿದ್ದ ಸ್ಥಳೀಯರನ್ನು ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು. ಸ್ಥಳೀಯ ಗ್ರಾಮಸ್ಥರೂ ಧಾವಿಸಿ ಬಂದು ಸಹಕಾರ ನೀಡಿದರು.

ಮಲ್ಲಾಪುರ ಸಂಪೂರ್ಣ ಜಲಾವೃತ: ಕೈಗಾ ಅಣು ವಿದ್ಯುತ್ ಸ್ಥಾವರದ ಸಿಬ್ಬಂದಿಯ ವಸತಿ ಸಂಕೀರ್ಣವಿರುವ ಮಲ್ಲಾಪುರ ಟೌನ್‌ಶಿಪ್ ಕೂಡ ಮಂಗಳವಾರ ಜಲಾವೃತವಾಯಿತು. ನದಿಯ ಸಮೀಪವಿರುವ ಎರಡು ವಸತಿಗೃಹಗಳ ನೆಲಮಹಡಿಯಲ್ಲಿ ಮೊಣಕಾಲುದ್ದ ನೀರು ನಿಂತು ವಾಹನಗಳು ನೀರಿನಲ್ಲಿ ಮುಳುಗಿದವು. ವಸತಿಗೃಹದಲ್ಲಿ ಇದ್ದವರು ಕೆಳಗೆ ಬರಲು ಸಾಧ್ಯವಾಗಲಿಲ್ಲ. ಕೊನೆಗೆ ದೋಣಿಗಳ ವ್ಯವಸ್ಥೆ ಮಾಡಲಾಯಿತು. ಇದೇರೀತಿ, ಮಲ್ಲಾಪುರ ಪೊಲೀಸ್ ಠಾಣೆಗೂ ನೀರು ಆವರಿಸಿತ್ತು.

ಮತ್ತಷ್ಟು ಮಳೆ ಸಾಧ್ಯತೆ: ಜಿಲ್ಲೆಯಲ್ಲಿ ಆ.11ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೇ ಆ.8 ಮತ್ತು 9ರಂದು ಭಾರಿ ಮಳೆಯಾಗುವ ಸಂಭವವಿದೆ. ಜೊತೆಗೆ ಪ್ರಬಲವಾದ ಗಾಳಿಯೂ ಬೀಸಬಹುದು ಎಂದು ಮುನ್ನೆಚ್ಚರಿಕೆ ನೀಡಿದೆ. 

Post Comments (+)