ಸೋಮವಾರ, ಸೆಪ್ಟೆಂಬರ್ 26, 2022
21 °C
ಅಣಶಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ

ಪದೇಪದೆ ಗುಡ್ಡ ಕುಸಿತ: ಜೊಯಿಡಾಕ್ಕೆ ಕಾರವಾರ ಮತ್ತಷ್ಟು ದೂರ

ಜ್ಞಾನೇಶ್ವರ ದೇಸಾಯಿ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ಅಣಶಿ ಘಟ್ಟದಲ್ಲಿ ಬೆಳಗಾವಿ– ಸದಾಶಿವಗಡ ರಾಜ್ಯ ಹೆದ್ದಾರಿಯಲ್ಲಿ ಪದೇಪದೆ ಆಗುತ್ತಿರುವ ಭೂಕುಸಿತವು, ತಾಲ್ಲೂಕಿನ ಜನರಿಗೆ ಹತ್ತಾರು ಸಮಸ್ಯೆ ತಂದಿಡುತ್ತಿದೆ. ಜಿಲ್ಲಾ ಕೇಂದ್ರ ಕಾರವಾರವು ಮತ್ತಷ್ಟು ದೂರವಾಗುವ ಆತಂಕ ಹೆಚ್ಚಿಸುತ್ತಿದೆ.

ಈಗಾಗಲೇ ಒಂದೂವರೆ ತಿಂಗಳ ಅವಧಿಯಲ್ಲಿ ಮೂರು ಬಾರಿ, ನಾಲ್ಕು ಕಡೆಗಳಲ್ಲಿ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿದಿದೆ.  ತಾತ್ಕಾಲಿಕವಾಗಿ ವಾಹನಗಳ ಸಂಚಾರ ಸ್ಥಗಿತವಾಗಿದೆ. ಜುಲೈ 7ರಿಂದ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಮಂಗಳವಾರ ಮತ್ತೆ ಒಂದು ಭಾಗದಲ್ಲಿ ಗುಡ್ಡ ಕುಸಿದು ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು. ಗುಡ್ಡ ಕುಸಿದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ‘ರಸ್ತೆ ಮತ್ತೆ ಬಂದ್ ಆದರೆ ನಮ್ಮ ಕಥೆ ಏನು’ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಅಣಶಿ ಘಟ್ಟ ಕುಸಿತವೇ ತಾಲ್ಲೂಕಿನಲ್ಲಿ ಚರ್ಚೆಯ ವಿಷಯವಾಗಿದೆ.

ಪ್ರತಿ ವರ್ಷ ನಾಗರಪಂಚಮಿ ಮುಗಿಯುತ್ತಿದ್ದಂತೆ ಭತ್ತದ ನಾಟಿ ಕಾರ್ಯ ಮುಗಿಸಿ ಗಣೇಶ ಚತುರ್ಥಿ ಹಬ್ಬದ ಖರ್ಚಿಗಾಗಿ ಹಣ ಹೊಂದಿಸಲು ಹಳ್ಳಿ ಜನರು ಗೋವಾದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಹಬ್ಬಕ್ಕೆ ಎರಡು ದಿನಗಳು ಇರುವಾಗ ಮನೆಗೆ ಮರಳಬೇಕಾದರೆ ಕಾರವಾರ ಹಾಗೂ ಗೋವಾದಿಂದ ತೆಂಗಿನಕಾಯಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ತರುತ್ತಾರೆ.

ಕಳೆದ ವರ್ಷ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿದು ಸುಮಾರು ತಿಂಗಳು ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆ ಕಹಿ ಘಟನೆ ನೆನಪಿಸಿ ಈ ಬಾರಿ ಜನರು ಗೋವಾ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸುಮ್ಮನೆ ಅಲ್ಲಿ ಹೋಗಿ ಆಮೇಲೆ ಸಮಸ್ಯೆ ಎದುರಿಸುವುದಕ್ಕಿಂತ ಇರುವುದರಲ್ಲೇ ಹೊಂದಾಣಿಕೆ ಮಾಡಿಕೊಂಡು, ಚೌತಿ ಹಬ್ಬ ಮಾಡಿದರಾಯಿತು ಎಂಬ ಲೆಕ್ಕಾಚಾರದಲ್ಲಿ ಜೊಯಿಡಾ ಹಳ್ಳಿಗರು ಇದ್ದಾರೆ.

ಜೊಯಿಡಾ, ಕುಂಬಾರವಾಡ, ಉಳವಿ ಹಾಗೂ ಅಣಶಿ ಭಾಗದ ಅನಾರೋಗ್ಯ ಪೀಡಿತರು ಜಿಲ್ಲಾ ಆಸ್ಪತ್ರೆಗೆ ಬಂದು ಹೆಚ್ಚಿನ ಚಿಕಿತ್ಸೆ ಪಡೆಯುತ್ತಾರೆ. ಪ್ರತಿ ದಿನ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಜನರು ಕೂಲಿ ಕೆಲಸಕ್ಕೆ ಕದ್ರಾ, ಮಲ್ಲಾಪುರಕ್ಕೆ ಬರುತ್ತಾರೆ. ಅಣಶಿ ಗುಡ್ಡದ ಕುಸಿತ ಇವರೆಲ್ಲರ ಆತಂಕಕ್ಕೆ ಕಾರಣವಾಗಿದೆ.

‘ಪ್ರತಿ ವರ್ಷ ಗದ್ದೆ ನಾಟಿ ಕೆಲಸ ಮುಗಿಸಿ ನಾವು ಗೋವಾ ಕೆಲಸಕ್ಕೆ ಹೋಗಿ ಸುಮಾರು 20– 25 ದಿನ ದುಡಿದು ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೆವು. ಆದರೆ, ಈ ವರ್ಷ ಅಣಶಿ ಘಟ್ಟ ಕುಸಿದರೆ ಮತ್ತೆ ಮರಳಲು ಸಮಸ್ಯೆ ಬರಬಹುದು ಎಂಬ ಆತಂಕವಿದೆ. ಹಾಗಾಗಿ ಈ ವರ್ಷ ಗೋವಾದಲ್ಲಿ ಕೆಲಸಕ್ಕೆ ಹೋಗಿಲ್ಲ’ ಎನ್ನುತ್ತಾರೆ ತಾಲ್ಲೂಕಿನ ನುಜ್ಜಿ ಪಾಟ್ನೆ ನಿವಾಸಿ ಮಹಾದೇವ ಶಾಬಾ ವೇಳಿಪ, ಹಾಗೂ ತೆಲೋಲಿಯ ರೋಹಿದಾಸ್ ಜಾನು ಗಾವಡಾ.

ಬಸ್‌ ಸಂಚಾರಕ್ಕೆ ಸಂಚಕಾರ:

ಜುಲೈ ಮೊದಲ ವಾರದಲ್ಲಿ ಭೂಕುಸಿತಕ್ಕೂ ಮೊದಲು ಕಾರವಾರದಿಂದ ಅಣಶಿ– ಜೊಯಿಡಾದ ಮೂಲಕ 11 ಬಸ್‌ಗಳು ನಿತ್ಯವೂ ಸಂಚರಿಸುತ್ತಿದ್ದವು. ಬೆಳಗಾವಿ,ವಿಜಯಪುರ, ಕೊಲ್ಲಾಪುರ, ಹುಬ್ಬಳ್ಳಿ, ಪುಣೆ ಸೇರಿದಂತೆ ವಿವಿಧ ನಗರಗಳಿಗೆ ಈ ಮಾರ್ಗದಿಂದ ಸಂಪರ್ಕ ಸಾಧ್ಯವಿತ್ತು. ಆದರೆ, ಸದ್ಯ ದಾಂಡೇಲಿಗೆ ಮಾತ್ರ ಎರಡು ಬಸ್‌ಗಳು ದಿನನಿತ್ಯ ಸಂಚರಿಸುತ್ತಿವೆ.

ಆರು ಬಸ್‌ಗಳು ದಿನನಿತ್ಯವವೂ ಸಂಚರಿಸುತ್ತಿದ್ದ ರಾಮನಗರ ಮಾರ್ಗದಲ್ಲಿ ಸದ್ಯ ಕಾರವಾರಕ್ಕೆ ಸಾಗಲು ಒಂದೂ ಬಸ್ ಇಲ್ಲ. ಗಣೇಶಗುಡಿ, ಕ್ಯಾಸಲ್ ರಾಕ್, ಜಗಲಪೇಟ್, ಅನಮೋಡ ಹಾಗೂ ರಾಮನಗರ ಭಾಗದ ಜನ ಪರದಾಡುತ್ತಿದ್ದಾರೆ. ಸದ್ಯ ಅವರಿಗೆ ಖಾಸಗಿ ಬಾಡಿಗೆ ವಾಹನಗಳೇ ಗತಿಯಾಗಿವೆ.

ಜೊಯಿಡಾದಿಂದ ಕಾರವಾರಕ್ಕೆ ಹೋಗಲು ಬೆಳಿಗ್ಗೆ 8ಕ್ಕೆ ಒಂದು ಬಸ್ ಇದೆ. ಅದು ತಪ್ಪಿದರೆ ಮತ್ತೆ ಬಸ್ ಇರುವುದು ಮಧ್ಯಾಹ್ನ 3.30ಕ್ಕೆ.

‘ಸಂಪೂರ್ಣ ನಿಷೇಧವಿಲ್ಲ’:

‘ಅಣಶಿ ಘಟ್ಟದಲ್ಲಿ ವಾಹನ ಸಂಚಾರವನ್ನು ಯಾವುದೇ ಕಾರಣಕ್ಕೂ ಸಂಪೂರ್ಣವಾಗಿ ನಿಷೇಧಿಸುವುದಿಲ್ಲ. ರಸ್ತೆಯಲ್ಲಿ ಗುಡ್ಡ ಕುಸಿದರೆ ಅದನ್ನು ತಕ್ಷಣದಲ್ಲೇ ತೆರವುಗೊಳಿಸುವ ಕಾರ್ಯ ಮಾಡಲಾಗುತ್ತದೆ. ಜನರ ಸುರಕ್ಷತೆಯ ದೃಷ್ಟಿಯಿಂದ ಈ ಮಾರ್ಗದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ರಸ್ತೆ ಬಂದ್ ಮಾಡಲಾಗುತ್ತದೆ ಎಂದು ಜನ ಆತಂಕ ಪಡುವುದು ಬೇಡ. ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು’ ಎಂದು ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೊಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು