ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಣೆನಾಲೆ ಶುದ್ಧಿಗೆ ಹೊಸ ತಂತ್ರಜ್ಞಾನ: ಕಾರವಾರ ನಗರಸಭೆ ಅನುಮೋದನೆ

ಕೊಳಚೆ ನೀರಿಗೆ ಪೈಪ್‌ಲೈನ್ ಅಳವಡಿಕೆ
Last Updated 26 ಏಪ್ರಿಲ್ 2022, 16:06 IST
ಅಕ್ಷರ ಗಾತ್ರ

ಕಾರವಾರ: ಕೋಣೆನಾಲೆಯ ಕೊಳಚೆ ನೀರಿನ ಶುದ್ಧೀಕರಣಕ್ಕೆ ಇನ್ನುಮುಂದೆ ಆಧುನಿಕ ತಂತ್ರಜ್ಞಾನ ಬಳಕೆಯಾಗಲಿದೆ. ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಯಿತು.

ಮಂಗಳೂರಿನ ಆಪಾವನಿ ಎನ್ವಿರಾನ್‌ಮೆಂಟ್ ಸೊಲ್ಯೂಷನ್ಸ್ ಸಂಸ್ಥೆಯು ಮೆಂಬ್ರೇನ್ ಬಯೊ ರಿಯಾಕ್ಟರ್ ಅಳವಡಿಸಲಿದೆ. ಸುಮಾರು ₹ 1.70 ಕೋಟಿ ವೆಚ್ಚವಾಗಲಿದೆ ಎಂದು ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ಮಾಹಿತಿ ನೀಡಿದರು. ಅಲ್ಲದೇ ನಾಲೆಯಲ್ಲಿ ಪೈಪ್‌ಲೈನ್ ಅಳವಡಿಸಿ ಅದರಲ್ಲಿ ಕೊಳಚೆ ನೀರು ಹರಿಯಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ₹ 38 ಲಕ್ಷ ವೆಚ್ಚದ ಈ ಕಾಮಗಾರಿಗೂ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಕೃತಕ ಬುದ್ಧಿಮತ್ತೆ ಬಳಕೆ:‘ಕೋಣೆನಾಲೆಯ ಶುದ್ಧೀಕರಣ ಘಟಕವನ್ನು ಜಪಾನ್‌ನಿಂದ ತರಿಸಲಾಗಿರುವ ಸಲಕರಣೆಗಳ ಮೂಲಕ ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ 1,600 ಕೆ.ಎಲ್‌.ಡಿ ಸಾಮರ್ಥ್ಯದ ಒಂದು ಘಟಕ ನಿರ್ಮಾಣವಾಗಿದೆ.ಒಟ್ಟು 1.60 ಎಂ.ಎಲ್‌.ಡಿ ನೀರನ್ನು ಶುದ್ಧೀಕರಿಸುವ ಘಟಕ ಇದಾಗಿದೆ’ ಎಂದುಆಪಾವನಿ ಎನ್ವಿರಾನ್‌ಮೆಂಟ್ ಸೊಲ್ಯೂಷನ್ಸ್ ಸಂಸ್ಥೆಯ ಇಂಜಿನಿಯರ್ ಸಭೆಗೆ ತಿಳಿಸಿದರು.

‘ಕೃತಕ ಬುದ್ಧಿಮತ್ತೆ ಬಳಸಿ ಇದು ಕಾರ್ಯನಿರ್ವಹಿಸುತ್ತದೆ. ನಗರಸಭೆಯಿಂದಲೇ ಅದರ ಕಾರ್ಯ ನಿಭಾಯಿಸಲು ಸಾಧ್ಯವಿದೆ. ಸಂಸ್ಥೆಯು ಐದು ವರ್ಷ ನಿರ್ವಹಣೆ ಮಾಡಲಿದೆ’ ಎಂದರು.

ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಅಧ್ಯಕ್ಷ ಡಾ.ಪಿಕಳೆ ಮಾತನಾಡಿ, ‘ವರದಿಯಲ್ಲಿ ತಿಳಿಸಿದಂತೆಯೇ ಕೆಲಸಗಳಾಗಬೇಕು. ಸೂಕ್ತ ರೀತಿಯಲ್ಲಿ ನಿರ್ವಹಣೆಯೂ ಆಗಬೇಕು’ ಎಂದು ತಾಕೀತು ಮಾಡಿದರು.

ಸದಸ್ಯರಾದ ಸಂದೀಪ ತಳೇಕರ್, ಮಕ್ಬುಲ್ ಶೇಖ್, ‘ನಗರದಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಿಸಲಾದ ಒಳಚರಂಡಿಗಳು ಸಂಪೂರ್ಣ ದುರಸ್ತಿಯಾಗಬೇಕಿದೆ. ಇದೇ ಸಂದರ್ಭದಲ್ಲಿ ನಗರದ ಎಲ್ಲ ವಾರ್ಡ್‌ಗಳಿಗೆ ಒಳಚರಂಡಿ ಕಲ್ಪಿಸಬೇಕು. ಈ ಕುರಿತು ನಗರಸಭೆಯಿಂದ ತಾಂತ್ರಿಕ ಅಧ್ಯಯನ ಕೈಗೊಂಡು, ವಿಶೇಷ ಅನುದಾನ ಮಂಜೂರಿಗೆ ಸರ್ಕಾರಕ್ಕೆ ಮನವಿ ಮಾಡಬೇಕು’ ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿ ಆರ್.ಪಿ.ನಾಯ್ಕ, ‘ನಗರದ ಒಳಚರಂಡಿ ಕಾಮಗಾರಿಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ತಿಳಿಸಲಾಗಿದೆ. ದುರಸ್ತಿಗೆ ₹ 1.70 ಕೋಟಿ ಹಾಗೂ ಹೊಸ ಕಾಮಗಾರಿಗೆ ₹ 16 ಕೋಟಿ ಪ್ರಸ್ತಾವ ಮಾಡಲಾಗಿದೆ’ ಎಂದರು.

ಸದಸ್ಯ ಮಕ್ಬೂಲ್ ಶೇಖ್ ಮಾತನಾಡಿ, ‘ನಗರದ ಜಿಲ್ಲಾ ಗ್ರಂಥಾಲಯದಲ್ಲಿ ವ್ಯವಸ್ಥೆಗಳು ಸರಿಯಿಲ್ಲ. ಜನರಿಂದ ಪಡೆಯುವ ತೆರಿಗೆ ಹಣ ಸದ್ಬಳಕೆಯಾಗುತ್ತಿಲ್ಲ’ ಎಂದು ಆಕ್ಷೇಪಿಸಿದರು. ಈ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಅಧ್ಯಕ್ಷ ಡಾ.ನಿತಿನ್ ಪಿಕಳೆ ತಿಳಿಸಿದರು.

ಸದಸ್ಯ ಸಂದೀಪ ತಳೇಕರ್ ಮಾತನಾಡಿ, ‘ನಗರದಲ್ಲಿ ವಾಹನ ನಿಲುಗಡೆ ನಿಯಮ ಉಲ್ಲಂಘಿಸಿದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಅದನ್ನು ಮಾಡದೇ ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸುವ ನಿಯಮ ಜಾರಿ ಮಾಡಬಾರದು’ ಎಂದು ಆಗ್ರಹಿಸಿದರು.

ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT