ಬುಧವಾರ, ಜನವರಿ 27, 2021
21 °C
ನಿಯಮ ಬಾಹಿರವಾಗಿ ನಿರ್ಮಾಣದ ವಿರುದ್ಧ ಕಾರವಾರ ನಗರಸಭೆಯ ಕ್ರಮ

297 ಅಕ್ರಮ ಕಟ್ಟಡಗಳಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನಗರದಲ್ಲಿ ಅನುಮತಿ ಪಡೆಯದೇ ನಿರ್ಮಾಣ ಮಾಡಲಾದ 297 ಕಟ್ಟಡಗಳನ್ನು ಗುರುತಿಸಲಾಗಿದೆ. ಅವುಗಳ ಮಾಲೀಕರಿಗೆ ನಗರಸಭೆಯಿಂದ ನೋಟಿಸ್ ಜಾರಿಯಾಗಿದೆ. ನಗರಸಭೆಯಿಂದ ಅನುಮತಿ ಪಡೆಯದೇ ನಿರ್ಮಿಸಿದ, ಹೆಚ್ಚಿನ ಮಹಡಿ ನಿರ್ಮಿಸಿದ ವಸತಿ ಹಾಗೂ ವಾಣಿಜ್ಯ ಕಟ್ಟಡಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ.

ಹಲವರು ಮೊದಲ ಮಹಡಿ ನಿರ್ಮಿಸಲು ಅನುಮತಿ ಪಡೆದಿದ್ದು, ಎರಡನೇ ಮಹಡಿ ನಿರ್ಮಿಸಿದ್ದಾರೆ. ಹೆಂಚಿನ ಮನೆಗಳ ನಿರ್ಮಾಣಕ್ಕೆ ಅನುಮತಿ ಪಡೆದು ಕಾಂಕ್ರೀಟ್ ಚಾವಣಿ ಅಳವಡಿಸುವುದು, ನಗರಸಭೆಯಿಂದ ಅನುಮತಿ ಪಡೆದ ವಿಸ್ತೀರ್ಣಕ್ಕಿಂತ ದೊಡ್ಡ ಕಟ್ಟಡವನ್ನು ನಿರ್ಮಿಸುವುದು, ಪಾರ್ಕಿಂಗ್ ವ್ಯವಸ್ಥೆ ನೀಡದಿರುವುದು ಹಾಗೂ ಅನುಮೋದಿತ ನಕ್ಷೆಯನ್ನು ಮೀರಿ ಕಟ್ಟಡ ನಿರ್ಮಿಸಿದರೆ ಅವುಗಳನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ.

ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ, ಅವುಗಳ ದುರಸ್ತಿಗೆ, ವಿಸ್ತೀರ್ಣ ಹೆಚ್ಚಿಸಲು ನಗರಸಭೆಯ ಅನುಮತಿ ಅಗತ್ಯ. ಹಲವರು ಮೊದಲ ಹಂತದ ಕಾಮಗಾರಿಗೆ ಮಾತ್ರ ಅನುಮತಿ ಪಡೆದುಕೊಳ್ಳುತ್ತಾರೆ. ಬಳಿಕ ಅಕ್ರಮವಾಗಿ ನಿರ್ಮಾಣ ಮಾಡುತ್ತಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಹಾಗೂ ನಗರಸಭೆಗೆ ಆದಾಯ ನಷ್ಟವಾಗುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. 

ಈ ಹಿಂದೆ ನಗರಸಭೆಯ ಪೌರಾಯುಕ್ತೆಯಾಗಿದ್ದ ಎಂ.ಪ್ರಿಯಾಂಗಾ ಅವರ ನಿರ್ದೇಶನದಂತೆ ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿಯಾಗಿದೆ. ಕೆಲವು ವರ್ಷಗಳ ಹಿಂದೆ ಗುರುತಿಸಲಾಗಿದ್ದ ಅಕ್ರಮ ಕಟ್ಟಡಗಳ ವಿರುದ್ಧ ಗೋಚರವಾಗುವಂಥ ಯಾವುದೇ ಕ್ರಮಗಳಾಗಿಲ್ಲ.

‘ಅಕ್ರಮ ಕಟ್ಟಡಗಳ ಮಾಲೀಕರಿಗೆ ನಗರಸಭೆ ಅಧಿಕಾರಿಗಳು ನೋಟಿಸ್ ನೀಡಿರುವುದು ಸರಿಯಾದ ಕ್ರಮ. ಆದರೆ, ಅಕ್ರಮವೆಂದು ಗುರುತಿಸಿದ ಕಟ್ಟಡಗಳಿಂದ ದ್ವಿಗುಣ ತೆರಿಗೆ ವಸೂಲಿ ಮಾಡುವ ಬಗ್ಗೆ ನಗರಸಭೆಯಲ್ಲಿ ಠರಾವು ಮಾಡಲಾಗಿದೆಯೇ? ಈ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದರೂ ಸಮರ್ಪಕ ಉತ್ತರ ಸಿಕ್ಕಿಲ್ಲ’ ಎಂದು ನಗರಸಭೆ ಸದಸ್ಯ ಸಂದೀಪ ತಳೇಕರ್ ಹೇಳಿದ್ದಾರೆ.

‘ಸ್ವಂತ ಜಾಗದಲ್ಲಿಯೇ ಕಟ್ಟಡ ನಿರ್ಮಾಣ, ಅವುಗಳ ದುರಸ್ತಿ, ವಿಸ್ತರಣೆ ಮಾಡುವುದಾದರೂ ನಗರಸಭೆಯ ಅನುಮತಿ ಕಡ್ಡಾಯ. ಹಲವು ಕಟ್ಟಡಗಳು ಸಕ್ರಮವಾಗಿದ್ದರೂ ಅನುಮತಿ ಪಡೆಯದೇ ದುರಸ್ತಿ ಹಾಗೂ ವಿಸ್ತರಣೆ ಮಾಡಲಾಗಿದೆ. ಹಾಗಾಗಿ ಅವುಗಳನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಸಕ್ರಮಗೊಳಿಸುವುದು ನಗರಸಭೆ ವ್ಯಾಪ್ತಿಯಲ್ಲಿ ಸಾಧ್ಯವಿಲ್ಲ’ ಎಂದು ನಗರಸಭೆ ಪ್ರಭಾರ ಪೌರಾಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

‘ಅಪಾರ್ಟ್‌ಮೆಂಟ್ ವಿರುದ್ಧ ಕ್ರಮವೇಕಿಲ್ಲ?’
‘ಮನೆಗಳ ದುರಸ್ತಿ ಮಾಡಿದರೂ ನಗರಸಭೆಯಿಂದ ನೋಟಿಸ್ ನೀಡಲಾಗಿದೆ. ಆದರೆ, ನಿಯಮಗಳನ್ನು ಮೀರಿ ನಿರ್ಮಿಸಲಾದ ಹಲವು ಅಪಾರ್ಟ್‌ಮೆಂಟ್‌ಗಳ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ನಗರಸಭೆ ಸದಸ್ಯ ಸಂದೀಪ ತಳೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಗರದಲ್ಲಿ ಹಲವು ಅಪಾರ್ಟ್‍ಮೆಂಟ್‍ಗಳಲ್ಲಿ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲಾಗಿದೆ. ಕೆಲವು ವಾಣಿಜ್ಯ ಸಂಕೀರ್ಣಗಳಿಗೆ ವಾಹನ ನಿಲುಗಡೆಯ ವ್ಯವಸ್ಥೆಯೇ ಇಲ್ಲ. ಅವುಗಳ ವಿರುದ್ಧ ಕ್ರಮ ವಹಿಸದಿರುವುದು ಯಾಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

***
ಪೌರಾಡಳಿತ ಕಾಯ್ದೆಯ ಸೆಕ್ಷನ್ 102 ಅಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ಕಟ್ಟಡಗಳ ಮಾಲೀಕರಿಂದ ದುಪ್ಪಟ್ಟು ಕರವನ್ನು ವಸೂಲಿ ಮಾಡಲಾಗಿದೆ.
–ಆರ್.ಪಿ.ನಾಯ್ಕ, ನಗರಸಭೆಯ ಪ್ರಭಾರ ಪೌರಾಯುಕ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು