ಕಾರವಾರದಲ್ಲಿ ‘ಮಗು ಸ್ನೇಹಿ ಕೋರ್ಟ್’ ಸ್ಥಾಪನೆ

ಶನಿವಾರ, ಜೂಲೈ 20, 2019
28 °C
ರಾಜ್ಯದ ಎರಡನೇ ನ್ಯಾಯಾಲಯ: ‘ಪೊಕ್ಸೊ’, ಅತ್ಯಾಚಾರ ಪ್ರಕರಣಗಳ ವಿಚಾರಣೆ

ಕಾರವಾರದಲ್ಲಿ ‘ಮಗು ಸ್ನೇಹಿ ಕೋರ್ಟ್’ ಸ್ಥಾಪನೆ

Published:
Updated:

ಕಾರವಾರ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳ ವಿಚಾರಣೆಗೆಂದೇ ನಗರದಲ್ಲಿ ಪ್ರತ್ಯೇಕವಾದ ‘ಮಗು ಸ್ನೇಹಿ ನ್ಯಾಯಾಲಯ’ ಶೀಘ್ರವೇ ಸ್ಥಾಪನೆಯಾಗಲಿದೆ. ಈ ಮಾದರಿಯಲ್ಲಿ ರಾಜ್ಯದಲ್ಲೇ ಎರಡನೇ ನ್ಯಾಯಾಲಯ ಇದಾಗಲಿದೆ. 

‘ಇಂತಹ ನ್ಯಾಯಾಲಯ ರಾಜ್ಯದಲ್ಲಿ ಸದ್ಯ ಬೆಂಗಳೂರಿನಲ್ಲಿ ಮಾತ್ರವಿದೆ. ಕಾರವಾರದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಹೊಸದಾಗಿ ಸ್ಥಾಪಿಸಲಾಗುವುದು. ಇದಕ್ಕಾಗಿ ₹ 41 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಮುಂದಿನ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ ಇಲ್ಲಿ ಕಲಾಪ ಆರಂಭವಾಗಬಹುದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಮಂಗಳವಾರ ಮಾಹಿತಿ ನೀಡಿದರು.

ಏನಿದರ ವಿಶೇಷ?: ‘ಪೊಕ್ಸೊ’ ಮತ್ತು ಅತ್ಯಾಚಾರದಂತಹ ಪ್ರಕರಣಗಳ ವಿಚಾರಣೆ ಈ ನ್ಯಾಯಾಲಯದಲ್ಲಿ ನಡೆಯಲಿದೆ. ಸಂತ್ರಸ್ತ ಮಗು ಮತ್ತು ಅದರ ಪೋಷಕರು ಮಾನಸಿಕ ಒತ್ತಡ ರಹಿತ ವಾತಾವರಣದಲ್ಲಿ ಕಲಾಪಕ್ಕೆ ಹಾಜರಾಗುವಂತೆ ಇಲ್ಲಿ ಸೌಲಭ್ಯ ಇರಲಿದೆ.

‘ಕಲಾಪದ ಕೊಠಡಿಗೆ ಒಂದೇ ಬದಿಯಿಂದ ನೋಡಬಹುದಾದ ಗಾಜನ್ನು ಅಳವಡಿಸಿ ವಿಭಜಿಸಲಾಗುತ್ತದೆ. ಅದರ ಒಂದು ಭಾಗದಲ್ಲಿ ಸಂತ್ರಸ್ತ ಮಗು ಮತ್ತು ಪೋಷಕರು ಇರುತ್ತಾರೆ. ಅವರಿಗೆ ಕಲಾಪ ನಡೆಯುವ ಜಾಗ ಕಾಣಿಸುವುದಿಲ್ಲ. ನ್ಯಾಯಾಧೀಶರು, ವಕೀಲರು ಇರುವ ಜಾಗದಲ್ಲಿ ಆರೋಪಿಯ ಕಟಕಟೆ ಇರುತ್ತದೆ. ಅಲ್ಲಿರುವವರು ಮಗು ಮತ್ತು ಪೋಷಕರನ್ನು ನೋಡಬಹುದು’ ಎಂದು ವಿವರಿಸಿದರು.

ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಸ್ಥಾಪಿಸಲಾಗಿರುವ ‘ಮಗು ಸ್ನೇಹಿ ನ್ಯಾಯಾಲಯ’ದ ಮಾದರಿಯಲ್ಲೇ ಕಾರವಾರದಲ್ಲೂ ಕಾಮಗಾರಿ ನಡೆಯಲಿದೆ ಎಂದೂ ಟಿ.ಗೋವಿಂದಯ್ಯ ಹೇಳಿದರು.

ಬೆಂಗಳೂರಿನಲ್ಲಿ ಹೇಗಿದೆ?: ಮಗುವನ್ನು ಕಲಾಪಕ್ಕೆ ಕರೆದುಕೊಂಡು ಬರಲು ಪ್ರತ್ಯೇಕ ದಾರಿಯಿರುತ್ತದೆ. ಇದು ನಿರ್ಬಂಧಿತ ಪ್ರದೇಶವಾಗಿದ್ದು, ನ್ಯಾಯಾಧೀಶರು, ಪೋಷಕರು ಮತ್ತು ಮಗುವನ್ನು ಹೊರತುಪಡಿಸಿ ಮತ್ಯಾರಿಗೂ ಪ್ರವೇಶಾವಕಾಶ ಇರುವುದಿಲ್ಲ. ಇಲ್ಲಿಂದ ವಿಶ್ರಾಂತಿ ಕೊಠಡಿಗೆ ತಲುಪಬಹುದು. ಆಟಿಕೆಗಳು, ಪುಸ್ತಕಗಳು, ಬಣ್ಣ ಬಣ್ಣದ ಚಿತ್ತಾರ ಮೂಡಿಸಿದ ಗೋಡೆ ಇರುವ ಕೊಠಡಿ ಇದಾಗಿರುತ್ತದೆ. ಪ್ರಕರಣದ ವಿಚಾರಣೆ ಆರಂಭವಾದ ಬಳಿಕ ಮಗುವನ್ನು ಗಾಜಿನ ಪೆಟ್ಟಿಗೆಗೆ ಕರೆದುಕೊಂಡು ಬರಲಾಗುತ್ತದೆ. ಅಲ್ಲಿಂದಲೇ ವಿಚಾರಣೆ ನಡೆಯುತ್ತದೆ. 

ಕೌಟುಂಬಿಕ ನ್ಯಾಯಾಲಯ: ಕೌಟುಂಬಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ನಗರದಲ್ಲಿ ಕುಟುಂಬ ನ್ಯಾಯಾಲಯವೂ ಸ್ಥಾಪನೆಯಾಗಲಿದೆ. ಇದನ್ನು ಜಿಲ್ಲಾ ನ್ಯಾಯಾಲಯ ಕಟ್ಟಡದ ಆವರಣದಲ್ಲೇ ಆರಂಭಿಸುವ ಉದ್ದೇಶವಿದೆ. ಇದಕ್ಕೂ ಪ್ರತ್ಯೇಕ ಜಿಲ್ಲಾ ನ್ಯಾಯಾಧೀಶರು ನೇಮಕವಾಗಲಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಸುಮಾರು ಎರಡು ಸಾವಿರ ಬಾಕಿಯಿದೆ ಎಂದು ಟಿ.ಗೋವಿಂದಯ್ಯ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !