ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಕಾರವಾರ: ಮರಿ ಕಳೆದುಕೊಂಡ ಹೆಣ್ಣು ಮಂಗನಿಂದ ಕಂಡ ಕಂಡವರ ಮೇಲೆ ಆಕ್ರೋಶ

ಮರಿ ಕಳೆದುಕೊಂಡ ಹೆಣ್ಣು ಮಂಗನ ದಾಳಿಯಿಂದ ಬೆಚ್ಚಿದ ‘ಕಿನ್ನರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ಕಿನ್ನರ ಗ್ರಾಮದ ದಿಗಾಳಿಯಲ್ಲಿ ಸುಮಾರು 15 ದಿನಗಳಿಂದ ಕೋತಿಯೊಂದರ (ಲಂಗೂರ) ಕಾಟ ಮಿತಿ ಮೀರಿದೆ. ಕಂಡಕಂಡವರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸುತ್ತಿದೆ. ಇದರಿಂದ ಭಯಗೊಂಡಿರುವ ಗ್ರಾಮಸ್ಥರು, ಕೆಲವು ದಿನಗಳಿಂದ ದೊಣ್ಣೆಗಳನ್ನು ಹಿಡಿದುಕೊಂಡು ಅದನ್ನು ಕಾಡಿಗಟ್ಟಲು ಯತ್ನಿಸುತ್ತಿದ್ದಾರೆ.

ಮನೆಯಂಗಳದಲ್ಲಿ ನಿಂತಿರುವವರು, ಮಗು, ದಾರಿಯಲ್ಲಿ ಹೋಗುತ್ತಿರುವವರು.. ಹೀಗೆ ತನ್ನ ಕಣ್ಣಿಗೆ ಕಂಡವರ ಮೇಲೆ ದಾಳಿ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಕಾಣಿಸಿಕೊಂಡಾಗ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಓಡಿಸಿದ್ದರು. ಭಾನುವಾರ ಮತ್ತೆ ಗುಂಪಿನೊಂದಿಗೆ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ಬೆಳಿಗ್ಗೆ ಅಂಗವಿಕಲರೊಬ್ಬರ ಕಾಲಿಗೆ ಬಲವಾಗಿ ಕಚ್ಚಿ ಗಾಯಗೊಳಿಸಿದೆ. ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

‘ಇತರ ಮಂಗಗಳು ಗುಂಪಿನಲ್ಲಿದ್ದರೂ ಒಂದೇ ಹಿಂದಿನಿಂದ ಬಂದು ದಾಳಿ ಮಾಡುತ್ತಿದೆ. ನಾಲ್ಕೈದು ಮಂದಿ ಜೊತೆಗಿದ್ದರೂ ಅದು ಹೆದರುತ್ತಿಲ್ಲ. ಗ್ರಾಮಸ್ಥರಿಗೆ ಒಂದು ವಾರದಿಂದ ನೆಮ್ಮದಿಯೇ ಇಲ್ಲವಾಗಿದೆ. ದೊಣ್ಣೆ ಹಿಡಿದು ಓಡಿಸುವುದೇ ಇಡೀ ದಿನದ ಕೆಲಸವಾಗಿದೆ’ ಎಂದು ಗ್ರಾಮಸ್ಥ ಸಂದೀಪ ನಾಯ್ಕ ಹೇಳಿದರು.

‘ಕಾಡಿಗಟ್ಟಲು ಪ್ರಯತ್ನ’:

‘ಕಿನ್ನರ ಗ್ರಾಮದಲ್ಲಿ ಲಂಗೂರವನ್ನು ಸೆರೆ ಹಿಡಿಯಲು ಯತ್ನಿಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿಯ ಮೇಲೂ ದಾಳಿ ಮಾಡಿದೆ. ಅದು ಹೆಚ್ಚಾಗಿ ಕಾಣಿಸಿಕೊಳ್ಳುವ ಕೆಲವೆಡೆ ಬಾಳೆಹಣ್ಣು ಹಾಕಿ ಸೆರೆ ಹಿಡಿಯಲು ಕಾಯಲಾಗುತ್ತಿದೆ. ಅರಿವಳಿಕೆ ಚುಚ್ಚುಮದ್ದು ನೀಡಲೂ ಪ್ರಯತ್ನಿಲಾಗುತ್ತಿದೆ. ಆದರೆ, ಕೋತಿ ಇತರ ಪ್ರಾಣಿಗಳಂತೆ ಒಂದೇ ಕಡೆ ಕೆಲವು ಸೆಕೆಂಡ್‌ಗಳಷ್ಟೂ ಸಮಯ ಇರುವುದಿಲ್ಲ. ಇದು ಸವಾಲಿನ ಕಾರ್ಯವಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ವಲಯ ಅರಣ್ಯಾಧಿಕಾರಿ ಜಿ.ವಿ.ನಾಯ್ಕ ಪ್ರತಿಕ್ರಿಯಿಸಿ, ‘ಕೋತಿಯನ್ನು ಎರಡು ದಿನಗಳ ಹಿಂದೆಯಷ್ಟೇ ಕಾಡಿಗೆ ಅಟ್ಟಲಾಗಿತ್ತು. ಮತ್ತೆ ಬಂದಿದ್ದು, ಸ್ಥಳದಲ್ಲೇ ಇದ್ದು ಅದನ್ನು ಕಾಡಿಗೆ ಅಟ್ಟಲು ಯತ್ನಿಸುತ್ತಿದ್ದೇವೆ. ಅದರ ಮರಿಯನ್ನು ನಾಯಿ ಹಿಡಿದಿತ್ತು. ಆದರೆ, ಮನುಷ್ಯರೇ ಕೊಂದಿರಬಹುದು ಎಂಬ ಅನುಮಾನದಿಂದ ಅದು ದಾಳಿ ಮಾಡುತ್ತಿರುವ ಅನುಮಾನವಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು