ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ತಿಂಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್

ಅರ್ಹ ಮೀನುಗಾರರಿಗೆ ಶೂನ್ಯ ಬಡ್ಡಿ ದರದ ಸಾಲ ನೀಡಲು ಸಚಿವರ ನಿರ್ದೇಶನ
Last Updated 16 ಜೂನ್ 2020, 15:42 IST
ಅಕ್ಷರ ಗಾತ್ರ

ಕಾರವಾರ: ‘ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಎಲ್ಲ ಐದು ಸಾವಿರ ಮೀನುಗಾರರಿಗೂ ಇನ್ನೆರಡು ತಿಂಗಳಲ್ಲಿ ಕಾರ್ಡ್ ವಿತರಿಸಲಾಗುವುದು’ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ಮೀನುಗಾರರಿಗೆ ಮತ್ತು ಮೀನುಗಾರ ಮಹಿಳೆಯರಿಗೆ ಬ್ಯಾಂಕ್‌ಗಳಿಂದ ನೀಡಲಾಗುವ ಸಾಲ ಸೌಲಭ್ಯದ ಕುರಿತು ನಗರದಲ್ಲಿ ಮಂಗಳವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಸಲ್ಲಿಕೆಯಾದ ಅರ್ಜಿಗಳ ಪೈಕಿ2,500 ಅರ್ಜಿಗಳನ್ನು ಇಲಾಖೆಯ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ.ಶೂನ್ಯ ಬಡ್ಡಿ ದರದ ಸಾಲಕ್ಕಾಗಿ 11,500 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೇವಲ 1,800 ಮಂದಿಗೆ ಸಾಲ ಮಂಜೂರಾಗಿದೆ ಎಂಬ ದೂರು ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಹಾಗೂ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಇನ್ನೆರಡು ತಿಂಗಳಲ್ಲಿಎಲ್ಲ ಅರ್ಜಿಗಳನ್ನೂ ಪರಿಶೀಲಿಸಿ ಅರ್ಹರಿಗೆ ಸಾಲ ಕೊಡುವುದಾಗಿ ಬ್ಯಾಂಕ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರದಿಂದ ಬರಲಿರುವ ಆರ್ಥಿಕ ಪ್ಯಾಕೇಜ್‌ನಲ್ಲಿ ಸುಮಾರು ₹ 3,500 ಕೋಟಿ ರಾಜ್ಯಕ್ಕೆ ಸಿಗಲಿದೆ. ಅದನ್ನು ಬಳಸಿ ಕರಾವಳಿಯಲ್ಲಿ ಮೀನುಗಾರಿಕೆ ಅಭಿವೃದ್ಧಿ ಮಾಡಲಾಗುವುದು. ರಾಜ್ಯದ ಸುಮಾರು 26 ಸಾವಿರ ಕೆರೆಗಳಲ್ಲಿ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಕಾರವಾರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಮೀನು ಮಾರುಕಟ್ಟೆಯಲ್ಲಿ ಈಗ ಶೇ 50ರಷ್ಟು ಮಾರಾಟಗಾರರಿಗೆ ಸ್ಥಳಾವಕಾಶವಿದೆ.ಉಳಿದಿರುವ ಜಾಗಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ತಡೆಯಾಜ್ಞೆಯಿದೆ. ನ್ಯಾಯಾಲಯದ ಮೊರೆ ಹೋದವರನ್ನು ಜನಪ್ರತಿನಿಧಿಗಳ ಸಲಹೆ ಪಡೆದು ಸಂಪರ್ಕಿಸಲು ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ತಡೆಯಾಜ್ಞೆ ತೆರವು ಮಾಡಿ, ಮತ್ತೊಂದಷ್ಟುಅನುದಾನ ಬಳಸಿಕೊಂಡು ಎಲ್ಲಮೀನುಗಾರಿಕಾ ಮಹಿಳೆಯರಿಗೆ ಕೂರಲು ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

ಖಾಸಗಿ ಮಳಿಗೆಗೆ ನಿರ್ಬಂಧ:‘ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ವಿವಿಧೆಡೆ ಮೀನು ಮಾರುಕಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಕೆಲವು ಕಡೆಗಳಲ್ಲಿ ಇವುಗಳಿಗೆ ಗ್ರಾಹಕರ ಸಂಖ್ಯೆ ಕಡಿಮೆಯಿರುವುದು ಗಮನಕ್ಕೆ ಬಂದಿದೆ. ಮಾರುಕಟ್ಟೆಗಳ ಸಮೀಪದಲ್ಲೇ ಕೆಲವರು ಮೀನು ಮಾರಾಟ ಮಳಿಗೆ ಆರಂಭಿಸಿದ ಕಾರಣ ಸಮಸ್ಯೆಯಾಗಿದೆ. ಇದನ್ನು ತಡೆಯಲು ನಿಗಮದ ಮಾರುಕಟ್ಟೆಯಿಂದ ಇಂತಿಷ್ಟು ದೂರದಲ್ಲಿ ಖಾಸಗಿ ಮಳಿಗೆಗಳನ್ನು ತೆರೆಯಬಾರದು ಎಂದು ನಿರ್ಬಂಧಿಸಲು ಚಿಂತನೆ ನಡೆದಿದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಸಹವರ್ತಿ ಬ್ಯಾಂಕ್ ವ್ಯವಸ್ಥಾಪಕಪಿ.ಎಂ.ಪಿಂಜರ್, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮೀನುಗಾರಿಕೆ ಒಕ್ಕೂಟದ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉತ್ತರ ಕನ್ನಡ ಮೀನುಗಾರರ ಒಕ್ಕೂಟದ ಅಧ್ಯಕ್ಷ ಗಣಪತಿ ಮಾಂಗ್ರೆ, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ಮೀನುಗಾರರ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT