‘ಫೇಸ್‌ಬುಕ್’ನಲ್ಲಿ ‘ಅಭ್ಯರ್ಥಿಗಳ ಸಂಪರ್ಕ’ ಸಾಮಾಜಿಕ ಜಾಲತಾಣದಲ್ಲಿ ನೂತನ ವ್ಯವಸ್ಥೆ

ಭಾನುವಾರ, ಏಪ್ರಿಲ್ 21, 2019
26 °C
ಲೋಕಸಭಾ ಚುನಾವಣೆ

‘ಫೇಸ್‌ಬುಕ್’ನಲ್ಲಿ ‘ಅಭ್ಯರ್ಥಿಗಳ ಸಂಪರ್ಕ’ ಸಾಮಾಜಿಕ ಜಾಲತಾಣದಲ್ಲಿ ನೂತನ ವ್ಯವಸ್ಥೆ

Published:
Updated:
Prajavani

ಕಾರವಾರ: ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ ತನ್ನ ಬಳಕೆದಾರರಿಗೆ ಸರಳವಾಗಿ ತಲುಪಿಸುತ್ತಿದೆ. ಜಾಲತಾಣದಲ್ಲಿರುವ ‘ಅಭ್ಯರ್ಥಿಗಳ ಸಂಪರ್ಕ’ ವ್ಯವಸ್ಥೆ ಕಣದಲ್ಲಿರುವ ಹುರಿಯಾಳುಗಳನ್ನು ಪರಿಚಯಿಸುತ್ತಿದೆ.

ಹತ್ತು ಹಲವು ಅಭ್ಯರ್ಥಿಗಳಿರುವ ಕ್ಷೇತ್ರಗಳಲ್ಲಿ ಯಾರು, ಯಾವ ‍ಪಕ್ಷದಿಂದ ಸ್ಪರ್ಧಿಸಿದ್ದಾರೆ ಎಂಬ ಬಗ್ಗೆ ಮತದಾರರಿಗೆ ಗೊಂದಲ ಉಂಟಾಗುತ್ತದೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಜೊತೆಗೆ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳ ಮಾಹಿತಿಯೂ ಇದರಲ್ಲಿದೆ.

‘ನ್ಯೂಸ್‌ಫೀಡ್’: ‘ನಿಮ್ಮ ಕ್ಷೇತ್ರಗಳ ಅಭ್ಯರ್ಥಿಗಳನ್ನು ತಿಳಿಯಿರಿ’ ಎಂಬ ನೆನಪೋಲೆಯು ಫೇಸ್‌ಬುಕ್‌ನ ‘ನ್ಯೂಸ್‌ಫೀಡ್‌’ನಲ್ಲಿ ಆಗಾಗ ಬರುತ್ತಿದೆ. ಇದರಲ್ಲಿರುವ ‘ಅಭ್ಯರ್ಥಿಗಳನ್ನು ನೋಡಿ’ ಎಂಬ ಆಯ್ಕೆಯನ್ನು ಒತ್ತಿದರೆ, ಕ್ಷೇತ್ರದಲ್ಲಿನ ಎಲ್ಲ ಅಭ್ಯರ್ಥಿಗಳ ಪಟ್ಟಿ ಬರಲಿದೆ. ಅದರಲ್ಲಿ ಅವರ ಪಕ್ಷದ ಜತೆಗೆ ಹೆಸರು ಇರಲಿದೆ. ಕೆಲವರ ಫೋಟೊಗಳನ್ನು ಕೂಡ ಫೇಸ್‌ಬುಕ್ ಅಳವಡಿಸಿದೆ.

ಇಲ್ಲಿ ಅಭ್ಯರ್ಥಿಯ ಹೆಸರಿನ ಆಯ್ಕೆಯನ್ನು ಒತ್ತಿದರೆ, ಈಗಾಗಲೇ ಅಭ್ಯರ್ಥಿಯು ಬಳಸುತ್ತಿರುವ ಫೇಸ್‌ಬುಕ್ ಪುಟ ತೆರೆದುಕೊಳ್ಳಲಿದೆ. ಅದರಲ್ಲಿ ಅವರು ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದರೆ ಫೇಸ್‌ಬುಕ್‌ನ ‘ನ್ಯೂಸ್‌ಫೀಡ್‌’ನಲ್ಲಿ ಕಾಣಿಸಲಿದೆ. ಫೇಸ್‌ಬುಕ್ ಖಾತೆ ಇಲ್ಲದವರ ಹೆಸರು ಹಾಗೂ ಪಕ್ಷದ ಹೆಸರನ್ನು ಫೇಸ್‌ಬುಕ್ ತೋರಿಸುತ್ತಿದೆ.

‘ತಪ್ಪಿದ್ದರೆ ಸಲಹೆ ನೀಡಿ’: ಫೇಸ್‌ಬುಕ್‌ನಲ್ಲಿ ಅಭ್ಯರ್ಥಿಗಳ ಪಟ್ಟಿ ತಪ್ಪಿದ್ದರೆ, ಮಾಹಿತಿಗಳು ಅಪೂರ್ಣವಾಗಿದ್ದರೆ ಅಥವಾ ಬಿಟ್ಟು ಹೋಗಿರುವ ಅಭ್ಯರ್ಥಿಯನ್ನು ಸೇರಿಸಲು ಸಲಹೆಯನ್ನು ನೀಡಲೂ ಬಳಕೆದಾರರಿಗೆ ಅವಕಾಶ ಕಲ್ಪಿಸಲಾಗಿದೆ.

‘ನ್ಯೂಸ್‌ಫೀಡ್‌’ನಲ್ಲಿ ಕಾಣಿಸುವ ಅಭ್ಯರ್ಥಿಯ ಪ್ರೊಫೈಲ್‌ನ ಬಲಭಾಗದಲ್ಲಿ ಇರುವ ‘ರಿಪೋರ್ಟ್’ ಎಂಬ ಆಯ್ಕೆ ಒತ್ತಿದರೆ, ಇನ್ನೊಂದು ಪುಟ ತೆರೆದುಕೊಳ್ಳಲಿದೆ. ಅಲ್ಲಿ, ಬಳಕೆದಾರರು ಸಲಹೆಗಳನ್ನು ನೀಡಬಹುದು. ಅದನ್ನು ಫೇಸ್‌ಬುಕ್ ಪರಿಶೀಲಿಸಿ (ರಿವ್ಯೂ), ಸರಿ ಇದ್ದರೆ ಅದನ್ನು ಸೇರಿಸಲಿದೆ.

ಫೇಸ್‌ಬುಕ್‌ನಿಂದ ತಿರಸ್ಕಾರ; ಆರೋಪ: ‘ನಮ್ಮ ವೈಯಕ್ತಿಕ ಖಾತೆಯಿಂದ ಬಿಜೆಪಿಯ ವಿರುದ್ಧವಾದ ಪೋಸ್ಟ್‌ಗಳನ್ನು ಹಾಕಿದರೆ ಅದನ್ನು ಫೇಸ್‌ಬುಕ್ ತಿರಸ್ಕರಿಸುತ್ತಿದೆ. ‘ನಿಮ್ಮ ಪೋಸ್ಟ್‌ ನಮ್ಮ ಸಮುದಾಯ ಮಾನದಂಡಗಳ ವಿರುದ್ಧವಾಗಿದೆ’ ಎಂದು ಆ ಪೋಸ್ಟ್‌ ಅನ್ನು ಯಾರೂ ನೋಡಲಾಗದಂತೆ ಮುಚ್ಚಿಡುತ್ತಿದೆ’ ಎಂದು ಬಳಕೆದಾರ ರಮಾನಂದ ಅಂಕೋಲಾ ಆರೋಪಿಸುತ್ತಾರೆ.

ಪಕ್ಷವೊಂದರ ಸಾಮಾಜಿಕ ಜಾಲತಾಣದ ನಿರ್ವಹಣೆ ಮಾಡುತ್ತಿರುವರೊಬ್ಬರು ‘ಪ್ರಜಾವಾಣಿ’ ಜತೆ ಮಾತನಾಡಿ, ‘ಬಿಜೆಪಿಗೆ ಎದುರಾಳಿಯಾಗಿರುವ ಪಕ್ಷದ ಅಭ್ಯರ್ಥಿಗಳ ಪುಟಗಳನ್ನು (ಪೇಜ್‌) ಫೇಸ್‌ಬುಕ್ ತಡೆಹಿಡಿದಿದೆ. ಹಣ ಕೊಟ್ಟರೂ ಪೋಸ್ಟ್‌ ಅನ್ನು ‘ಬೂಸ್ಟ್’ (ಪ್ರಾಯೋಜಿತ ಪ್ರಸಾರ) ಮಾಡಲಾಗುತ್ತಿಲ್ಲ. ಅಭ್ಯರ್ಥಿ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರದಲ್ಲಿ ತಿಳಿಸಿದ ಖಾತೆಯನ್ನು ಹೊರತುಪಡಿಸಿ ಇತರ ಖಾತೆಗಳಿಂದ ಪೋಸ್ಟ್‌ಗಳನ್ನು ‘ಬೂಸ್ಟ್’ ಮಾಡಲು ಮುಂದಾದರೆ ತಕ್ಷಣ ಅನುಮತಿ ಸಿಗುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !