ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈಯಲ್ಲಿ ಕೃಷಿ ಮಾಹಿತಿಗೆ ‘ಕೆವಿಕೆ ಆ್ಯಪ್’

ಲಾಕ್‌ಡೌನ್‌ ವೇಳೆ ಆ್ಯಪ್‌ನಲ್ಲಿ ನೋಂದಣಿ ಪ್ರಮಾಣ ಹೆಚ್ಚಳ
Last Updated 29 ಜೂನ್ 2020, 16:00 IST
ಅಕ್ಷರ ಗಾತ್ರ

ಶಿರಸಿ: ರೈತರು ಕೃಷಿ ಸಂಬಂಧಿತ ಸಲಹೆ ನೀಡುವ ‘ಕೆವಿಕೆ’ ಮೊಬೈಲ್ ಆ್ಯಪ್ ಇನ್ನಷ್ಟು ಚುರುಕುಗೊಂಡಿದೆ. ಕೋವಿಡ್ 19 ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ರೈತರು ಮಾಹಿತಿ ಸಂಗ್ರಹಿಸಲು ಕೃಷಿ ವಿಜ್ಞಾನ ಕೇಂದ್ರಕ್ಕೆ ಬರಬೇಕಾಗಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಕೃಷಿ ವಿಜ್ಞಾನ ಕೇಂದ್ರಗಳು ಒದಗಿಸುವ ಮಾಹಿತಿಯನ್ನು ಮೊಬೈಲ್‌ ಮೂಲಕವೇ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಭಾರತೀಯ ಅನುಸಂಧಾನ ಪರಿಷತ್ ವಿಸ್ತರಣಾ ವಿಭಾಗವು ಆ್ಯಂಡ್ರಾಯ್ಡ್ ಆಧಾರಿತ ಮೊಬೈಲ್ ಆ್ಯಪ್‌ ನಿರ್ವಹಣೆ ಮಾಡುತ್ತಿದೆ. ಈ ಆ್ಯಪ್ ಅಭಿವೃದ್ಧಿಪಡಿಸಿ, ನಾಲ್ಕೈದು ವರ್ಷಗಳು ಕಳೆದರೂ, ಕೋವಿಡ್ 19 ಲಾಕ್‌ಡೌನ್ ಸಂದರ್ಭದಲ್ಲಿ ಈ ಆ್ಯಪ್ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಜಿಲ್ಲೆಯಲ್ಲಿ 75ಕ್ಕೂ ಹೆಚ್ಚು ಜನರು ಒಂದು ತಿಂಗಳಲ್ಲಿ ಈ ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರ ಮತ್ತು ರೈತ ಸಮುದಾಯಗಳ ನಡುವೆ ಈ ಆ್ಯಪ್ ಕೊಂಡಿಯಾಗಿ ಕೆಲಸ ಮಾಡುತ್ತದೆ. ರೈತರಿಗೆ ಕೆವಿಕೆಗೆ ಬರಲು ದೂರವಾದರೆ ಅಥವಾ ತೊಂದರೆಯಾದರೆ ಈ ಆ್ಯಪ್ ಮೂಲಕ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್ ಮತ್ತು ಕೆವಿಕೆ ಪೋರ್ಟಲ್‌ನಲ್ಲಿ (https://kvk.icar.gov.in/) ಇದು ಲಭ್ಯವಿದೆ. ರೈತರು ಹೆಸರು, ವಿಳಾಸ, ರಾಜ್ಯ, ಜಿಲ್ಲೆ ಮತ್ತು ಮೊಬೈಲ್ ಸಂಖ್ಯೆ ನಮೂದಿಸುವ ಮೂಲಕ ನೋಂದಾಯಿಸಿಕೊಳ್ಳಬೇಕು. ಇದರಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದ ಪ್ರತ್ಯೇಕ ಆಯ್ಕೆ ಕೂಡ ಇರುತ್ತದೆ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರ ತಾಂತ್ರಿಕ ಅಧಿಕಾರಿ ಅನ್ನಪೂರ್ಣಾ ನೀರಲಗಿ.

‘ಸೌಲಭ್ಯ, ವೈಜ್ಞಾನಿಕ ಕೈಪಿಡಿ, ಮಾರುಕಟ್ಟೆ ಬೆಲೆ, ಸ್ಥಳೀಯ ಬೆಳೆಗಳು, ಬಗ್ಗೆ ಇದರಲ್ಲಿ ಮಾಹಿತಿಗಳಿರುತ್ತವೆ. ರೈತರು ಪ್ರಶ್ನೆಯನ್ನು ಕಳುಹಿಸಿ, ವಿಜ್ಞಾನಿಗಳಿಂದ ಉತ್ತರ ಪಡೆದುಕೊಳ್ಳಬಹುದು. ಅದನ್ನು ಪಠ್ಯ, ವಿಡಿಯೊ, ಚಿತ್ರ, ಧ್ವನಿ ಯಾವುದರಲ್ಲಿ ಬೇಕಾದರೂ ಕಳುಹಿಸುವ ಆಯ್ಕೆ ನೀಡಲಾಗಿದೆ. ಕೆವಿಕೆಯಲ್ಲಿ ನಡೆಯುವ ಕಾರ್ಯಕ್ರಮ, ತರಬೇತಿ, ಪ್ರಾತ್ಯಕ್ಷಿಕೆಗಳ ವಿವರ ಸಹ ಇಲ್ಲಿಯೇ ಲಭ್ಯವಾಗುತ್ತದೆ. ಈ ಹಿಂದೆ ಜಿಲ್ಲೆಯಲ್ಲಿ ಕೇವಲ 25 ಜನರು ಈ ಆ್ಯಪ್ ಬಳಸುತ್ತಿದ್ದರು. ಈಗ ಈ ಸಂಖ್ಯೆ 95 ದಾಟಿದೆ. ಹೆಚ್ಚು ರೈತರನ್ನು ತಲುಪಲು ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT