ಸೋಮವಾರ, ಸೆಪ್ಟೆಂಬರ್ 20, 2021
21 °C
ಹೂಳಿನಲ್ಲಿ ಮುಚ್ಚಿಹೋದವು ಹಲವು

ದಾಖಲೆಯಲ್ಲೇ ಉಳಿದ ಹತ್ತಾರು ಕೆರೆಗಳು; ಸರ್ಕಾರಿ ಲೆಕ್ಕದಲ್ಲಿ 52

ರಾಘವೇಂದ್ರ ಭಟ್ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ತಾಲ್ಲೂಕಿನಲ್ಲಿ ಸರ್ಕಾರಿ ಲೆಕ್ಕದಲ್ಲಿ 52 ಕೆರೆಗಳಿವೆ. ಆದರೆ, ಅವುಗಳಲ್ಲಿ ಬರೀ ಹೂಳು ತುಂಬಿದೆ.‌ ಅವುಗಳ ಅಭಿವೃದ್ಧಿ ಆಗಿರುತ್ತಿದ್ದರೆ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹುದಿತ್ತು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ತಾಲ್ಲೂಕಿನಲ್ಲಿ ಇರುವ 52 ಕೆರೆಗಳ ಒಟ್ಟೂ ವಿಸ್ತೀರ್ಣ 21 ಎಕರೆ 4 ಗುಂಟೆ 28 ಆಣೆ. ಅತಿ ದೊಡ್ಡ ಕೆರೆ ಎನ್ನುವ ಹೆಗ್ಗಳಿಕೆ ಸುಮಾರು ಆರು ಎಕರೆ 9 ಗುಂಟೆ ವಿಸ್ತೀರ್ಣ ಹೊಂದಿರುವ ಕೋಕ್ತಿಕೆರೆಯದ್ದಾಗಿದೆ. ಇದು ಪಟ್ಟಣದ ಹೃದಯಭಾಗದಲ್ಲಿದೆ. ಅತಿ ಸಣ್ಣ ಕೆರೆಯು ತಾಲ್ಲೂಕಿನ ಮಾರುಕೇರಿಯಲ್ಲಿದ್ದು, ಕೇವಲ 12 ಆಣೆ ವಿಸ್ತೀರ್ಣವಿದೆ.

ಭಟ್ಕಳ ಐತಿಹಾಸಿಕ ಹಿನ್ನೆಲೆ ಇರುವ ಊರು. ಹಿಂದೆ ರಾಜರು ದೇವಸ್ಥಾನಗಳ ಎದುರು ಕೆರೆಗಳನ್ನು ನಿರ್ಮಿಸುತ್ತಿದ್ದರು. ದೇವರ ಮುಂದೆ ಇರುವ ಕೆರೆಗಳನ್ನು ನಿರ್ಲಕ್ಷಿಸುವುದಿಲ್ಲ ಮತ್ತು ಒತ್ತುವರಿ ಮಾಡುವುದಿಲ್ಲ ಎಂದು ನಂಬಿಕೆಯಿತ್ತು. ಆದರೆ, ಈಗ ಸರ್ಕಾರಿ ಲೆಕ್ಕದಲ್ಲಿ ಮಾತ್ರ ಕೆರೆಗಳಿವೆ. ಅವುಗಳನ್ನು ಪರಿಶೀಲಿಸಿ ನೋಡಿದರೆ ಅಸ್ತಿತ್ವ ಕಳೆದುಕೊಂಡಿದೆ ಎನ್ನುತ್ತಾರೆ ಸಮಾಜ ಸೇವಕ ಹರೀಶ ನಾಯ್ಕ ಜಾಲಿಕೋಡಿ.

‘ತಾಲ್ಲೂಕಿನ ಅತಿ ದೊಡ್ಡ ಕೋಕ್ತಿ ಕೆರೆಯನ್ನು ವರ್ಷದಿಂದ ವರ್ಷಕ್ಕೆ ಒತ್ತುವರಿಯಾಗುತ್ತಿದೆ. ತಾಲ್ಲೂಕಿನಲ್ಲಿ ಇರುವ ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಪಡಿಸಿದ್ದರೆ ಬೇಸಿಗೆಯಲ್ಲಿ ನೀರಿಗೆ ಇಷ್ಟೊಂದು ಪರದಾಟ ಅನುಭವಿಸುವುದು ತಪ್ಪುತ್ತಿತ್ತು’ ಎನ್ನುವುದು ಅವರ ಅನಿಸಿಕೆ.

ದಾಖಲೆಗಳಲ್ಲಿ ಇರುವ ಕೆರೆಗಳನ್ನು ಗುರುತಿಸಿ, ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಬೇಕು. ಕೆರೆಗಳ ಅಭಿವೃದ್ಧಿಗೆ ತಾಲ್ಲೂಕು ಆಡಳಿತ ಆದ್ಯತೆ ನೀಡಬೇಕು. ಜತೆಗೆ ಶಾಸಕರೂ ಕೆರೆಗಳ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು.  ಜತೆಗೆ ಮುಂದಿನ ದಿನಗಳಲ್ಲಿ ನೀರಿಗೆ ತತ್ವಾರ ಆಗದಂತೆ ನೋಡಿಕೊಳ್ಳಬೇಕು ಎಂದೂ ಸಲಹೆ ನೀಡಿದರು.

‘ಈ ವರ್ಷ ಉಂಟಾಗಿರುವ ನೀರಿನ ಸಮಸ್ಯೆಯನ್ನು ಅರಿತಿದ್ದೇನೆ. ಇದಕ್ಕೆ ಅಂತರ್ಜಲ ವೃದ್ಧಿಯೇ ಪರಿಹಾರವಾಗಿದೆ. ತಾಲ್ಲೂಕಿನಲ್ಲಿ ಇರುವ ಕೆರೆಗಳನ್ನು ಪರಿಶೀಲಿಸಿ, ಹೂಳು ತೆಗೆಸಲು ಮತ್ತು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಹೇಳಿದರು.

ಕೆರೆಗಳ ಹೂಳೆತ್ತಲು ಪ್ರಸ್ತಾವ

‘ಭಟ್ಕಳ ತಾಲ್ಲೂಕಿನಾದ್ಯಂತ ಇರುವ ಕೆರೆ, ನದಿಗಳಲ್ಲಿ ಹೂಳು ತುಂಬಿರುವುದನ್ನು ಗಮನಿಸಿದ್ದೇನೆ. ಇವುಗಳ ಹೂಳೆತ್ತುವ ಕಾರ್ಯಕ್ಕೆ ಆದ್ಯತೆ ಮೇಲೆ ಪ್ರಯತ್ನಿಸಲಾಗುತ್ತಿದೆ’ ಎಂದು ಶಾಸಕ ಸುನೀಲ್ ನಾಯ್ಕ ತಿಳಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಭಟ್ಕಳದ ಶರಾಬಿ ನದಿ ಹೂಳೆತ್ತಲು ₹ 1 ಕೋಟಿ, ಕೋಕ್ತಿಕೆರೆ ಹೂಳೆತ್ತಲು ₹ 1 ಕೋಟಿ, ಹಡೀನ್ ಹೊಳೆ ಹೂಳೆತ್ತಲು ಪ್ರಸ್ತಾವ ಕಳುಹಿಸಲಾಗಿದೆ. ಮಂಜೂರಾತಿ ನಿರೀಕ್ಷೆಯಲ್ಲಿದ್ದೇನೆ. ಪ್ರಮುಖವಾಗಿ ಕಡವಿನಕಟ್ಟೆ ನದಿಯ ಹೂಳು ತೆಗೆಸುವುದು ಮತ್ತು ಗೇಟ್ ಚಾನಲ್ ದುರಸ್ತಿ ಕಾಮಗಾರಿ ಮಂಜೂರಾತಿ ಹಂತದಲ್ಲಿದೆ’ ಎಂದರು.

‘ಸರ್ಕಾರಿ ಕೆರೆಗಳ ಮಾಹಿತಿಯನ್ನೂ ಪಡೆದುಕೊಂಡಿದ್ದು, ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ಗಳಿಂದ ಅಂದಾಜು ಪತ್ರಿಕೆ ತಯಾರಿಸಲಾಗುವುದು. ಪ್ರಸ್ತಾವನೆ ಸಿದ್ಧಪಡಿಸಿ ಕೆರೆಗಳ ಅಭಿವೃದ್ಧಿಗೆ ಮೇಲಧಿಕಾರಿಗಳು ಮತ್ತು ಸಚಿವರ ಮೂಲಕ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು