ಸೋಮವಾರ, ನವೆಂಬರ್ 29, 2021
20 °C
50 ವರ್ಷಗಳಿಂದ ಹೆರಿಗೆ ಮಾಡಿಸುತ್ತಿರುವ ದರ್ಬೇತಗ್ಗು ನಿವಾಸಿ ಲಕ್ಷ್ಮಿ ಗಣಪತಿ ಸಿದ್ದಿ

ದಟ್ಟಡವಿಯ ಸೂಲಗಿತ್ತಿ ಲಕ್ಷ್ಮಿ ಗಣಪತಿ ಸಿದ್ದಿಗೆ ‘ವಾಲ್ಮೀಕಿ’ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: 50 ವರ್ಷಗಳಿಂದ ಕಾಡಿನ ನಡುವೆ ಸೂಲಗಿತ್ತಿಯಾಗಿ, ನಾಟಿವೈದ್ಯೆಯಾಗಿ ನೂರಾರು ಹೆರಿಗೆ ಮಾಡಿಸಿದ ತಾಲ್ಲೂಕಿನ ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗೋಡಿನ ದರ್ಬೇತಗ್ಗು ನಿವಾಸಿ ಲಕ್ಷ್ಮಿ ಗಣಪತಿ ಸಿದ್ದಿ (80) ಅವರ ಸಾಧನೆಗೆ ‘ವಾಲ್ಮೀಕಿ ಪ್ರಶಸ್ತಿ’ ಲಭಿಸಿದೆ.

ವಿಧಾನಸೌಧದ ಬ್ಯಾಂಕ್ವೇಟ್‌ ಹಾಲ್‌ನಲ್ಲಿ ಬುಧವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮಾಜ ಸೇವಾ ವಿಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು. ಲಕ್ಷ್ಮಿ ಸಿದ್ದಿ ಅವರು ತಮ್ಮ ತಾಯಿ ದಿ.ತಂಗು ಧಾನ್ಯಾ ಸಿದ್ದಿ ಅವರಿಂದ ಸೂಲಗಿತ್ತಿ ವಿದ್ಯೆ ಹಾಗೂ ನಾಟಿ ಔಷಧಿ ನೀಡುವುದನ್ನು ಕಲಿತಿದ್ದರು. 

ಸುಮಾರು 50 ವರ್ಷಗಳ ಕಾಲ ಸೂಲಗಿತ್ತಿ ಕೆಲಸ ಮಾಡುತ್ತಾ ಬಂದಿರುವ ಲಕ್ಷ್ಮಿ ಅವರು, ಕೆಲವು ವರ್ಷಗಳಿಂದ ಹೆರಿಗೆ ಮಾಡಿಸುವುದನ್ನು ನಿಲ್ಲಿಸಿದ್ದಾರೆ. ಆದರೆ, ನಾಟಿ ಔಷಧಿ ನೀಡುವ ಕಾರ್ಯ ಮುಂದುವರಿಸಿದ್ದಾರೆ. ತಾಲ್ಲೂಕಿನ ಮಾಗೋಡು ಸುತ್ತಮುತ್ತ, ಮಂಚಿಕೇರಿ, ಕೆಳಾಸರೆ, ಯಲ್ಲಾಪುರ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಮಕ್ಕಳ ಹೆರಿಗೆಯಲ್ಲಿ ನೆರವಾಗಿದ್ದಾರೆ. 

ಮೂವರು ಪುತ್ರರು ಹಾಗೂ ಪುತ್ರಿಯರನ್ನು ಹೊಂದಿರುವ ಲಕ್ಷ್ಮಿ ಅವರ ಪತಿ ಗಣಪತಿ ಸಿದ್ದಿ 20 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಇದೀಗ ದರ್ಬೇತಗ್ಗು ಗ್ರಾಮದಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಇವರ ಸೇವೆಯನ್ನು ಗುರುತಿಸಿದ ಆರೋಗ್ಯ ಇಲಾಖೆ ಗ್ರಾಮೀಣ ಭಾಗದ ಸೂಲಗಿತ್ತಿ ಹಾಗೂ ನಾಟಿವೈದ್ಯರು ಎಂದು ಪ್ರಮಾಣ ಪತ್ರವನ್ನೂ ನೀಡಿದೆ. ಅಲ್ಲದೆ ಸರ್ಕಾರದಿಂದ ನೀಡಲಾಗುವ ಕಿಟ್ ಸಹ ನೀಡಿದೆ.

ಲಕ್ಷ್ಮಿ ಅವರ ಸೊಸೆ ಗ್ರಾಮ ಪಂಚಾಯಿತಿ ಸದಸ್ಯೆ ಭವಾನಿ ಗೋಪಾಲ ಸಿದ್ದಿ ಮಾತನಾಡಿ, ‘ಅತ್ತೆಯವರು ಬಹಳಷ್ಟು ಜನರ ಸೇವೆಯನ್ನು ಹಾಗೂ ಹೆರಿಗೆ ಮಾಡಿರುವುದನ್ನು ಕಣ್ಣಾರೆ ಕಂಡಿದ್ದೇವೆ. ಅವರಿಗೆ ಬಹಳ ಹಿಂದೆಯೇ ಪ್ರಶಸ್ತಿ ಬರುತ್ತದೆ ಎಂದು ನಿರೀಕ್ಷಿಸಿದ್ದೆವು. ಈಗಲಾದರೂ ರಾಜ್ಯ ಪ್ರಶಸ್ತಿ ದೊರಕಿರುವುದು ನಮ್ಮ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಹೆಮ್ಮೆ ತಂದಿದೆ’ ಎಂದರು.

ಪುತ್ರರಾದ ಗೋಪಾಲ ಸಿದ್ದಿ ಹಾಗೂ ದತ್ತಾತ್ರೇಯ ಸಿದ್ದಿ ಗೌರವಯುತವಾಗಿ ಬದುಕಲು ತಮ್ಮ ತಾಯಿಗೆ ಒಂದು ಮನೆ ಕಟ್ಟಿಸಿ ಕೊಡಬೇಕು ಎಂದು ಇದೇವೇಳೆ ಮನವಿ ಮಾಡಿದರು.

‘ಪ್ರಶಸ್ತಿ ನಿರೀಕ್ಷಿಸಿರಲಿಲ್ಲ...’:

‘ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ನನ್ನನ್ನು ಗುರುತಿಸಿರುವುದು ಖುಷಿ ತಂದಿದೆ. ಸರ್ಕಾರ ನೀಡಿದ ಎಂಟು ದಿನಗಳ ತರಬೇತಿ ಪಡೆದುಕೊಂಡಿದ್ದೆ. ನನ್ನ ಕೆಲಸದಲ್ಲಿ ಯಾವತ್ತೂ ಹಣದ ಬೇಡಿಕೆ ಇಡಲಿಲ್ಲ. ಅವರು ಕೊಡುತ್ತಿದ್ದ ತೆಂಗಿನಕಾಯಿ, ರವಿಕೆ ಬಟ್ಟೆ, ಸ್ವಲ್ಪ ಹಣದಲ್ಲಿಯೇ ತೃಪ್ತಿ ಪಟ್ಟಿದ್ದೇನೆ. ನನ್ನ ಸೇವೆ ಇದೀಗ ಸಾರ್ಥಕತೆ ಪಡೆದುಕೊಂಡಿದೆ’ ಎಂದು ಲಕ್ಷ್ಮಿ ಸಿದ್ದಿ ಅಭಿಪ್ರಾಯ ವ್ಯಕ್ತಪಡಿಸಿದರು.

–––––––

* ಸಮಾಜಸೇವೆಯಲ್ಲಿ ತೊಡಗಿರುವ ಲಕ್ಷ್ಮಿ ಸಿದ್ದಿ ಅವರಿಗೆ ವಾಲ್ಮೀಕಿ ಪ್ರಶಸ್ತಿ ದೊರೆತಿರುವುದು ಪ್ರಶಸ್ತಿಯ ಗೌರವ ಹೆಚ್ಚಿಸಿದೆ. ಇಂಥವರನ್ನು ಸರ್ಕಾರ ಗುರುತಿಸುತ್ತಿರುವುದು ಶ್ಲಾಘನೀಯ.

– ಶಾಂತಾರಾಮ ಸಿದ್ದಿ, ವಿಧಾನ ಪರಿಷತ್ ಸದಸ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು