ಶುಕ್ರವಾರ, ಜುಲೈ 30, 2021
28 °C
ಕಾರವಾರ ತಾಲ್ಲೂಕಿನ ಕೆರವಡಿ ಗ್ರಾಮದ ಖಾಂಡ್ಯಾಳಿ ಮಜಿರೆಯಲ್ಲಿ ಸಮಸ್ಯೆ

ಮಣ್ಣು ಕುಸಿತ: ಮನೆಗೆ ಅಪಾಯ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಕೆರವಡಿ ಗ್ರಾಮದ ಖಾಂಡ್ಯಾಳಿ ಮಜಿರೆಯಲ್ಲಿ ನದಿಯಂಚಿನ ಮಣ್ಣು ಕುಸಿಯುತ್ತಿದೆ. ಇದರಿಂದ ಸ್ಥಳೀಯ ನಿವಾಸಿ ಸುರೇಶ ರಾಮ ಪಾಗಿ ಅವರ ಮನೆ ಅಪಾಯದಲ್ಲಿದ್ದು, ಮನೆ ಮಂದಿ ಆತಂಕದಲ್ಲಿದ್ದಾರೆ.

ಮೀನುಗಾರ ಕುಟುಂಬದವರಾಗಿರುವ ಕಾರಣ ಅವರು ಸುಮಾರು 35 ವರ್ಷಗಳಿಂದ ನದಿಯ ಸಮೀಪವೇ ಮನೆ ಮಾಡಿಕೊಂಡಿದ್ದಾರೆ. ಮನೆಯು ಮಣ್ಣಿನ ಗೋಡೆಯದ್ದಾಗಿರುವುದೂ ಅವರ ಭೀತಿಗೆ ಮತ್ತೊಂದು ಕಾರಣವಾಗಿದೆ. ಮನೆಯ ಸಮೀಪದಲ್ಲಿ ಮಣ್ಣು ಕುಸಿದು, ತೋಟದಲ್ಲಿದ್ದ ತೆಂಗಿನ ಮರಗಳು ಬುಡಮೇಲಾಗಿವೆ. 

ಈ ಮಜಿರೆಯು ಗ್ರಾಮ ಪಂಚಾಯ್ತಿ ಕಚೇರಿಯಿಂದ ಎರಡು ಕಿ.ಮೀ ದೂರದಲ್ಲಿದೆ. ನದಿತೀರದ ಸಮೀಪ ಮೀನುಗಾರರ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಇವೆ. ಕಳೆದ ವರ್ಷದ ಪ್ರವಾಹದ ಸಂದರ್ಭವೂ ಸುರೇಶ ಅವರ ಮನೆ ಜಲಾವೃತವಾಗಿತ್ತು. ಈ ವರ್ಷದ ಜುಲೈ 9ರಂದು ಸುರಿದ ಭಾರಿ ಮಳೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಇದರಿಂದ ನದಿತೀರದ ಕೆಳಗಿನ ಗುಡ್ಡದ ಮಣ್ಣು ಕುಸಿದು ಮರಗಳು ಉರುಳಿವೆ.

‘ಮನೆಗೆ ಅಪಾಯ ಎದುರಾಗಿರುವ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಒ) ಮತ್ತು ತಹಶೀಲ್ದಾರ್‌ ಅವರಿಗೆ ಲಿಖಿತ ಮನವಿ ನೀಡಿದ್ದರು. ನೋಡಲ್ ಅಧಿಕಾರಿ ಮತ್ತು ಪಿ.ಡಿ.ಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಸಮಸ್ಯೆಗೆ ಪರಿಹಾರದ ಬಗ್ಗೆ ಭರವಸೆ ನೀಡಿಲ್ಲ’ ಎಂದು ಯುವ ಮುಖಂಡ ಪ್ರಜ್ವಲ್ ಬಾಬುರಾಯ ಶೇಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುನ್ನೆಚ್ಚರಿಕೆಯಾಗಿ ಪರಿಹಾರ ಕೇಂದ್ರ: ಸುರೇಶ ಅವರ ಮನೆಯಲ್ಲಿ ಆರು ಮಂದಿಯಿದ್ದು, ಕೆರವಡಿ ಗ್ರಾಮ ಪಂಚಾಯ್ತಿಯು ಮುನ್ನೆಚ್ಚರಿಕೆಯಾಗಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿಯಲ್ಲಿ ಪರಿಹಾರ ಕೇಂದ್ರ ತೆರೆದಿದೆ. ಆದರೆ, ಅವರ ಮನೆಯಿಂದ ಇಲ್ಲಿಗೆ ಸುಮಾರು ಎರಡು ಕಿಲೋಮೀಟರ್ ದೂರವಿದೆ. ಹಾಗಾಗಿ ಅವರ ಕುಟುಂಬದ ಆತಂಕವನ್ನು ದೂರ ಮಾಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.