ಸೋಮವಾರ, ಸೆಪ್ಟೆಂಬರ್ 16, 2019
21 °C

ಅಪ್ಸರಕೊಂಡಕ್ಕೆ ಮಲತಾಯಿ ಧೋರಣೆಯ ಭಾವ!

Published:
Updated:
Prajavani

ಹೊನ್ನಾವರ: ತಾಲ್ಲೂಕಿನ ಕಡಲತೀರಗಳು ಪ್ರಾಕೃತಿಕ ಸೊಬಗಿನಿಂದ ಪರಸ್ಪರ ಪೈಪೋಟಿಗೆ ಇಳಿದಂತೆ ತೋರುತ್ತದೆ. ಅಪ್ಸರಕೊಂಡ, ಕಾಸರಕೋಡ, ಮುಗಳಿ, ಹಳದೀಪುರ ಹೀಗೆ ಬೀಚ್‍ಗಳ ಸರಮಾಲೆಯೇ ಇಲ್ಲಿದೆ.

ಅಪ್ಸರಕೊಂಡ ಹಾಗೂ ಕಾಸರಕೋಡ ಬೀಚ್‍ಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗಿದೆ. ಆದರೂ ಅಪ್ಸರಕೊಂಡದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬುದು ಸ್ಥಳೀಯರ ದೂರು. 

ಅಪ್ಸರಕೊಂಡಕ್ಕೆ ಪ್ರಕೃತಿದತ್ತ ಕೊಡುಗೆ ಧಾರಾಳವಾಗಿದೆ. ಅಂದಿನ ಡಿಸಿಎಫ್ ಕೃಷ್ಣ ಉದಪುಡಿ, ಬೀಚ್‍ನ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದರು. ಪ್ರವಾಸೋದ್ಯಮ ಇಲಾಖೆಯ ಹಣಕಾಸಿನ ನೆರವು ಹಾಗೂ ಸ್ಥಳೀಯ ಸಂಪನ್ಮೂಲ ಉಪಯೋಗಿಸಿಕೊಂಡು ಪರಿಸರ ಪ್ರವಾಸಿ ತಾಣವಾಗಿಸಲಾಯಿತು.

ಬಳಿಕ ಅರಣ್ಯ ಇಲಾಖೆಯೇ ಪ್ರವಾಸೋದ್ಯಮ ಇಲಾಖೆಯ ಆರ್ಥಿಕ ನೆರವಿನಲ್ಲಿ ಕಾಸರಕೋಡ ಬೀಚ್ ಅನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಕ್ರಮ ಕೈಗೊಂಡಿತು. ವಿವಿಧ ಮನೋರಂಜನಾ ಪರಿಕರಗಳನ್ನು ಅಳವಡಿಸಲಾಯಿತು. ಗಾಳಿ ಗಿಡಗಳ ತೋಪು ತಂಪೆರೆಯಿತು. ಪ್ರವಾಸಿಗರಿಗಾಗಿ ಅಂಗಡಿ– ಹೋಟೆಲ್‍ಗಳು ಇಲ್ಲಿ ಆರಂಭವಾದವು.

ಈಗ ಕಾಸರಕೋಡ ಬೀಚ್‍ ಪ್ರವಾಸಿಗರ ನೆಚ್ಚಿನದ್ದಾಗಿದೆ. ಆದರೆ, ನಿಸರ್ಗ ರಮಣೀಯ ತಾಣ ಅಪ್ಸರಕೊಂಡ ನಿರ್ವಹಣೆಯ ಕೊರತೆಯಿಂದ ಸೊರಗಿದೆ. ಹಿನ್ನೀರಿನಲ್ಲಿ ಕಲ್ಪಿಸಲಾಗಿದ್ದ ಬೋಟ್ ಅಲ್ಲಿಂದ ಮಾಯವಾಗಿದೆ. ಪ್ರವಾಸಿ ಬಂಗ್ಲೆ, ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಆಕರ್ಷಕವಾಗಿದ್ದ ಪಾವಟಿಗೆಳು ಆಕಾರ ಕಳೆದುಕೊಳ್ಳುತ್ತಿವೆ. ಸರಿಯಾದ ಅಂಗಡಿ– ಹೋಟೆಲ್‍ಗಳೂ ಇಲ್ಲ. ಬೀಚ್‍ನ ತುಂಬೆಲ್ಲ ತ್ಯಾಜ್ಯ ತುಂಬಿದೆ. ಕುಸಿಯುತ್ತಿರುವ ಕಟ್ಟಡಗಳು ಕುಡುಕರಿಗೆ ಹಾಗೂ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿವೆ  ಎಂಬ ದೂರು ಅಂಗಡಿ ಮಾಲೀಕರೊಬ್ಬರದ್ದು.

Post Comments (+)