ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ: ಸಂಪೂರ್ಣ ಹದಗೆಟ್ಟ ಮಾಗೋಡು ಜಲಪಾತ ರಸ್ತೆ

ಯಲ್ಲಾಪುರ: ಮಾಗೋಡು ಜಲಪಾತಕ್ಕೆ ಹೋಗುವವರಿಗೆ ಸುಸ್ತು
Last Updated 28 ಸೆಪ್ಟೆಂಬರ್ 2020, 14:51 IST
ಅಕ್ಷರ ಗಾತ್ರ

ಯಲ್ಲಾಪುರ: ಪಟ್ಟಣದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಮಾಗೋಡು ಜಲಪಾತಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಆದರೆ, ಇಲ್ಲಿಗೆ ಸಾಗುವ ರಸ್ತೆ ಮಾತ್ರ ತೀರಾ ಹಾಳಾಗಿದೆ.

ಈ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದೆ. ಮಾಗೋಡು ಕಾಲೊನಿವರೆಗೆ ರಸ್ತೆಗೆ ತೇಪೆ ಹಚ್ಚಲಾಗಿದೆ. ಅಲ್ಲಿಂದ ಮೊಟ್ಟೆಗದ್ದೆ ಕ್ರಾಸ್‌ನವರೆಗೆ ಈ ಬಾರಿ ಉತ್ತಮ ರಸ್ತೆ ನಿರ್ಮಿಸಲಾಗಿದೆ. ಅಲ್ಲಿಂದ ಜಲಪಾತದವರೆಗಿನ ರಸ್ತೆಯಲ್ಲಿ ಡಾಂಬರಿನ ಯಾವುದೇ ಕುರುಹೂ ಉಳಿದಿಲ್ಲ. ಸಂಪೂರ್ಣವಾಗಿ ಮಣ್ಣು, ಜಲ್ಲಿಯ ರಸ್ತೆಯಾಗಿ ಮಾರ್ಪಟ್ಟಿದೆ. ಜಲಪಾತವನ್ನು ಕಣ್ತುಂಬಿಕೊಳ್ಳಲು ಉತ್ಸಾಹದಿಂದ ಬಂದ ಪ್ರವಾಸಿಗನ ಉತ್ಸಾಹವನ್ನೂ ಇದು ಕಸಿದುಕೊಳ್ಳುತ್ತಿದೆ.

‘ಇಲ್ಲಿನ ನಿಸರ್ಗ ರಮಣೀಯ ದೃಶ್ಯ, ಧುಮ್ಮಿಕ್ಕುವ ಜಲಪಾತವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷವೂ ಬರುತ್ತೇವೆ. ಆದರೆ, ಇಲ್ಲಿನ ಪ್ರವಾಸ, ಪ್ರಯಾಸವನ್ನುಂಟು ಮಾಡುತ್ತದೆ. ಹಲವಾರು ವರ್ಷಗಳಿಂದ ರಸ್ತೆ ಹೀಗೆಯೇ ಇದ್ದು, ವರ್ಷದಿಂದ ವರ್ಷಕ್ಕೆ ಹದಗೆಡುತ್ತಲೇ ಸಾಗಿದೆ. ಉತ್ತಮವಾದ ರಸ್ತೆಯೊಂದನ್ನು ನಿರ್ಮಿಸಿದರೆ ಸಾಕು. ಇನ್ನೂ ಹೆಚ್ಚಿನ ಪ್ರವಾಸಿಗರು ಬರುತ್ತಾರೆ’ ಎನ್ನುತ್ತಾರೆ ಹುಬ್ಬಳ್ಳಿಯ ಪ್ರವಾಸಿಗ ಪ್ರಸನ್ನ ಜೋಶಿ.

‘ಕಾಂಕ್ರೀಟ್ ರಸ್ತೆ ಉತ್ತಮ’

ಈ ಬಾರಿ ₹1.5 ಕೋಟಿ ವೆಚ್ಚದಲ್ಲಿ ಮಾಗೋಡು ಕಾಲೊನಿಯಿಂದ ಮೊಟ್ಟೆಗದ್ದೆ ಕ್ರಾಸ್‌ವರೆಗೆ 3.2 ಕಿಲೋಮೀಟರ್ ಉತ್ತಮವಾದ ರಸ್ತೆ ನಿರ್ಮಾಣ ಮಾಡಲಾಗಿದೆ. ಅಲ್ಲಿಂದ ಜಲಪಾತದವರೆಗೆ ಸುಮಾರು ಮೂರು ಕಿಲೋಮೀಟರ್ ದಟ್ಟವಾದ ಅರಣ್ಯ ಪ್ರದೇಶವಿರುವ ಕಾರಣ ಡಾಂಬರು ರಸ್ತೆ ಉಪಯೋಗವಾಗದು ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ವಿನಾಯಕ ಹೆಗಡೆ.

‘ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾದರೆ ಮಾತ್ರ ಉತ್ತಮವಾಗಿರಲು ಸಾಧ್ಯ. ಪ್ರತಿವರ್ಷ ರಸ್ತೆ ನಿರ್ಮಾಣಕ್ಕಾಗಿ ಪ್ರವಾದೋದ್ಯಮ ಇಲಾಖೆಗೆ ಹಾಗೂ ನಮ್ಮ ಇಲಾಖೆಗೂ ಪ್ರಸ್ತಾವ ಸಲ್ಲಿಸುತ್ತಿದ್ದೇವೆ. ಹಣ ಮಂಜೂರಾಗುವ ವಿಶ್ವಾಸವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT