ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಆಶ್ಲೇಷಾ ಮಳೆಯ ಆರ್ಭಟ, ಮುರಿದು ಬಿದ್ದ ಮೆಕ್ಕೆಜೋಳ

Last Updated 9 ಆಗಸ್ಟ್ 2020, 15:07 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಸುರಿದ ಗಾಳಿ ಸಹಿತ ಮಳೆಯು, ಮೆಕ್ಕೆ ಜೋಳ ರೈತರ ಆಸೆಯನ್ನು ಕಮರುವಂತೆ ಮಾಡಿದೆ. ಭತ್ತ ಕೈಹಿಡಿಯುತ್ತಿಲ್ಲ ಎಂದು ಮೆಕ್ಕೆಜೋಳದಲ್ಲಿ ಲಾಭ ಕಾಣಲು ಮುಂದಾಗಿದ್ದ ಕೆಲ ರೈತರ ಗದ್ದೆಗಳಲ್ಲಿ, ಈಚೆಗಿನ ಮಳೆ ಬೆಳೆಯನ್ನು ಮಕಾಡೆ ಮಲಗಿಸಿದೆ.

ತಾಲ್ಲೂಕಿನ ಅರಿಶಿಣಗೇರಿ, ಹುನಗುಂದ, ಅಗಡಿ, ಕೊಪ್ಪ, ಇಂದಿರಾನಗರ, ನಂದಿಕಟ್ಟಾ ಸೇರಿದಂತೆ ಹಲವೆಡೆ ಗಾಳಿ ಸಹಿತ ಮಳೆಯಿಂದ ಮೆಕ್ಕೆಜೋಳ ನೆಲಕ್ಕೆ ಒರಗಿದೆ. ಬಲಿಷ್ಠವಾಗಿ ಬೆಳೆದಿದ್ದ ಗಿಡಗಳು ಆಶ್ಲೇಷಾ ಮಳೆಗೆ ತಲೆ ಬಾಗಿ ಬಿದ್ದಿವೆ ಎಂದು ರೈತರು ನೋವಿನಿಂದ ಹೇಳುತ್ತಾರೆ.

'ಬೇರು ಗಟ್ಟಿಯಾಗಿ, ತೆನೆ ಬಿಡುವ ಮುಂಚಿನ ಪ್ರಕ್ರಿಯೆಯಲ್ಲಿ ಮೆಕ್ಕೆಜೋಳದ ಬೆಳೆಯಿದ್ದು, ಈಚೆಗೆ ಬೀಸಿದ ಗಾಳಿಗೆ ಗಿಡ ಮುರಿದು ಬಿದ್ದಿದೆ. ಕೆಲವೊಂದು ಭಾಗದಲ್ಲಿ ಮಾತ್ರ ಹೆಚ್ಚಿನ ಹಾನಿ ಆಗಿದ್ದು, ಉಳಿದೆಡೆ ಸಾಮಾನ್ಯ ಎಂಬಂತೆ ಹಾನಿಯಾಗಿದೆ. ಮತ್ತೆ ಗಾಳಿಸಹಿತ ಮಳೆ ಮುಂದುವರೆದರೆ ಇನ್ನಷ್ಟು ಹಾನಿಯಾಗುವ ಸಾಧ್ಯತೆಯಿದೆ' ಎಂದು ರೈತ ಪೀರಣ್ಣ ಅಂತೋಜಿ ಹೇಳಿದರು.

'ಹುನಗುಂದ, ಅರಿಶಿಣಗೇರಿ ಸೇರಿದಂತೆ ಇನ್ನಿತರ ಕಡೆ 100-150 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾನಿಯಾದ ಬಗ್ಗೆ ರೈತರು ಮೌಖಿಕವಾಗಿ ತಿಳಿಸಿದ್ದಾರೆ. ಹಾನಿಯಾದ ಬಗ್ಗೆ ಅರ್ಜಿ ನೀಡುವಂತೆ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಲಾಗುವುದು' ಎಂದು ಕಂದಾಯ ನಿರೀಕ್ಷಕ ಸಂಜು ಲಮಾಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT