ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಮೀಟರ್‌ಗೆ ಇಳಿಕೆ: ಹಲವರ ಆಕ್ಷೇಪ

ಸಿ.ಝೆಡ್.ಎಂ.ಪಿ ಕರಡು ನಕ್ಷೆ: ಅಹವಾಲು ಸಭೆಯಲ್ಲಿ ಪರಿಸರಾಸಕ್ತರ ಅಭಿಪ್ರಾಯ ಮಂಡನೆ
Last Updated 15 ಸೆಪ್ಟೆಂಬರ್ 2021, 15:45 IST
ಅಕ್ಷರ ಗಾತ್ರ

ಕಾರವಾರ: ಕರಾವಳಿ ವಲಯ ನಿರ್ವಹಣಾ ಯೋಜನೆ (ಸಿ.ಝೆಡ್.ಎಂ.ಪಿ) ಕರಡು ನಕ್ಷೆಯಲ್ಲಿ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಭಿವೃದ್ಧಿ ನಿಷೇಧಿತ ವಲಯವನ್ನು 50 ಮೀಟರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಇದರ ವಿರುದ್ಧ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕರಾವಳಿ ನಿಯಂತ್ರಣ ವಲಯ (ಸಿ.ಆರ್‌.ಝೆಡ್) ಕಾಯ್ದೆ– 2019’ರ ತಿದ್ದುಪಡಿಯಂತೆ ಸಿ.ಝೆಡ್‍.ಎಂ.ಪಿ ಕರಡು ನಕ್ಷೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಪರಿಸರಾಸಕ್ತರು ತಮ್ಮ ಅಭಿಪ್ರಾಯ ಮಂಡಿಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆ ವಹಿಸಿದ್ದರು.

ಕಡಲಜೀವ ವಿಜ್ಞಾನಿ ಪ್ರಕಾಶ ಮೇಸ್ತ ಮಾತನಾಡಿ, ‘ಸಿ.ಆರ್.ಝೆಡ್ ಕಾಯ್ದೆಯು ಕಡಲತೀರದ ಜೀವ ವೈವಿಧ್ಯ ರಕ್ಷಣೆಗಾಗಿಯೇ ಇದೆ. ಆದರೆ, ಅದಕ್ಕೆ ರಿಯಾಯಿತಿ ನೀಡಲು ಆಗಾಗ ತಿದ್ದುಪಡಿ ತರಲಾಗುತ್ತಿದೆ. ಇದರಿಂದ ಕಡಲ ಜೀವಿಗಳಿಗೆ ತೊಂದರೆಯಾಗುತ್ತಿದೆ. ಈ ಹಿಂದಿನಿಂದಲೂ ಜಾರಿಯಲ್ಲಿರುವ ಮೀನುಗಾರಿಕೆಯನ್ನು ಬಿಟ್ಟು, ಉಳಿದ ಚಟುವಟಿಕೆಗಳಿಗೆ ಅವಕಾಶ ಬೇಡ’ ಎಂದು ಒತ್ತಾಯಿಸಿದರು.

ವಕೀಲ ಬಿ.ಎಸ್.ಪೈ ಮಾತನಾಡಿ, ‘2011ರ ಸಿ.ಆರ್.ಝೆಡ್ ಕಾಯ್ದೆಯ ಪ್ರಕಾರ ಕಾರವಾರವು ಅತಿ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿ ಅಲೆಗಳ ಗರಿಷ್ಠ ಮಿತಿಯನ್ನು ಕಿನಾರೆಯಿಂದ 500 ಮೀಟರ್‌ಗೆ ಗುರುತಿಸಿ, ಅಭಿವೃದ್ಧಿ ನಿರ್ಬಂಧಿಸಬೇಕು. ಆದರೆ, ಸಿ.ಝೆಡ್‍.ಎಂ.ಪಿ.ಯಲ್ಲಿ ಅದನ್ನು 50 ಮೀಟರ್‌ಗಳಿಗೆ ಮಿತಿಗೊಳಿಸಲಾಗಿದೆ. ಇದರಿಂದ ಕಡಲತೀರಕ್ಕೆ ಧಕ್ಕೆಯಾಗಬಹುದು’ ಎಂದರು.

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ಮಾತನಾಡಿ, ‘ಕಾಳಿ ನದಿಯಲ್ಲಿ ಮಲ್ಲಾಪುರದವರೆಗೆ ಸಮುದ್ರದ ಉಪ್ಪು ನೀರು ಸಾಗಬಹುದು ಎಂದು ಕರಡಿನಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಅಲ್ಲಿಯವರೆಗೂ ಸೂಕ್ಷ್ಮ ಪ್ರದೇಶವಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಉಬ್ಬರದ ಸಮಯದಲ್ಲಿ ಹಣಕೋಣದವರೆಗೆ ಉಪ್ಪು ನೀರು ಹರಿಯಬಹುದು. ಹಾಗಾಗಿ, ಅಲ್ಲಿಯವರೆಗಿನ ಪ್ರದೇಶವನ್ನಷ್ಟೇ ಸೂಕ್ಷ್ಮ ಪ್ರದೇಶವಾಗಿ ಗುರುತಿಸಬೇಕು’ ಎಂದು ಒತ್ತಾಯಿಸಿದರು.

ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಕೇಶವ ಕೆ.ಜಿ.ಮಾತನಾಡಿ, ‘ನಗರದ ಕಡಲತೀರದ ಸೌಂದರ್ಯ ಅಪ್ರತಿಮವಾದದು. ಪುದುಚೇರಿಯ ಹೊರತಾಗಿ ದೇಶದ ಯಾವ ನಗರದಲ್ಲೂ ಕಡಲತೀರ ಇಷ್ಟು ಸಮೀಪದಲ್ಲಿಲ್ಲ. ಕಡಲತೀರದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿದರೆ ಮೀನುಗಾರಿಕೆ ಮತ್ತು ಜನರ ಸಂಚಾರಕ್ಕೆ ಅಡ್ಡಿಯಾಗಲಿದೆ. ಹಾಗಾಗಿ ಕರಡು ಜಾರಿಯ ಬಗ್ಗೆ ಪರಿಶೀಲಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘2011ರ ಸಿ.ಆರ್.ಝೆಡ್ ಕಾಯ್ದೆಯ ಪ್ರಕಾರ ಕಾರವಾರ ನಗರವನ್ನು ಹಸಿರು ವಲಯವಾಗಿದೆ. ಆದರೆ, ನಕ್ಷೆಯಲ್ಲಿ ಹಳದಿ, ಗುಲಾಬಿ ಬಣ್ಣಗಳಲ್ಲಿ ಗುರುತಿಸಲಾಗಿದೆ. ಅಲ್ಲದೇ ನಕ್ಷೆಯಲ್ಲಿ, ಕಡಲತೀರದ ಗಾಳಿ ಮರಗಳು, ತೀಳ್‌ಮಾತಿ ಕಪ್ಪು ಮರಳಿನ ಕಿನಾರೆ, ನಡುಗಡ್ಡೆಗಳ ಬಗ್ಗೆ ಮಾಹಿತಿಯಿಲ್ಲ. ನಕ್ಷೆಯನ್ನು ಸಿದ್ಧಪಡಿಸಿದವರು ಸ್ಥಳಕ್ಕೇ ಬಂದಿಲ್ಲ’ ಎಂದು ಎಂಜಿನಿಯರ್ ಪ್ರೀತಮ್ ಮಾಸೂರಕರ್ ದೂರಿದರು.

‘ಶೀಘ್ರವೇ ಸಭೆ’:

‘ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಹೊಸ ಯೋಜನೆಗಳನ್ನು ಜಾರಿ ಮಾಡುವ ಮೊದಲು ಮೀನುಗಾರರು ಮತ್ತು ಸ್ಥಳೀಯರ ಜೊತೆ ಚರ್ಚಿಸಲಾಗುವುದು. ಅವರ ಅಭಿಪ್ರಾಯಗಳನ್ನು ಆಧರಿಸಿಯೇ ಮುಂದಿನ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಕರಾವಳಿ ವಲಯ ನಿರ್ವಹಣಾ ಯೋಜನೆ ಕರಡು ನಕ್ಷೆಯ ಸಂಬಂಧ ಮೀನುಗಾರರ ಜತೆ ಶೀಘ್ರವೇ ಸಭೆ ಆಯೋಜಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ವಕೀಲರಾದ ಪದ್ಮಾ ತಾಂಡೇಲ, ಸಂಜಯ ಶಾನಭಾಗ, ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ, ಪ್ರಮುಖರಾದ ಕೃಷ್ಣಾನಂದ ಕೋಲ್ವೇಕರ್ ಮಾತನಾಡಿದರು. ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ ಇದ್ದರು.

-----

* ಸಿ.ಝೆಡ್‍.ಎಂ.ಪಿ ಕರಡು ನಕ್ಷೆಯ ಬಗ್ಗೆ ಸಲ್ಲಿಕೆಯಾದ ಆಕ್ಷೇಪಗಳನ್ನು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಕಳುಸಿಕೊಡಲಾಗುವುದು

- ಪ್ರಸನ್ನ ಪಟಗಾರ, ಸಿ.ಆರ್.ಝೆಡ್ ಪ್ರಾದೇಶಿಕ ನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT