ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಿಂದ ತಮ್ಮ ಊರುಗಳಿಗೆ ತೆರಳಿದ ಕಾರ್ಮಿಕರು: ಗುತ್ತಿಗೆದಾರರಿಗೆ ಸಂಕಷ್ಟ

Last Updated 12 ಮೇ 2021, 19:30 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿಯಾಗಿರುವುದು ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳು ವಿಳಂಬವಾಗಲು ಕಾರಣವಾಗಿದೆ. ಕಾರ್ಮಿಕರು ಬರಲು ಸಮಸ್ಯೆಯಾಗಿರುವುದು ಒಂದೆಡೆಯಾದರೆ, ನಿರ್ಮಾಣಗಳಿಗೆ ಬೇಕಾದ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದು ಮತ್ತೊಂದೆಡೆ. ಇದರಿಂದ ಗುತ್ತಿಗೆದಾರರು ಪರದಾಡುವಂತಾಗಿದೆ.

ಕಳೆದ ವರ್ಷವೂ ಇದೇ ವೇಳೆಗೆ ದೇಶದಾದ್ಯಂತ ಲಾಕ್‌ಡೌನ್‌ನಿಂದಾಗಿ ಕಾಮಗಾರಿಗಳು ನಿಂತಿದ್ದವು. ಬಳಿಕ, ಕೋವಿಡ್ ನಿಯಂತ್ರಣದ ನಿಯಮಾವಳಿಗಳು ನಿಧಾನವಾಗಿ ತೆರವಾಗುತ್ತಿದ್ದಂತೆ ನಿರ್ಮಾಣ ಚಟುವಟಿಕೆಗಳು ಗರಿಗೆದರಿದ್ದವು. ಆದರೆ, ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯದಲ್ಲಿ ಲಾಕ್‌ಡೌನ್ ಹೇರಿದ ಕಾರಣ ಮತ್ತೆ ಸಮಸ್ಯೆಯಾಗಿದೆ.

ಹಾಗಾಗಿ ಈ ಮಳೆಗಾಲದಲ್ಲೂ ಹಲವು ಕುಗ್ರಾಮಗಳಲ್ಲಿ ಹಳ್ಳ ದಾಟಲು ಮತ್ತದೇ ಮರದ ಕಾಲುಸಂಕ, ದೋಣಿಗಳನ್ನು ಅವಲಂಬಿಸಬೇಕಾಗುವ ಸಾಧ್ಯತೆಯಿದೆ. ಅಲ್ಲದೇ ಮನೆ, ಜಮೀನುಗಳು ಜಲಾವೃತವಾಗುವ ದೃಶ್ಯಗಳು ಪುನಃ ಕಂಡರೆ ಅಚ್ಚರಿಯಿಲ್ಲ.

ಜಿಲ್ಲೆಯಲ್ಲಿ ನೂರಾರು ಮಂದಿ ಗುತ್ತಿಗೆದಾರರಿದ್ದು, ಅವರ ಬಳಿ ಹೊರರಾಜ್ಯಗಳ ಮತ್ತು ಹೊರ ಜಿಲ್ಲೆಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ. ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಊರುಗಳಿಗೆ ಹೋದವರಲ್ಲಿ ಹಲವರು ಮರಳಿ ಬಂದಿಲ್ಲ. ಲಭ್ಯ ಕಾರ್ಮಿಕರನ್ನೇ ನೆಚ್ಚಿಕೊಂಡು ಕೆಲಸ ಮುಂದುವರಿಸಿದ್ದ ಗುತ್ತಿಗೆದಾರರು ಈಗ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಲು ಹೆಣಗಾಡುತ್ತಿದ್ದಾರೆ.

ಕಾರ್ಮಿಕರು ಕೆಲಸ ಮಾಡಲು ಸಮಸ್ಯೆಯಿಲ್ಲ ಎಂದು ಸರ್ಕಾರ ಕೋವಿಡ್ ಮಾರ್ಗಸೂಚಿಯಲ್ಲಿ ತಿಳಿಸಿದ್ದರೂ ದೂರದ ಊರುಗಳಿಂದ ಬರಲು ಅವರಿಗೆ ಸಾರಿಗೆ ಸೌಲಭ್ಯವಿಲ್ಲ. ಒಂದುವೇಳೆ, ಕಾರ್ಮಿಕರನ್ನು ಲಾರಿಗಳು, ಸರಕು ಸಾಗಣೆ ವಾಹನಗಳಲ್ಲಿ ಕರೆದುಕೊಂಡು ಹೋದರೆ ಪೊಲೀಸರು ದಂಡ ವಿಧಿಸುತ್ತಾರೆ ಎಂಬ ಆಕ್ಷೇಪ ಗುತ್ತಿಗೆದಾರರದ್ದಾಗಿದೆ.

‘ಸಾರಿಗೆ ಕೊರತೆಯೇ ಸಮಸ್ಯೆ‌’

‘ಗುತ್ತಿಗೆ ಪಡೆದ ಕೆಲಸಗಳನ್ನು ಪೂರ್ಣಗೊಳಿಸಲು ಕಾರ್ಮಿಕರು ಸಿಗಬೇಕು. ಆದರೆ, ಅವರು ಈಗಾಗಲೇ ತಮ್ಮ ಊರುಗಳಿಗೆ, ಬೇರೆ ಬೇರೆ ಕಡೆಗಳಿಗೆ ಹೋಗಿದ್ದಾರೆ. ಅಲ್ಲದೇ ಅವರನ್ನು ಕೆಲಸದ ಜಾಗಕ್ಕೆ ಕರೆದುಕೊಂಡು ಹೋಗಲೂ ಸಮಸ್ಯೆಯಾಗಿದೆ’ ಎನ್ನುತ್ತಾರೆ ತಾಲ್ಲೂಕು ನೋಂದಾಯಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ.

‘ಕಾರ್ಮಿಕರನ್ನು ವಾಹನಗಳಲ್ಲಿ ಕರೆದುಕೊಂಡು ಬಂದರೆ ಲಾಕ್‌ಡೌನ್ ನೆಪದಲ್ಲಿ ಪೊಲೀಸರು ಆಕ್ಷೇಪಿಸುತ್ತಾರೆ. ಆದರೆ, ಇತರ ದಿನಗಳಲ್ಲಿ ಲಾರಿಗಳು, ಜೀಪುಗಳಲ್ಲಿ ಕರೆದುಕೊಂಡು ಹೋಗುವುದು ಅವರಿಗೆ ಗೊತ್ತಾಗುವುದೇ ಇಲ್ಲವ? ಹಾಗಾಗಿ ರಗಳೆಯೇ ಬೇಡ ಎಂದು ಗುತ್ತಿಗೆದಾರರೂ ಕಾರ್ಮಿಕರನ್ನು ಕರೆದುಕೊಂಡು ಬಂದು, ಹೋಗುವ ವ್ಯವಸ್ಥೆ ಮಾಡುತ್ತಿಲ್ಲ’ ಎಂದು ಹೇಳುತ್ತಾರೆ.

‘ನಾವು ಗುತ್ತಿಗೆ ತೆಗೆದುಕೊಂಡ ಕಾಮಗಾರಿಯನ್ನು ಪರಿಶೀಲಿಸಬೇಕು ಎಂದರೆ ನಮಗೂ ಅಲ್ಲಿಗೆ ಹೋಗಲು ಆಗುತ್ತಿಲ್ಲ. ಕಾರ್ಮಿಕರಿಗೆ ನಿತ್ಯವೂ ಪಾಸ್‌ ಕೊಡಿಸಲು ಸಾಧ್ಯವಾಗುತ್ತಿಲ್ಲ. ಇವತ್ತು ಕೆಲಸಕ್ಕೆ ಬಂದವರು ನಾಳೆಗೆ ಬರುವುದಿಲ್ಲ. ಸಾಮಗ್ರಿ ಸಿಕ್ಕಿದರೂ ಅದನ್ನು ಲಾರಿಗೆ ತುಂಬಲು, ಇಳಿಸಲು ಕಾರ್ಮಿಕರು ಸಿಗುತ್ತಿಲ್ಲ’ ಎಂದು ಬೇಸರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT