ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಕದಂಬೋತ್ಸವದ ವೇಳೆ ಮಾತ್ರ ವೇದಿಕೆ ನಿರ್ವಹಣೆ

ಶಿರಸಿ: ಶಿಥಿಲಾವಸ್ಥೆಯಲ್ಲಿ ಮಯೂರವರ್ಮ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ರಾಜ್ಯದ ಐತಿಹಾಸಿಕ ಉತ್ಸವದಲ್ಲಿ ಒಂದೆನಿಸಿರುವ ಕದಂಬೋತ್ಸವ ಆಯೋಜನೆಯಾಗುವ ತಾಲ್ಲೂಕಿನ ಬನವಾಸಿಯ ‘ಮಯೂರವರ್ಮ ವೇದಿಕೆ’ ಸದ್ಯ ಶಿಥಿಲಾವಸ್ಥೆಯ ಹಂತದಲ್ಲಿದೆ. ಚಾವಣಿ ಮುರಿದು ಬಿದ್ದಿದ್ದು, ಗೋಡೆಗಳಿಗೆ ಅಳವಡಿಸಲಾಗಿದ್ದ ಕಲ್ಲುಹಾಸುಗಳು ಕಿತ್ತುಹೋಗಿವೆ.

ಎರಡು ದಶಕದ ಹಿಂದೆ ವೇದಿಕೆ ನಿರ್ಮಿಸಲಾಗಿತ್ತು. ಪ್ರತಿವರ್ಷ ಫೆಬ್ರುವರಿ ಮೊದಲ ಅಥವಾ ಎರಡನೇ ವಾರ ಕದಂಬೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಉತ್ಸವದ ವೇಳೆಗೆ ವೇದಿಕೆಯನ್ನು ಅದ್ಧೂರಿಯಾಗಿ ಅಲಂಕರಿಸುವ ರೂಢಿ ಇದೆ. ಕದಂಬರ ಕಾಲದ ಗತವೈಭವ ಸಾರುವಂತೆ ರೂಪುಗೊಳ್ಳುತ್ತಿದ್ದ ವೇದಿಕೆ ಈಗ ನಿರ್ಲಕ್ಷ್ಯಕ್ಕೆ ತುತ್ತಾಗಿ ಜೀರ್ಣಾವಸ್ಥೆಯಲ್ಲಿದೆ.

ಕೋವಿಡ್ ಕಾರಣದಿಂದ ಕಳೆದ ವರ್ಷ ಕದಂಬೋತ್ಸವ ನಡೆದಿಲ್ಲ.ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ ಉತ್ಸವದ ಬಳಿಕ ವೇದಿಕೆ ನಿರ್ವಹಣೆಯನ್ನೇ ಕಂಡಿಲ್ಲ. ಬಿಸಿಲು, ಮಳೆಯಿಂದ ಹಾಳಾಗಿದ್ದು, ಪಾಚಿ ಕಟ್ಟಿಕೊಂಡಿದೆ. ಅಕ್ಕಪಕ್ಕದಲ್ಲೆಲ್ಲ ಗಿಡಗಂಟಿಗಳು ಬೆಳೆದು ನಿಂತಿವೆ.

ಪ್ರವಾಸಿಗರ ಅನುಕೂಲಕ್ಕೆ ವೇದಿಕೆ ಸಮೀಪ ನಿರ್ಮಿಸಲಾದ ಶೌಚಾಲಯಗಳೂ ಪಾಳುಬಿದ್ದಿವೆ. ಕದಂಬ ಮೈದಾನ ಕಸದ ಸುರಿಯುವ ತೊಟ್ಟಿಯಾಗಿ ಪರಿವರ್ತನೆಗೊಳ್ಳುತ್ತಿದೆ.

‘ಕದಂಬ ಮೈದಾನ ಗ್ರಾಮ ಪಂಚಾಯ್ತಿ ಅಧೀನದಲ್ಲಿದ್ದು ಅಲ್ಲಿರುವ ವೇದಿಕೆ ಕದಂಬೋತ್ಸವ ಸಮಿತಿ ವ್ಯಾಪ್ತಿಗೊಳಪಟ್ಟಿದೆ. ನಿರ್ವಹಣೆಗೆ ಯಾರೊಬ್ಬರೂ ಮುಂದಾಗದ ಪರಿಣಾಮ ಶಿಥಿಲಗೊಳ್ಳುತ್ತಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಶಿವಾಜಿ ಬನವಾಸಿ.

‘ಉತ್ಸವದ ಹೊತ್ತಿಗಷ್ಟೇ ವೇದಿಕೆಯು ಸುಣ್ಣ, ಬಣ್ಣ ಕಂಡು ಮಿಂಚುತ್ತದೆ. ಎರಡು ದಿನದ ಸಂಭ್ರಮ ಮುಗಿದ ಬಳಿಕ ವೇದಿಕೆಯತ್ತ ಕಣ್ಣೆತ್ತಿ ನೋಡುವವರಿಲ್ಲದ ಸ್ಥಿತಿ ಇದೆ. ಈ ಹಿಂದೆ ಹಲವಾರು ಬಾರಿ ಮಯೂರವರ್ಮನ ಹೆಸರಿನಲ್ಲಿ ಶಾಶ್ವತ ರಂಗಮಂದಿರ ನಿರ್ಮಿಸುವ ಭರವಸೆಯನ್ನು ಅನೇಕ  ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ನೀಡಿದ್ದಾರೆ. ಅವು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಕದಂಬರ ರಾಜಧಾನಿ ಆಗಿದ್ದ ಬನವಾಸಿಯಲ್ಲಿ ಮಯೂರವರ್ಮನ ಹೆಸರಿನ ಶಾಶ್ವತ ರಂಗಮಂಟಪ ನಿರ್ಮಿಸಬೇಕು. ಅಲ್ಲಿ ಕದಂಬೋತ್ಸವದ ಜತೆಗೆ ವರ್ಷದ ಇನ್ನಿತರ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಅವಕಾಶ ಸಿಗಬೇಕು’ ಎಂದು ಶಿವಾಜಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು