ಬುಧವಾರ, ಜೂನ್ 23, 2021
24 °C
ವಿಶಿಷ್ಟ ಪ್ರಯೋಗಕ್ಕೆ ಮುಂದಾದ ಮುಂಡಗೋಡ ತಾಲ್ಲೂಕು ಆಡಳಿತ

ಸೋಂಕಿತರಿಗೆ ಧೈರ್ಯ ತುಂಬುತ್ತಿರುವ ಶಿಕ್ಷಕರು

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ತಾಲ್ಲೂಕು ಆಡಳಿತ ವಿಶೇಷ ಕ್ರಮ ಕೈಗೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಮಾರ್ಗದರ್ಶನದಲ್ಲಿ ತಹಶೀಲ್ದಾರ್ ಶ್ರೀಧರ ಮುಂದಲಮನಿ ಅವರು, ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿಯೇ ಮೊದಲ ಬಾರಿಗೆ ಕೋವಿಡ್ ನಿಯಂತ್ರಣಕ್ಕೆ ಮೈಕ್ರೋ ಯೋಜನೆಗಳನ್ನು ರೂಪಿಸಿದ್ದಾರೆ.

ಇಲ್ಲಿನ ತಾಲ್ಲೂಕು ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ್, ಆಡಳಿತಾಧಿಕಾರಿ ಡಾ.ಎಚ್.ಎಫ್.ಇಂಗಳೆ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಂಗನಬಸಯ್ಯ ನೇತೃತ್ವದ ತಂಡವು ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಕರನ್ನು ಕೋವಿಡ್ ಸೋಂಕಿತರ ವಿಚಾರಣೆಗೆ ನೇಮಿಸಲಾಗಿದೆ. ಸೋಂಕಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ತುಂಬುವುದು, ವ್ಯಾಯಾಮದ ಆಸನಗಳನ್ನು ಹೇಳುವುದು, ಸಮಸ್ಯೆಗಳಿದ್ದರೆ ಸಂಬಂಧಿಸಿದ ವೈದ್ಯರಿಗೆ ಮಾಹಿತಿಯನ್ನು ರವಾನೆ ಮಾಡುವ ಕೆಲಸವನ್ನು ಶಿಕ್ಷಕರಿಗೆ ವಹಿಸಲಾಗಿದೆ.

ಇದರ ಜೊತೆಗೆ, ಕೋವಿಡ್ ಸೋಂಕಿತರನ್ನು ತಾಲ್ಲೂಕು ಆಸ್ಪತ್ರೆಗೆ ಕರೆತರಲು ಮೂರು ಆಂಬುಲೆನ್ಸ್‌ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪಟ್ಟಣ ಅಥವಾ ಗ್ರಾಮೀಣ ಪ್ರದೇಶದಿಂದ ಕರೆ ಬಂದ ಕೂಡಲೇ, ಸೋಂಕಿತರನ್ನು ತಾಲ್ಲೂಕು ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆತರಲಾಗುತ್ತಿದೆ. ಒಂದು ವೇಳೆ ಕಾರವಾರದ ‘ಕ್ರಿಮ್ಸ್’ ಅಥವಾ ಹುಬ್ಬಳ್ಳಿ ‘ಕಿಮ್ಸ್’ ಸೇರಿದಂತೆ ಬೇರೆ ಕಡೆ ಸೋಂಕಿತರನ್ನು ದಾಖಲಿಸುವುದಿದ್ದರೆ, ಅದಕ್ಕಾಗಿ ಬೇರೊಂದು ಆಂಬುಲೆನ್ಸ್‌ ಮೀಸಲು ಇಡಲಾಗಿದೆ.

ಉಳಿದ ಇನ್ನೊಂದು ಆಂಬುಲೆನ್ಸ್, ಕರೆ ಬಂದ ತಕ್ಷಣ ಕಾರ್ಯಪ್ರವೃತ್ತ ಆಗುತ್ತದೆ. ಅಗತ್ಯ ಬಿದ್ದರೆ ಇನ್ನೂ ಎರಡು ನಾನ್ ಕೋವಿಡ್ ಬಳಕೆಗಿರುವ ಆಂಬುಲೆನ್ಸ್ ಸಹ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.

ಕೋವಿಡ್ ಸೋಂಕಿತರಿಗೆ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ 30 ಆಕ್ಸಿಜನ್ ಸಹಿತ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಎರಡು ಪ್ರತ್ಯೇಕ ವಾರ್ಡ್‌ಗಳನ್ನು ವಿಂಗಡಿಸಲಾಗಿದೆ. ಸೋಂಕಿತರು ಆಸ್ಪತ್ರೆಗೆ ಬಂದ ತಕ್ಷಣ ಅವರ ಸಂಪೂರ್ಣ ಮಾಹಿತಿಯನ್ನು ಹೆಲ್ಪ್ ಡೆಸ್ಕ್‌ನಲ್ಲಿ ಪಡೆದುಕೊಂಡು, ಸೋಂಕಿತರ ಕುಟುಂಬದವರಿಗೆ ಸಂಬಂಧಿಸಿದ ಆರೋಗ್ಯ ಸಿಬ್ಬಂದಿಯ ಮೊಬೈಲ್ ನಂಬರ ನೀಡಲಾಗುತ್ತದೆ. ನಂತರ ರೋಗಿಯನ್ನು ವಾರ್ಡ್‌ಗೆ ದಾಖಲಿಸಲಾಗುತ್ತದೆ. ರೋಗಿಯ ಪ್ರತಿದಿನದ ಆರೋಗ್ಯ ಮಾಹಿತಿಯನ್ನು ಅಲ್ಲಿನ ಸಿಬ್ಬಂದಿ ಕುಟುಂಬದವರಿಗೆ ತಿಳಿಸುತ್ತಾರೆ.

ಮೆಡಿಕಲ್ ಆಕ್ಸಿಜನ್ ಉಸ್ತುವಾರಿ:

ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲು ವೈದ್ಯಾಧಿಕಾರಿ ಭರತ ತಂತ್ರಿ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ. ಆಮ್ಲಜನಕ ಸಿಲಿಂಡರ್‌ಗಳ ಸಂಖ್ಯೆ ಶೇ 30ಕ್ಕಿಂತ ಕಡಿಮೆಯಾಗುತ್ತಿದ್ದಂತೆ ಇವರು ಮೇಲಧಿಕಾರಿಗಳ ಜೊತೆ ಸಂಪರ್ಕಿಸಿ, ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು