ಭಾನುವಾರ, ಸೆಪ್ಟೆಂಬರ್ 26, 2021
21 °C
ಕುಮಟಾದಲ್ಲಿ ಪ್ರಗತಿ ಪರಿಶೀಲನಾ ಸಭೆ

ಹೊರಗಿನಿಂದ ಬರುವವರ ವಿಚಾರದಲ್ಲಿ ರಾಜಿ ಬೇಡ: ಸಚಿವ ಶಿವರಾಮ ಹೆಬ್ಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ‘ಲಾಕ್‌ಡೌನ್ ಅವಧಿಯಲ್ಲಿ ಹೊರ ರಾಜ್ಯ, ಹೊರ ಜಿಲ್ಲೆಯ ಜನರನ್ನು ಕರೆತರುವ ವಿಚಾರದಲ್ಲಿ ಖಂಡಿತಾ ರಾಜಿ ಬೇಡ. ಪೊಲೀಸರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಸೋತಿರುವ ಜನರೊಂದಿಗೆ ದುರ್ವರ್ತನೆ ತೋರಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಇನ್ನು 10 ದಿನ ಕಾಯಿರಿ. ಸದ್ಯ ಪಟ್ಟಣ ಪ್ರದೇಶದಲ್ಲಿ ಲಾಕ್‌ಡೌನ್ ಯಥಾ ಪ್ರಕಾರ ಮುಂದುವರಿಯುತ್ತದೆ’ ಎಂದು ಹೇಳಿದರು.

‘ಮಳೆ ಆರಂಭವಾಗುವ ಮೊದಲು ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅದಕ್ಕೆ ಬೇಕಾದ ಉಸುಕು, ಜಲ್ಲಿ ಪೂರೈಕೆ ತಾನಾಗಿಯೇ ಆಗುತ್ತದೆ’ ಎಂದರು.

‘ಮೊನ್ನೆ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಮುರಿದು ಬಿದ್ದ ಒಂದು ತೆಂಗಿನ ಮರಕ್ಕೆ ಅಧಿಕಾರಿಗಳು ಕೇವಲ ₹ 400 ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳಬಾರದು. ಹಾನಿಯ ಅಂದಾಜು ಮಾಡುವಾಗ ಅಧಿಕಾರಿಗಳು ಕಾನೂನಿನೊಳಗೇ ಮಾನವೀಯತೆ ತೋರಬೇಕು’ ಎಂದು ಸೂಚಿಸಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ತೊರ್ಕೆ ಗ್ರಾಮದಲ್ಲಿ ಅಘನಾಶಿನಿ ಹಿನ್ನೀರು ಗಜನಿ ಕಟ್ಟೆ ಒಡೆದು ಕುಡಿಯುವ ನೀರಿನ ಬಾವಿಗಳಿಗೆ ಉಪ್ಪು ನೀರು ಸೇರಿದೆ. ಅದರ ತುರ್ತು ಕಾಮಗಾರಿಗೆ ಚಿಕ್ಕ ನೀರಾವರಿ ಇಲಾಖೆಯಿಂದ ₹ 70 ಲಕ್ಷ ಮಂಜೂರಿ ಮಾಡಿಸಿ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಸ್ಥಳೀಯ ಅಧಿಕಾರಿಗಳು ಕೆಲಸ ಮಾಡದೆ ಬಿಲ್ ಖರ್ಚು ಹಾಕುತ್ತಿದ್ದಾರೆ’ ಎಂದು ದೂರಿದರು.

‘3ರವರೆಗೆ ಕಾಯೋಣ’: ‘ಉಡುಪಿಯ ಮೀನು ಸಂಸ್ಕರಣಾ ಕೇಂದ್ರಕ್ಕೆ ಹೋದ ತಾಲ್ಲೂಕಿನ ಯುವತಿಯವರು ಊರಿಗೆ ಬರಲಾಗುತ್ತಿಲ್ಲ. ಅವರನ್ನು ಕರೆ ತರಲು ಕ್ರಮ ಅಗತ್ಯ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಹೊರಗಿನಿಂದ ಜನರನ್ನು ಕರೆತರುವ ವಿಚಾರದ ಚರ್ಚೆ ದಯವಿಟ್ಟು ಬೇಡ. ಮೇ 3ರವರೆಗೆ ಕಾಯೋಣ. ಲಾಕ್‌ಡೌನ್ ಆದಾಗಿನಿಂದ ತಾಳ್ಮೆಯಿಂದ ಮನೆಯಲ್ಲಿದ್ದವರ ಊರಿಗೆ, ಈಗ ಹೊರಗಿನಿಂದ ಯಾರಾದರೂ ಬಂದರೆ ಏನು ಉತ್ತರ ಕೊಡಬೇಕು’ ಎಂದು ಪ್ರಶ್ನಿಸಿದರು.

ಉಪ ವಿಭಾಗಾಧಿಕಾರಿ ಎಂ.ಅಜಿತ್, ತಹಶೀಲ್ದಾರ್ ಮೇಘರಾಜ ನಾಯ್ಕ, ಕಾರ್ಯ ನಿರ್ವಾಹಕ ಅಧಿಕಾರಿ ಸಿ.ಟಿ.ನಾಯ್ಕ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಗಜಾನನ ಪೈ, ಪ್ರದೀಪ ನಾಯಕ, ಗಾಯತ್ರಿ ಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು