ಗುರುವಾರ , ಮಾರ್ಚ್ 23, 2023
30 °C
ಕಾರವಾರ ತಾಲ್ಲೂಕು ಹಳಗಾ ಗ್ರಾಮದ ದೋಲ್‌ನಲ್ಲಿ ವ್ಯವಸಾಯಕ್ಕೆ ಚಾಲನೆ

ಪಾಳು ಜಮೀನು ಪುನಃ ಹಸಿರಾಗಲಿ: ಶಾಸಕಿ ರೂಪಾಲಿ ನಾಯ್ಕ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಪಾಳುಬಿಟ್ಟಿರುವ ಜಮೀನನ್ನು ಪುನಃ ಕೃಷಿ ಮಾಡಬೇಕು. ಆ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು’ ಎಂದು ಶಾಸಕಿ ರೂಪಾಲಿ ನಾಯ್ಕ ಕಿವಿಮಾತು ಹೇಳಿದರು.

ತಾಲ್ಲೂಕಿನ ಹಳಗಾ ಗ್ರಾಮದ ದೋಲ್ ಎಂಬಲ್ಲಿ ತಾವು ಗೇಣಿಗೆ ಪಡೆದುಕೊಂಡ ಹೊಲಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ರೈತರಿಂದ ಗೇಣಿಗೆ ಪಡೆದ ಗದ್ದೆಗಳಲ್ಲಿ ಹಲವು ಸುತ್ತು ಟ್ರ್ಯಾಕ್ಟರ್ ಚಲಾಯಿಸಿ ಉಳುಮೆ ಮಾಡಿ ಗಮನ ಸೆಳೆದರು. 

‘ಈ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ, ಪ್ರವಾಹ ಹಾಗೂ ಕೂಲಿ ಕಾರ್ಮಿಕರ ಕೊರತೆಯಿಂದ ರೈತರು ಬೇಸಾಯ ಮಾಡುವುದನ್ನು ನಿಲ್ಲಿಸಿದ್ದಾರೆ. ಸುಮಾರು 300 ಎಕರೆ ಜಮೀನು ಪಾಳುಬಿದ್ದಿದೆ. ಇಲ್ಲಿನ ಹಲವು ಮನೆಗಳಲ್ಲಿ ವೃದ್ಧ ಪಾಲಕರ ಮಕ್ಕಳು ಗೋವಾ, ಬೆಂಗಳೂರಿಗೆ ಕಡಿಮೆ ವೇತನದ ಕೆಲಸಕ್ಕೆ ಹೋಗಿದ್ದಾರೆ. ಗ್ರಾಮಗಳಲ್ಲಿ ಹಿರಿಯರು ಮಾತ್ರ ಇರುತ್ತಾರೆ. ಕೋವಿಡ್‌ನಂತಹ ಸಂದರ್ಭದಲ್ಲಿ ಜನ ಆಹಾರಕ್ಕೂ ತೊಂದರೆ ಪಡುತ್ತಿದ್ದಾರೆ. ಇಂಥ ಸಮಯದಲ್ಲಿ ಕೃಷಿಯ ಮಹತ್ವವನ್ನು ಯುವಕರಿಗೆ ತಿಳಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ವಿವರಿಸಿದರು.

‘ಅಂಕೋಲಾ ತಾಲ್ಲೂಕಿನ ವಂದಿಗೆಯಲ್ಲಿ 35 ಎಕರೆ, ಕಾರವಾರ ತಾಲ್ಲೂಕಿನ ದೋಲ್‌ನಲ್ಲಿ 15 ಮತ್ತು ದೇವಳಮಕ್ಕಿಯಲ್ಲಿ 15 ಎಕರೆ ಜಮೀನನ್ನು ರೈತರಿಗೆ ಗೇಣಿಗೆ ಪಡೆದುಕೊಂಡಿದ್ದೇನೆ. ಇಲ್ಲಿ ಕೃಷಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಇತರರಿಗೂ ಪ್ರೇರಣೆಯಾಗಲಿ ಎಂಬುದು ಆಶಯವಾಗಿದೆ’‌ ಎಂದರು.

‘ಗದ್ದೆಗಳಲ್ಲಿ ಭತ್ತ, ತರಕಾರಿ, ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆಗೆ ಅವಕಾಶವಿದೆ. ಕಾರವಾರ ಮತ್ತು ಅಂಕೋಲಾ ತಾಲ್ಲೂಕುಗಳು ಹಲವು ತರಕಾರಿಗೆ ಹಾವೇರಿ, ಬೆಳಗಾವಿಯಂಥ ಜಿಲ್ಲೆಗಳನ್ನು ಅವಲಂಬಿಸಿದೆ. ಅದರ ಬದಲು ಸ್ಥಳೀಯವಾಗಿಯೇ ಬೆಳೆದರೆ ಗ್ರಾಹಕರಿಗೂ ರೈತರಿಗೂ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ವಹಣೆಗೂ ಸಹಕಾರಿಯಾಗಲಿದೆ. ಕಾರವಾರದಲ್ಲಿ ಸದ್ಯಕ್ಕೆ ಸಮಿತಿಯು ಸ್ತಬ್ಧವಾಗಿದೆ. ನಮ್ಮ ಈ ಕಾರ್ಯದಿಂದ ಮತ್ತೊಂದಷ್ಟು ಮಂದಿ ಪ್ರೇರಣೆ ಪಡೆದು ಎರಡು, ಮೂರು ವರ್ಷಗಳಲ್ಲಿ ಕ್ಷೇತ್ರದ ಎಲ್ಲ ಕಡೆಯೂ ವ್ಯವಸಾಯ ಪುನಃ ಶುರುವಾಗಲಿ’ ಎಂದು ಆಶಿಸಿದರು.

‘ಈ ಭಾಗದಲ್ಲಿ ಕೆಲವು ವರ್ಷಗಳ ಹಿಂದಿನವರಿಗೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಿದ್ದರು. ನಾವು ಪಡೆದುಕೊಂಡ ಜಮೀನಿನಲ್ಲಿ ಅದರ ಕೃಷಿ ಮಾಡುವ ಬಗ್ಗೆಯೂ ಯೋಚಿಸಿದ್ದೇವೆ. ಅಂತೆಯೇ ಹೈನುಗಾರಿಕೆಗೂ ಆಸಕ್ತಿ ಹೊಂದಿದ್ದು, ಹೆಚ್ಚು ಹಾಲು ಉತ್ಪಾದಿಸುವ ತಳಿಗಳನ್ನು ಸಲಹುವ ಬಗ್ಗೆ ಚಿಂತಿಸಲಾಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಹಾಲಿಗೂ ಉತ್ತಮ ಮಾರುಕಟ್ಟೆ ಕಂಡುಕೊಳ್ಳಲು ರೈತರಿಗೆ ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಕೃಷಿಯಿಂದ ವಿಮುಖ
ಕಾರವಾರ:
ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಬರ್ಗಲ್ ಹಳ್ಳದ ಸಮೀಪ ಇರುವ ಗದ್ದೆಯಲ್ಲಿ ಭಾರಿ ಮಳೆಯಿಂದ ಪ್ರವಾಹ ಸಂಭವಿಸುವ ಆತಂಕದಿಂದ ಆ ಭಾಗದ ರೈತರು ಭತ್ತ ಮತ್ತು ಕಬ್ಬು ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.

ಹಳ್ಳದ ಸಮೀಪ ಇರುವ ಸಂತೋಷ ಗುನಗಿ ಅವರ ಕಬ್ಬು ಬೆಳೆ ಮತ್ತು ಉಮೇಶ್ ವೈಂಗಣಕರ ಅವರ ಭತ್ತದ ಬೆಳೆಯು ಈ ವರ್ಷ ಸಂಪೂರ್ಣವಾಗಿ ಹಾನಿಗೀಡಾಗಿದೆ. ಎಲ್ಲ ದಾಖಲೆಗಳನ್ನು ಒದಗಿಸಿದರೂ ಅವರಿಗೆ ಪರಿಹಾರ ಬಂದಿಲ್ಲ ಎಂಬ ಬೇಸರ ಅವರದ್ದಾಗಿದೆ.

‘ಈ ರೀತಿ ಬೆವರು ಸುರಿಸಿ ಬೆಳೆದ ಬೆಳೆಯು ಪ್ರವಾಹಕ್ಕೆ ತುತ್ತಾಗುವುದು ಹಾಗೂ ಪರಿಹಾರ ಸಿಗದಿರುವುದು ರೈತರನ್ನು ನಿರಾಸೆಗೆ ದೂಡಿದೆ. ಇಲ್ಲಿನವರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಹಳ್ಳದ ನೀರು ಉಕ್ಕಿ ಹರಿದು ಕೃಷಿ ಜಮೀನಿಗೆ ಬಾರದಂತೆ ತಡೆಯುವ ಕಾಮಗಾರಿ ಆಗಬೇಕು’ ಎಂದು ಸ್ಥಳೀಯ ನಿವಾಸಿ ಪ್ರಜ್ವಲ್ ಬಾಬುರಾಯ ಶೇಟ್ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು