ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರದ ಕೆಳಗಿನೂರು: ವಾಹನಕ್ಕೆ ಸಿಲುಕಿ ಕೋತಿಗಳು ಸಾವು

ವನ್ಯಜೀವಿ ಬಲಿ ನಿಯಂತ್ರಿಸಲು ಕ್ರಮಕ್ಕೆ ಆಗ್ರಹ
Last Updated 26 ಸೆಪ್ಟೆಂಬರ್ 2021, 16:12 IST
ಅಕ್ಷರ ಗಾತ್ರ

ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊನ್ನಾವರ ತಾಲ್ಲೂಕಿನ ಕೆಳಗಿನೂರಿನ ಅಬಿತೋಟ ಇಳಿಜಾರು ಪ್ರದೇಶದಲ್ಲಿ ಪದೇಪದೇ ಮಂಗಗಳು ವಾಹನಗಳ ಕೆಳಗೆ ಸಿಲುಕಿ ಸಾಯುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಅಬಿತೋಟದಿಂದ ಆರಂಭವಾಗಿ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಮಂಗಗಳ ಹಿಂಡು ರಸ್ತೆ ದಾಟುತ್ತವೆ. ಆಗ ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ಸಾಯುತ್ತಿವೆ. ಕೈ, ಕಾಲು ಮುರಿದುಕೊಂಡು ಯಾತನೆ ಪಡುತ್ತ ಅರಚುವುದನ್ನು ನೋಡಿದರೆ ಕಣ್ಣೀರು ಬರುತ್ತದೆ. ಆಗಾಗ ಈ ರೀತಿಯ ಘಟನೆಗಳು ಆಗುತ್ತಿದ್ದರೂ ಹಲವರು ಸ್ಪಂದಿಸುತ್ತಿಲ್ಲ. ಕೆಲವರು ಮುತುವರ್ಜಿ ತೋರಿಸಿದರೂ ಬಾಯಿಗೆ ನೀರು ಹಾಕುವಷ್ಟರಲ್ಲಿ ಅವುಗಳ ಉಸಿರು ನಿಂತು ಬಿಡುತ್ತದೆ. ಇಲ್ಲಿ ಪ್ರಾಣಿಗಳನ್ನು ಚಿಕಿತ್ಸೆಗೆ ಸಾಗಿಸಲು ಆಂಬುಲೆನ್ಸ್ ಇಲ್ಲ’ ಎಂದು ಹೊನ್ನಾವರದ ಶ್ರೀಕಾಂತ ಪಟಗಾರ್ ಬೇಸರಿಸುತ್ತಾರೆ.

‘ಅರಣ್ಯ ನಾಶದಿಂದ ಕಾಡಿನ ಪ್ರಾಣಿಗಳು ಆಹಾರ ಅರಸಿ ಹತ್ತಿರದ ತೋಟಗಳಿಗೆ ಬರುತ್ತಿವೆ. ಅದರಲ್ಲೂ ಮಂಗಗಳು ಗುಂಪು ಗುಂಪಾಗಿ ಇರುವುದರಿಂದ ರಸ್ತೆ ದಾಟುವಾಗ ಒಂದರ ಹಿಂದೆ ಒಂದರಂತೆ ಸಾಗುತ್ತವೆ. ಅದೇ ಸಮಯಕ್ಕೆ ಬರುವ ವಾಹನಗಳ ಚಕ್ರಕ್ಕೆ ಸಿಲುಕಿ ಸಾಯುತ್ತವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಮೇಲ್ಸೇತುವೆ ನಿರ್ಮಿಸಿ’:

‘ನಿರ್ದಿಷ್ಟ ಪ್ರದೇಶದಲ್ಲೇ ಕೋತಿಗಳ ಹಿಂಡು ರಸ್ತೆ ದಾಟುವ ಕಾರಣ, ಅವುಗಳ ಅನುಕೂಲಕ್ಕಾಗಿ ಸಣ್ಣದಾದ ಮೇಲ್ಸೇತುವೆ ನಿರ್ಮಿಸಬಹುದು’ ಎಂದು ಶ್ರೀಕಾಂತ ಪಟಗಾರ್ ಸಲಹೆ ನೀಡಿದ್ದಾರೆ.

‘ಪ್ರವಾಹದಿಂದ ಆವೃತವಾದ ನಡುಗಡ್ಡೆಯಲ್ಲಿ ಸಿಲುಕಿದ ಮಂಗಗಳು ನದಿಯನ್ನು ದಾಟಿ ಬರಲು ಅನುಕೂಲ ಆಗುವಂತೆ ಬಲೆಯಿಂದ ಹೆಣೆಯಲಾದ ಸೇತುವೆ ನಿರ್ಮಿಸಲಾಗುತ್ತದೆ. ಅದೇ ಮಾದರಿಯನ್ನು ಇಲ್ಲೂ ಅನುಸರಿಸಬಹುದು. ರಸ್ತೆಯ ಅಕ್ಕಪಕ್ಕಗಳಲ್ಲಿ ಪ್ರಾಣಿಗಳು ದಾಟುವ ಪ್ರದೇಶವೆಂದು ಸೂಚನಾ ಫಲಕ ಅಳವಡಿಸಬೇಕು. ಆ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಅಳವಡಿಸಿ ವಾಹನಗಳ ವೇಗವನ್ನು ನಿಯಂತ್ರಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT