ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್ ತೆರವಿನ ನಂತರ ವಾಹನ ದುರಸ್ತಿಗೆ ಹೆಚ್ಚಿದ ಆದ್ಯತೆ

ಲಾಕ್‍ಡೌನ್ ತೆರವುಗೊಂಡರೂ ಹೊಸ ವಾಹನಗಳ ಖರೀದಿಗೆ ನಿರಾಸಕ್ತಿ
Last Updated 12 ಜುಲೈ 2021, 19:30 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್ ಕಾರಣಕ್ಕೆ ಮಾಡಲಾದ ಲಾಕ್‍ಡೌನ್ ತೆರವುಗೊಂಡು ವಾರ ಕಳೆದಿದ್ದು, ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಖರೀದಿ ಅಷ್ಟಾಗಿ ಇಲ್ಲ. ಆದರೆ, ಹಳೆಯ ವಾಹನಗಳನ್ನು ದುರಸ್ತಿಪಡಿಸಿಕೊಳ್ಳಲು ಜನರು ವಾಹನಗಳ ಸೇವಾ ಕೇಂದ್ರ, ಗ್ಯಾರೇಜುಗಳ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಕೋವಿಡ್ ಮೊದಲ ಅಲೆ ವೇಳೆ ಮಾಡಿದ್ದ ಲಾಕ್‍ಡೌನ್ ತೆರವುಗೊಂಡ ಬಳಿಕ ಹೊಸ ವಾಹನಗಳ ಖರೀದಿ ಚುರುಕಾಗಿತ್ತು. ಎರಡನೇ ಅಲೆಯ ಬಳಿಕ ಹೊಸ ವಾಹನಗಳ ಖರೀದಿಗೆ ಜನರು ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಲಾಕ್‌ಡೌನ್‌ ಕಾರಣದಿಂದ ವ್ಯಾಪಾರ, ವಹಿವಾಟು ನಡೆಯದೇ ಜನರ ಬಳಿ ಹಣದ ಹರಿವಿನ ಪ್ರಮಾಣ ಕುಸಿದ ಕಾರಣ ಇರುವ ಸೌಲಭ್ಯ ಸುಧಾರಿಸಿಕೊಳ್ಳಲಷ್ಟೇ ಆಸಕ್ತಿ ತೋರುತ್ತಿದ್ದಾರೆ. ಪರಿಣಾಮ ಹಳೆಯ ವಾಹನದ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ನಗರದಲ್ಲಿರುವ ಪ್ರಮುಖ ಕಂಪನಿಗಳ ವಾಹನ ಸೇವಾ ಕೇಂದ್ರಗಳಲ್ಲಿ (ಸರ್ವೀಸ್ ಸೆಂಟರ್), ಸಾಮಾನ್ಯ ಗ್ಯಾರೇಜುಗಳಲ್ಲಿ ದುರಸ್ತಿಗೆ ತಂದಿಡಲಾದ ಬೈಕ್‌, ಸ್ಕೂಟರ್‌ಗಳ ರಾಶಿ ಕಾಣಸಿಗುತ್ತಿದೆ. ಕಾರುಗಳ ಮಾಲೀಕರೂ ವಾಹನಗಳ ದುರಸ್ತಿಗೆ ಮುಂದಾಗುತ್ತಿದ್ದಾರೆ.

ಸುಮಾರು ಎರಡು ತಿಂಗಳುಗಳ ಕಾಲ ವಾಹನಗಳ ಓಡಾಟ ಕಡಿಮೆ ಇತ್ತು. ಬಳಕೆಯಾಗದೆ ನಿಂತ ವಾಹನಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ. ಮಳೆಗಾಲಕ್ಕೆ ಮುನ್ನ ವಾಹನಗಳ ಸಣ್ಣಪುಟ್ಟ ದುರಸ್ತಿ ಮಾಡಿಸಿಕೊಳ್ಳುವ ವಾಡಿಕೆಯೂ ಇದೆ. ಹೀಗಾಗಿ, ದುರಸ್ತಿಗಾರರಿಗೆ ಈಗ ಬಿಡುವಿಲ್ಲದಷ್ಟು ಕೆಲಸ ಸಿಕ್ಕಿದೆ.

‘ಕಳೆದ ಒಂದು ವಾರದ ಅವಧಿಯಲ್ಲಿ ಬೆರಳೆಣಿಕೆಯಷ್ಟು ವಾಹನಗಳಷ್ಟೇ ಮಾರಾಟವಾಗಿವೆ. ಈಚಿನ ವರ್ಷಗಳ ಸರಾಸರಿ ಪ್ರಮಾಣಕ್ಕೆ ಹೋಲಿಸಿದರೆ ಸದ್ಯದ ವಾಹನ ಖರೀದಿ ಪ್ರಮಾಣ ಕುಸಿಯುವ‌ ಆತಂಕವಿದೆ. ಸ್ಥಿತಿವಂತರಷ್ಟೇ ವಾಹನ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಸಾಲ ಪಡೆದು ವಾಹನ ಖರೀದಿಸಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ನಗರದ ಶಕ್ತಿ ಮೋಟಾರ್ಸ್ ಮಾಲೀಕ ರಾಜು ಬಳ್ಳಾರಿ.

‘ಆದರೆ, ಹಳೆಯ ವಾಹನಗಳನ್ನು ದುರಸ್ತಿ ಮಾಡಿಸಲು ದಿನವೂ ನೂರಾರು ಜನರು ಬರುತ್ತಿದ್ದಾರೆ. ತೀರಾ ಹಳತಾದ ವಾಹನಗಳ ದುರಸ್ತಿಗೂ ಹಣ ಖರ್ಚು ಮಾಡಲು ವಾಹನ ಮಾಲೀಕರು ಮುಂದಾಗಿದ್ದಾರೆ’ ಎಂದು ಗ್ರಾಹಕರ ಪರಿಸ್ಥಿತಿ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT