ಬುಧವಾರ, ಏಪ್ರಿಲ್ 1, 2020
19 °C
ಕಾರವಾರಕ್ಕೆ ಸಾಗಣೆಯ ವೆಚ್ಚ ಭರಿಸಲಿರುವ ನೌಕಾಪಡೆ: ಮರುಜೋಡಣೆಗೆ ರಾಜ್ಯದಿಂದ ಹಣ

‘ಟುಪಲೇವ್’ ಸಂಗ್ರಹಾಲಯಕ್ಕೆ ವಾರದಲ್ಲಿ ಒಪ್ಪಂದ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದಲ್ಲಿ ‘ಟುಪಲೇವ್’ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ನೋಡುವ ನಾಗರಿಕರ ಕನಸು ಸದ್ಯದಲ್ಲೇ ನನಸಾಗಲಿದೆ. ತಮಿಳುನಾಡಿನಿಂದ ವಿಮಾನವನ್ನು ತರುವ ನಿಟ್ಟಿನಲ್ಲಿ ನೌಕಾಪಡೆ ಮತ್ತು ರಾಜ್ಯ ಸರ್ಕಾರದೊಂದಿಗೆ ಇನ್ನೊಂದು ವಾರದಲ್ಲಿ ಒಪ್ಪಂದ ಏರ್ಪಡುವ ನಿರೀಕ್ಷೆಯಿದೆ. 

ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ನೌಕಾನೆಲೆ ಪ್ರದೇಶದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್, ವಿಮಾನದ ಸಾಗಣೆ ಮತ್ತು ಸ್ಥಾಪನೆಗೆ ಅಗತ್ಯವಿರುವ ಖರ್ಚು ವೆಚ್ಚಗಳ ಬಗ್ಗೆ ವಿವರಿಸಿದರು.

‘ಭಾರತೀಯ ನೌಕಾಪಡೆಯಿಂದ ನಿವೃತ್ತಿಯಾದ ಮೂರು ಟುಪಲೇವ್ (TU-142) ಯುದ್ಧ ವಿಮಾನಗಳನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಡಿಸಲು ಉದ್ದೇಶಿಸಲಾಗಿದೆ. ಕಾರವಾರ, ವಿಶಾಖಪಟ್ಟಣ ಹಾಗೂ ಕೋಲ್ಕತ್ತಕ್ಕೆ ಈ ವಿಮಾನಗಳನ್ನು ಮಂಜೂರು ಮಾಡಲಾಗಿದೆ’ ಎಂದರು.

‘ಕಾರವಾರದಲ್ಲಿ ವಿಮಾನದ ಸ್ಥಾಪನೆಗೆ ಹಣಕಾಸು ನೆರವು ನೀಡುವಂತೆ ರಾಜ್ಯ ಸರ್ಕಾರವು ನೌಕಾನೆಲೆಗೆ ಮನವಿ ಮಾಡಿತ್ತು. ಈ ನಿಟ್ಟಿನಲ್ಲಿ ವಿಮಾನದ ಸಾಗಣೆಗೆ ಅಗತ್ಯವಿರುವ ₹ 4 ಕೋಟಿಯನ್ನು ನೌಕಾಪಡೆ ಭರಿಸಲಿದೆ. ಅದರ ಮರು ಜೋಡಣೆಗೆ ₹ 2 ಕೋಟಿ ಅಗತ್ಯವಿದ್ದು, ಅದನ್ನು ರಾಜ್ಯ ಸರ್ಕಾರ ನೀಡಲಿದೆ. ಈ ಸಂಬಂಧ ಇನ್ನೊಂದು ವಾರದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಗುವುದು’ ಎಂದು ತಿಳಿಸಿದರು.

‘ವಿಶಾಖಪಟ್ಟಣದಲ್ಲಿ ಈಗಾಗಲೇ ವಸ್ತು ಸಂಗ್ರಹಾಲಯದ ಸ್ಥಾಪನೆಯಾಗಿದ್ದು, 2017ರ ಡಿ.8ರಂದು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ. ಇದಕ್ಕೆ ಆಂಧ್ರಪ್ರದೇಶ ಸರ್ಕಾರವು ₹ 15 ಕೋಟಿ ವೆಚ್ಚದ ಮಾಡಿದೆ. ವಿಮಾನದ ಸುತ್ತ ಥೀಮ್ ಪಾರ್ಕ್ ನಿರ್ಮಿಸಿ ಸ್ಥಳವನ್ನು ಮತ್ತಷ್ಟು ಸುಂದರಗೊಳಿಸಲಾಗಿದೆ. ಕೋಲ್ಕತ್ತದಲ್ಲಿ ವಿಮಾನ ಸ್ಥಾಪಿಸಲು ಪಶ್ಚಿಮ ಬಂಗಾಳ ಸರ್ಕಾರವು ₹ 5 ಕೋಟಿ ಮಂಜೂರು ಮಾಡಿದೆ’ ಎಂದು ಅವರು ತಿಳಿಸಿದರು.

40 ಟ್ರಕ್‌ಗಳಲ್ಲಿ ಸಾಗಣೆ!: ‘ಚೆನ್ನೈನ ಆರಕ್ಕೋಣಂ ವಾಯುನೆಲೆಯಲ್ಲಿರುವ ವಿಮಾನವೊಂದನ್ನು ಕಾರವಾರಕ್ಕೆ ತರಲಾಗುತ್ತದೆ. ಅದರ ಭಾಗಗಳನ್ನು ಸಂಪೂರ್ಣವಾಗಿ ಕಳಚಿ 40 ಟ್ರಕ್‌ಗಳಲ್ಲಿ ರಸ್ತೆಯ ಮೂಲಕ ಸಾಗಿಸಲಾಗುತ್ತದೆ. ಕೇವಲ ಸಾಗಣೆಯ ವೆಚ್ಚವೇ ₹ 4 ಕೋಟಿ ಆಗಲಿದೆ’ ಎಂದು ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ವಿವರಿಸಿದರು. 

‘ಕಾರವಾರದಲ್ಲಿ ವಿಮಾನ ನಿಲ್ಲಿಸಲು ವೇದಿಕೆಯೂ ಸೇರಿದಂತೆ ವಿವಿಧ ಅಗತ್ಯ ಕಾಮಗಾರಿಗಳು ಆರಂಭವಾಗುತ್ತಿದ್ದಂತೆ ಚೆನ್ನೈನಿಂದ ವಿಮಾನವನ್ನು ರವಾನಿಸಲು ಕ್ರಮ ಕೈಗೊಳ್ಳಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ನಾಲ್ಕು ತಿಂಗಳು ಬೇಕಾಗಬಹುದು’ ಎಂದು ಅವರು ತಿಳಿಸಿದರು.

ರಷ್ಯಾ ನಿರ್ಮಿತ ಟುಪಲೇವ್ (TU-142) ಯುದ್ಧ ವಿಮಾನಗಳು ಭಾರತೀಯ ನೌಕಾಪಡೆಯಲ್ಲಿ ಸುಮಾರು 29 ವರ್ಷ ಸೇವೆ ಸಲ್ಲಿಸಿದ್ದವು. ಅಪಘಾತ ರಹಿತವಾಗಿ ಸುಮಾರು 30 ಸಾವಿರ ಗಂಟೆ ಹಾರಾಟ ನಡೆಸಿದ ಹೆಗ್ಗಳಿಕೆ ಈ ವಿಮಾನಕ್ಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು