ಗುರುವಾರ , ಜೂನ್ 24, 2021
21 °C
ಗೋಕರ್ಣ ಅಭಿವೃದ್ಧಿ ಚರ್ಚೆಯಲ್ಲಿ ಅರಣ್ಯ ಉಪಸಂರಕ್ಷಣಾ ಅಧಿಕಾರಿ ಪ್ರವೀಣ ಬಸ್ರೂರು

ಮಳೆಯಾದರೂ ಟ್ಯಾಂಕರ್ ನೀರಿನ ಅವಲಂಬನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಗೋಕರ್ಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅಕ್ರಮ, ಅನೈತಿಕ ಚಟುವಟಿಕೆಗಳು ತಾಣವಾಗಿದ್ದ ಧಾರ್ಮಿಕ ಕೇಂದ್ರ ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿದೆ ಎಂದು ಅರಣ್ಯ ಉಪಸಂರಕ್ಷಣಾಧಿಕಾರಿ ಪ್ರವೀಣ ಬಸ್ರೂರು ಹೇಳಿದರು.

ಇಲ್ಲಿ ಎನ್.ಆರ್.ಜಿ. ಪರಿವಾರ ಶುಕ್ರವಾರ ಆಯೋಜಿಸಿದ್ದ ಗೋಕರ್ಣ ಅಭಿವೃದ್ಧಿಯ ಬಗೆಗಿನ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಗೋಕರ್ಣದಲ್ಲಿ ಕುಡಿಯುವ ನೀರು ಹಾಗೂ ಕೊಳಚೆಯದ್ದೇ ಪ್ರಮುಖ ಸಮಸ್ಯೆ. ಪ್ರತಿವರ್ಷ 4,000 ಮಿಲಿ ಮೀಟರ್ ಮಳೆಯಾಗುತ್ತಿದೆ. ಅದೇ ದೂರದ ಕೋಲಾರದಲ್ಲಿ 400 ಮಿಲಿ ಮೀಟರ್ ಮಳೆಯಾಗುತ್ತದೆ. ಆದರೆ, ಗೋಕರ್ಣದಲ್ಲಿ ಫೆಬ್ರುವರಿಯ ನಂತರ ಟ್ಯಾಂಕರ್ ನೀರನ್ನು ಅವಲಂಬಿಸಬೇಕಾಗಿದೆ’ ಎಂದು ಅವರು ವಿಷಾದಿಸಿದರು.

ಸಾಕಷ್ಟು ಮಳೆಯಾದರೂ ಸಮರ್ಪಕವಾಗಿ ನೀರಿನ ಸಂರಕ್ಷಣೆಯಾಗುತ್ತಿಲ್ಲ. ಕೊಳಚೆ ನೀರಿನ ವಿಲೇವಾರಿಯೂ ಸರಿ ಇಲ್ಲ ಎಂದು ಸಮಸ್ಯೆಗಳನ್ನು ಜನರ ಮುಂದೆ ಬಿಚ್ಚಿಟ್ಟರು.

ಚಿತ್ರೋದ್ಯಮದ ಶಶಿಧರ ಭಟ್ ಮಾತನಾಡಿ, ‘ಸಮುದ್ರ, ಸಾಗರ, ನದಿ, ಜಲಪಾತ, ಅರಣ್ಯ ಹಾಗೂ ಬಯಲುಸೀಮೆ ಎಲ್ಲವನ್ನೂ ಒಳಗೊಂಡ ಜಿಲ್ಲೆ ಉತ್ತರಕನ್ನಡ ಜಿಲ್ಲೆ. ನೈಸರ್ಗಿಕ ಸುಂದರ ಪರಿಸರ ಒಳಗೊಂಡ ಗೋಕರ್ಣ ತನ್ನತನ ಉಳಿಸಿಕೊಳ್ಳಬೇಕಾಗಿದೆ’ ಎಂದರು.

ಐ.ಎ.ಎಸ್.ಅಧಿಕಾರಿ ನಿತಿನ್ ಮಾತನಾಡಿ, ‘ಇಲ್ಲಿನ ಜನರ ಅಂತರಂಗ ಶುದ್ಧವಾಗಿದೆ. ಹಾಗಿರುವಾಗ ಬಹಿರಂಗವಾಗಿ ಯಾಕೆ ನಾವು ಸ್ವಚ್ಛವಾಗಿ ಇರಬಾರದು. ಗೋಕರ್ಣ ಪ್ಲಾಸ್ಟಿಕ್ ಮುಕ್ತವಾಗಬೇಕು. ಪ್ಲಾಸ್ಟಿಕ್ ತಿಂದು ಗೋವುಗಳು ಸಾಯುವುದು ಗೋಹತ್ಯೆಗಿಂತ ಮಹಾಪಾಪ’ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹಾಲಕ್ಷ್ಮೀ ಬಡ್ತಿ, ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ಜಿಲ್ಲಾ ಪಂಚಾಯ್ತಿ ಸದಸ್ಯೆ ಗಾಯತ್ರಿ ಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯ ಮಹೇಶ ಶೆಟ್ಟಿ, ವೈದ್ಯಾಧಿಕಾರಿ ಜಗದೀಶ ನಾಯ್ಕ, ಎನ್.ಆರ್.ಜಿ. ಪರಿವಾರದ ಅಧ್ಯಕ್ಷ ವಿಶ್ವನಾಥ ಗೋಕರ್ಣ ಮಾತನಾಡಿದರು. ಶಿಕ್ಷಕ ಗಂಗಾಧರ ಭಟ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು