ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಗೆ ಬಾರದ ವಾಣಿಜ್ಯ ಸಂಕೀರ್ಣ

ಹಸ್ತಾಂತರಗೊಂಡು ಹತ್ತು ತಿಂಗಳಾದರೂ ಬಳೆಕಯಿಲ್ಲ: ಕ್ರಮಕ್ಕೆ ಆಗ್ರಹ
Last Updated 2 ಡಿಸೆಂಬರ್ 2020, 11:17 IST
ಅಕ್ಷರ ಗಾತ್ರ

ಶಿರಸಿ: ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದು ಸರ್ಕಾರಿ ಇಲಾಖೆಗಳಿಗೆ ಸಲೀಸು ಎಂಬ ಆರೋಪಕ್ಕೆ ವಿದ್ಯಾನಗರದಲ್ಲಿ ಕಳೆದ ವರ್ಷ ಕರಾವಳಿ ಅಭಿವೃದ್ಧಿ ಪ್ರಾಧಿಕಾರದವರು ನಿರ್ಮಿಸಿ, ನಗರಸಭೆಗೆ ಹಸ್ತಾಂತರಿಸಿದ ಕಟ್ಟಡವೇ ಸಾಕ್ಷಿಯಾಗಿದೆ!

ಯಲ್ಲಾಪುರ ರಸ್ತೆಯ ಪಕ್ಕ ಈ ಕಟ್ಟಡವನ್ನು ₹20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕರಾವಳಿ ಪ್ರಾಧಿಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಕಟ್ಟಡವನ್ನು ಕಳೆದ ಫೆ.5 ರಂದು ನಗರಸಭೆಗೆ ಹಸ್ತಾಂತರಿಸಲಾಗಿತ್ತು. ವಾಣಿಜ್ಯ ಉದ್ದೇಶಕ್ಕೆ ನೀಡಲು ಈ ಕಟ್ಟಡ ನಿರ್ಮಾಣಗೊಂಡಿದೆ.

‘ಒಂಬತ್ತು ತಿಂಗಳು ಕಳೆಯುತ್ತ ಬಂದರೂ ಬಾಡಿಗೆ ನೀಡುವ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿ, ತೆರಿಗೆ ಹಣ ಅನಗತ್ಯವಾಗಿ ಪೋಲಾದಂತಾಗುತ್ತದೆ. ಇದಕ್ಕೆ ಆಸ್ಪದ ನೀಡಬಾರದು’ ಎನ್ನುತ್ತಾರೆ ನಗರಸಭೆ ಸದಸ್ಯ ಕಿರಣ್ ಶೆಟ್ಟಿ.

‘ಕಟ್ಟಡ ಖಾಲಿ ಇರುವ ಕಾರಣಕ್ಕೆ ಅಲ್ಲಿ ಅಕ್ರಮ ಚಟುವಟಿಕೆಗೆ ಆಸ್ಪದ ನೀಡಿದಂತಾಗಿದೆ. ಮದ್ಯವ್ಯಸನಿಗಳು ಇಲ್ಲಿ ಕುಡಿದು ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಲಕ್ಷಾಂತರ ವೆಚ್ಚ ಮಾಡಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡುವ ಅಗತ್ಯವಿತ್ತೇ’ ಎಂಬುದು ಅವರ ಪ್ರಶ್ನೆ.

‘ಮೊದಲಿದ್ದ ಮೀನು ಮಾರುಕಟ್ಟೆ ತೆರವುಗೊಳಿಸಿ ಈ ಕಟ್ಟಡ ನಿರ್ಮಿಸಲಾಗಿದೆ. ಆದರೆ ಕಟ್ಟಡದ ಎದುರು ಜಲ್ಲಿಕಲ್ಲು, ಮರಳಿನ ರಾಶಿ ಸುರಿಯಲಾಗುತ್ತಿದೆ. ಇದ್ದೂ ಬಳಕೆಗೆ ಇಲ್ಲದಂತಾಗಿಸುವ ಬದಲು, ಕಟ್ಟಡವನ್ನು ಬಾಡಿಗೆಗೆ ನೀಡುವಂತಾಗಬೇಕು’ ಎಂದು ಒತ್ತಾಯಿಸಿದರು.

‘ಕಟ್ಟಡ ಹಸ್ತಾಂತರಗೊಂಡ ಬೆನ್ನಲ್ಲೇ ಕೊರೊನಾ ಕಾರಣಕ್ಕೆ ಲಾಕ್‍ಡೌನ್ ಆಯಿತು. ಇದರಿಂದ ಕಟ್ಟಡವನ್ನು ಬಾಡಿಗೆಗೆ ನೀಡುವ ಪ್ರಕ್ರಿಯೆಗೆ ಹಿನ್ನಡೆ ಉಂಟಾಯಿತು’ ಎಂದು ಪೌರಾಯುಕ್ತ ರಮೇಶ ನಾಯಕ ಪ್ರತಿಕ್ರಿಯಿಸಿದರು.

‘ನಗರಸಭೆ ಸಾಮಾನ್ಯಸಭೆಯಲ್ಲಿ ಕಟ್ಟಡ ಬಾಡಿಗೆ ನೀಡುವ ಬಗ್ಗೆ ಚರ್ಚಿಸಿ ಒಪ್ಪಿಗೆ ಪಡೆಯಲಾಗಿದೆ. ಕಟ್ಟಡದ ಬಾಡಿಗೆ ಮೌಲ್ಯದ ಬಗ್ಗೆ ವರದಿ ನೀಡಲು ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT