ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಜಿಲ್ಲಾಡಳಿತ ಸಂಕೀರ್ಣಕ್ಕೆ ಹೊಸ ಟೆಂಡರ್

ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಮರುಜೀವ
Last Updated 18 ಜೂನ್ 2021, 17:08 IST
ಅಕ್ಷರ ಗಾತ್ರ

ಕಾರವಾರ: ನಗರದಲ್ಲಿ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಯೋಜನೆಗೆ ಮರುಜೀವ ಸಿಗುವ ಹಂತದಲ್ಲಿದೆ.

ಉದ್ದೇಶಿತ ಕಾಮಗಾರಿ ನಡೆಯುವ ಪ್ರದೇಶದಲ್ಲಿರುವ ಗ್ರಾಹಕರ ವೇದಿಕೆ ಕಟ್ಟಡ ತೆರವು ಮಾಡಲು ಒಪ್ಪಿಗೆ ದೊರೆತಿದೆ. ಹಾಗಾಗಿ ನೂತನ ಸಂಕೀರ್ಣ ಕಾಮಗಾರಿಗೆ ಮತ್ತೆ ಟೆಂಡರ್ ಪ್ರಕ್ರಿಯೆ ಶುರುವಾಗಿದೆ.

ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿದ್ದ ಹಳೆಯ ಎಸ್.ಪಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತದ ಬೃಹತ್ ಆಡಳಿತ ಕಚೇರಿ ಸಂಕೀರ್ಣ ತಲೆಯೆತ್ತಲಿದೆ. ಈ ಉದ್ದೇಶಕ್ಕಾಗಿ 2017ರಲ್ಲಿ ರಾಜ್ಯ ಸರ್ಕಾರ ₹ 25 ಕೋಟಿ ಅನುದಾನ ನೀಡಲು ಅನುಮೋದನೆ ನೀಡಿತ್ತು. ಆ ವರ್ಷ ನವೆಂಬರ್‌ನಲ್ಲಿ ನಗರಕ್ಕೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು.

ಆಗ ಕಾಮಗಾರಿಗೆ ಟೆಂಡರ್ ಆಗಿರಲಿಲ್ಲ. ಆ ಪ್ರದೇಶದಲ್ಲಿದ್ದ ಒಂದೂವರೆ ಶತಮಾನಗಳಷ್ಟು ಹಳೆಯ ಕಟ್ಟಡ ತೆರವು ಮಾಡಲು 2018ರಲ್ಲಿ ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗಿತ್ತು. ಗುತ್ತಿಗೆ ವಹಿಸಿಕೊಂಡಿದ್ದ ಕಂಪನಿ ತನ್ನ ಕೆಲಸ ಪೂರ್ಣಗೊಳಿಸಿತ್ತು. ಇದೇವೇಳೆ, ಹೊಸ ಕಟ್ಟಡದ ನಿರ್ಮಾಣಕ್ಕೆ ಕೂಡ ಟೆಂಡರ್ ಆಹ್ವಾನಿಸಲಾಗಿತ್ತು.

ಆ ಸಂದರ್ಭದಲ್ಲಿ ಗ್ರಾಹಕರ ಪರಿಹಾರ ವೇದಿಕೆಯ ಕಟ್ಟಡ ತೆರವು ಮಾಡಲು ಅನುಮತಿ ಸಿಕ್ಕಿರಲಿಲ್ಲ. ಇದರಿಂದ, ನೂತನ ಸಂಕೀರ್ಣ ನಿರ್ಮಾಣದ ಗುತ್ತಿಗೆ ಪಡೆದಿದ್ದ ಕಂಪನಿ, ಕಾಮಗಾರಿ ನಡೆಯುವ ಸ್ಥಳ ಸಂಪೂರ್ಣ ತೆರವು ಮಾಡದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಲಿಖಿತವಾಗಿ ತಿಳಿಸಿತ್ತು. ಇದರಿಂದ ಕಟ್ಟಡ ನಿರ್ಮಾಣದ ಪ್ರಕ್ರಿಯೆ ನಿಂತುಹೋಗಿತ್ತು. ಈಗ ಗ್ರಾಹಕರ ವೇದಿಕೆಯ ಕಟ್ಟಡ ತೆರವು ಮಾಡಲು ಅನುಮತಿ ಸಿಕ್ಕಿರುವ ಕಾರಣ, ಜುಲೈ 5ರಂದು ಮರು ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಿಟಿಷರ ‘ಕಲೆಕ್ಟರ್ ಕಚೇರಿ’:

ಜಿಲ್ಲಾಡಳಿತದ ಕಚೇರಿಗಳ ನೂತನ ಸಂಕೀರ್ಣ ನಿರ್ಮಾಣವಾಗುವ ಸ್ಥಳದಲ್ಲಿ ಈ ಹಿಂದೆ ಹಳೆಯ ಎಸ್.ಪಿ ಕಚೇರಿಯಿತ್ತು. 1864ರ ಆಸುಪಾಸಿನಲ್ಲಿ ನಿರ್ಮಾಣವಾಗಿದ್ದ ಆ ಕಟ್ಟಡ, ಬ್ರಿಟಿಷರ ಆಡಳಿತದಲ್ಲಿ ‘ಕಲೆಕ್ಟರ್ ಕಚೇರಿ’ಯಾಗಿತ್ತು. ಅಂದು ಸುಮಾರು ₹ 40 ಸಾವಿರ ವೆಚ್ಚದಲ್ಲಿ ಕಟ್ಟಲಾಗಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಸ್ವಾತಂತ್ರ್ಯ ಬಂದ ಬಳಿಕ ಇದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಾಗಿತ್ತು. ಎಸ್‌.ಪಿ ಕಚೇರಿ ಹೊಸದಾಗಿ ನಿರ್ಮಾಣವಾದ ಬಳಿಕ ಇಲ್ಲಿ ರಾಜ್ಯ ಸರ್ಕಾರದ ವಿವಿಧ ಕಚೇರಿಗಳನ್ನು ತೆರೆಯಲಾಗಿತ್ತು. ಜಿಲ್ಲಾ ಖಜಾನೆ ಇಲಾಖೆ, ನಗರ ಯೋಜನಾ ಇಲಾಖೆ, ಸಣ್ಣ ನೀರಾವರಿ ಇಲಾಖೆ ಉಪವಿಭಾಗ, ರಾಜ್ಯ ಗುಪ್ತ ವಾರ್ತೆ, ಹವಾಮಾನ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಆಹಾರ ನಿಗಮ, ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರ, ನೆಹರೂಯುವ ಕೇಂದ್ರ, ಕಾರ್ಮಿಕ ಕಲ್ಯಾಣ ಇಲಾಖೆ, ಉದ್ಯೋಗ ವಿನಿಮಯ ಕಚೇರಿ, ನಗರ ಸರ್ವೇ ಇಲಾಖೆಯ ಕಚೇರಿಗಳು ಹಳೆಯ ಕಟ್ಟಡದಲ್ಲಿದ್ದವು.

* ನೆಲ ಅಂತಸ್ತು ಮತ್ತು ಎರಡು ಮಹಡಿಗಳ(ಜಿ ಪ್ಲಸ್ 2) ಕಾಮಗಾರಿಗೆ ₹ 17 ಕೋಟಿಯ ಟೆಂಡರ್ ಕರೆಯಲಾಗುತ್ತದೆ. ಜಿ ಪ್ಲಸ್ 7 ಕಟ್ಟಡಕ್ಕೆ ಅಡಿಪಾಯ ಹಾಕಲಾಗುತ್ತದೆ.

– ರಾಜು ನಾಯ್ಕ, ಎ.ಇ.ಇ ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT