ಬುಧವಾರ, ಜೂಲೈ 8, 2020
29 °C
2018ರಲ್ಲಿ ಮಯೂರವರ್ಮ ವೇದಿಕೆಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ್ದರು

ಪಂಪನ ನೆಲದ ಕಂಪನ್ನು ಅನುಭವಿಸಿದ್ದ ನಿಸಾರ್ ಅಹಮದ್

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ‘2018ರ, ಫೆಬ್ರುವರಿ 2ರಂದು ಬನವಾಸಿ ಬಂದಾಗ ಕವಿ ನಿಸಾರ್ ಅಹಮದ್ ಅವರ ಭಾವದಲ್ಲಿ ಅದೇನೊ ಅವ್ಯಕ್ತ ಆನಂದವಿತ್ತು. ಪಂಪನ ನೆಲದ ಕಂಪನು ಅವರು ಅನುಭವಿಸಿದ್ದನ್ನು ನಾನು ಗಮನಿಸಿದ್ದೆ. ಪುರಾತನ ಮಧುಕೇಶ್ವರ ದೇವಾಲಯದ ಶಿಲ್ಪಕಲೆಯನ್ನೂ ಅವರು ನೆಚ್ಚಿಕೊಂಡಿದ್ದರು. ಸುಮಾರು ಒಂದು ತಾಸು ದೇವಾಲಯದಲ್ಲಿ ಸಮಯ ಕಳೆದಿದ್ದರು...’

ಹೀಗೆಂದು ಬನವಾಸಿಯ ಹಿರಿಯ ಟಿ.ಜಿ.ನಾಡಿಗೇರ್ ನೆನಪಿಸಿಕೊಂಡರು. ತಾಲ್ಲೂಕಿನ ಬನವಾಸಿಯಲ್ಲಿ ನಡೆದ ಕದಂಬೋತ್ಸವ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸ ನಿಸಾರ್ ಅಹಮದ್ ಬಂದಿದ್ದರು. ಅವರು ದೇವಾಲಯಕ್ಕೆ ಭೇಟಿ ನೀಡುವ ವೇಳೆ, ನಾಡಿಗೇರ್ ಅವರ ಜೊತೆಗಿದ್ದರು.

ಕನ್ನಡ ಸಾಹಿತಿ ನಿಸಾರ ಅಹಮದ್ ಬನವಾಸಿಯ ಬಗ್ಗೆ ತುಸು ಹೆಚ್ಚೇ ತಿಳಿದಿದ್ದರು. ಅನೇಕ ಕೃತಿಗಳನ್ನು ಓದಿದ ಅನುಭವ ಅವರ ಮಾತಿನಲ್ಲಿ ಸ್ಪಷ್ಟವಾಗುತ್ತಿತ್ತು. ಪಂಪನನ್ನು ಸ್ಮರಿಸಿಕೊಂಡು ಅವರು, ಧನ್ಯತಾಭಾವ ಅನುಭವಿಸಿದ್ದರು ಎಂದು ನಾಡಿಗೇರ್ ಅಂದಿನ ದಿನವನ್ನು ಸ್ಮರಿಸಿದರು.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ, ಬೃಹತ್ ಮತ್ತು ಮಧ್ಯಮ ಉದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು ನಿಸಾರ್ ಅಹಮದ್ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಿದ್ದರು. ಮುಖ್ಯಮಂತ್ರಿ ಬಾರದ್ದಕ್ಕೆ ಸ್ಥಳೀಯರು ಅಸಮಾಧಾನಗೊಂಡಿದ್ದರೂ, ನಿಸಾರ್ ಅಹಮದ್ ಅವರಿಗೆ ಆ ಬಗ್ಗೆ ಬೇಸರವಿರಲಿಲ್ಲ. ಅಂದು ತುಂಬ ಲವಲವಿಕೆಯಲ್ಲಿದ್ದ ಅವರು, ಸಂತಸದಿಂದ ಪ್ರಶಸ್ತಿ ಸ್ವೀಕರಿಸಿದ್ದರು.

ತಮ್ಮ ಮಾತಿನಲ್ಲಿ ಅವರು, ‘ಕನ್ನಡಿಗರು ಎಲ್ಲವನ್ನು ಒಳಗೊಳ್ಳುವ ಸಂಸ್ಕೃತಿಯವರೇ ವಿನಾ ವಿಘಟಿತ ಸಂಸ್ಕೃತಿಯ ಪ್ರತಿನಿಧಿಗಳು ಅಲ್ಲ ಇದನ್ನು ನಾವು ನೆನಪಿಡಬೇಕು. ನಾವು ಕನ್ನಡಿಗರು ಎಲ್ಲರನ್ನು ಅತಿಥಿಗಳಾಗಿ ಕಂಡವರು. ಎಲ್ಲ ರೀತಿ ದೊಡ್ಡತನ ಕಾಪಾಡಿಕೊಂಡು ಬಂದಿದ್ದೇವೆ. ಇದೇ ದೊಡ್ಡತನವನ್ನು ಅನೇಕ ರಾಜರು ಸಹ ಅಂದು ಕಾಪಾಡಿಕೊಂಡು ಬಂದಿದ್ದರು. ಕೆಲವೊಮ್ಮೆ ಈ ಔದಾರ್ಯವೇ ಕನ್ನಡಿಗರಿಗೆ ಮುಳುವಾಗುತ್ತಿದೆ’ ಎಂದು ಎಚ್ಚರಿಸಿದ್ದರು.

‘11 ವರ್ಷಗಳ ಹಿಂದೆ ನನ್ನ ಕೈಗೆ ಬಂದು ಕಳೆದ ಜಾರಿಹೋದ ಪ್ರಶಸ್ತಿ ಇಂದು ಸಿಕ್ಕಿದೆ. ಬರುವುದೆಲ್ಲ ಬರುವ ಕಾಲಕ್ಕೆ ಎಲ್ಲವೂ ಬರುತ್ತದೆ. ಪ್ರಜಾತಾಂತ್ರಿಕ ವ್ಯವಸ್ಥೆಯ ದಸರಾ ಉತ್ಸವಕ್ಕೆ ಸಮಾರಂಭಕ್ಕೆ ಮುಖ್ಯಮಂತ್ರಿ ಕರೆದು ನನ್ನನ್ನು ಗೌರವ ಸಲ್ಲಿಸಿದರು. ನಂತರ ಈಗ ಪಂಪ ಪ್ರಶಸ್ತಿ ದಕ್ಕಿದೆ. ಕನ್ನಡದ ಮೊದಲ ರಾಜ ಮನೆತನ ಆಳಿದ ನೆಲದಲ್ಲಿ ಪಂಪನ ಹೆಸರಿನ ಸನ್ಮಾನ ಅತ್ಯಂತ ಖುಷಿ ಕೊಟ್ಟಿದೆ. ಇದು ವಿರಳತಮ ಸತ್ಕಾರವಾಗಿದೆ’ ಎಂದು ಧನ್ಯತಾಭಾವದಲ್ಲಿ ಹೇಳಿದ್ದರು.

‘ಮೂರ್ತಿಗಾಗಿ ಮುಗಿದ ಕೈಯು ಗುಡಿಗು ಸಲ್ಲುವಂತೆಯೇ ಎಲ್ಲ ಒಂದೆಂಬಂತೆಯೇ ಹಾಡಲಾಗಿ ಜನವು ನನ್ನ ಕವಿಯೆಂದು ಕರೆದಿದೆ...ಎಂಬ ದ.ರಾ. ಬೇಂದ್ರೆಯವರ ಪದ್ಯದೊಂದಿಗೆ ಮಾತನ್ನು ಆರಂಭಿಸಿದ ಅವರು, ಜಲವೆಂದರೆ ಬರೀ ನೀರಲ್ಲ ಅದು ಪಾವನತೀರ್ಥ..’ ಹಾಡಿನೊಂದಿಗೆ ಮಾತು ಮುಕ್ತಾಯಗೊಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು