ಬುಧವಾರ, ಅಕ್ಟೋಬರ್ 16, 2019
22 °C
ಅರೆಕಾಲಿಕ ನೌಕರರಿಗೆ 10 ತಿಂಗಳಿಂದ ಬಾರದ ವೇತನ

ಗೋಕರ್ಣ: ಮುಚ್ಚುವ ಹಂತದಲ್ಲಿ ಬಿಎಸ್‌ಎನ್‌ಎಲ್‌ ಕೇಂದ್ರ

Published:
Updated:
Prajavani

ಗೋಕರ್ಣ: ಪ್ರವಾಸಿ ತಾಣ ಗೋಕರ್ಣದಲ್ಲಿ ಬಿ.ಎಸ್.ಎನ್.ಎಲ್. ದೂರಸಂಪರ್ಕ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು, ನೌಕರರಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ.

ಪೂರ್ಣ ಪ್ರಮಾಣದ ನೌಕರರಿಲ್ಲದ ಕಾರಣ ಈಗಾಗಲೇ ಗ್ರಾಹಕ ಸೇವಾ ಕೇಂದ್ರಕ್ಕೆ ಬೀಗ ಹಾಕಲಾಗಿದೆ. ಕೇಂದ್ರಕ್ಕೆ ಒಬ್ಬರೇ ಮಹಿಳಾ ನೌಕರರಿದ್ದು, ಅವರೇ ಎಲ್ಲ ಕೆಲಸವನ್ನೂ ನಿರ್ವಹಿಸಬೇಕಾಗಿದೆ. ಅದರಲ್ಲೂ ಅವರು ಟೆಕ್ನಿಕಲ್ ಉದ್ಯೋಗಿಯಾಗಿದ್ದು ಸೇವೆಯಲ್ಲಿ ಅಡಚಣೆಯುಂಟಾದರೆ ಅದಕ್ಕೆ ಆದ್ಯತೆ ನೀಡಬೇಕಾಗಿದೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ಆನ್‌ಲೈನ್ ಮೂಲಕ ಅಥವಾ ಕುಮಟಾಕ್ಕೆ ಹೋಗಿ ಬಿಲ್ ತುಂಬುವ ಪರಿಸ್ಥಿತಿ ಎದುರಾಗಿದೆ.

ಇಲ್ಲಿನ ಕಚೇರಿಗೆ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸ್ಥಳೀಯರು ಹಲವು ಬಾರಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಮೂರು ದಿನಗಳಿಂದ ಮೂವರು ಅರೆಕಾಲಿಕ ನೌಕರರು ಕೂಡ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ. ಅವರಿಗೆ 10 ತಿಂಗಳಿನಿಂದ ಸಂಬಳ ಬಾರದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿದೆ.

ಗೋಕರ್ಣದ ಕೇಂದ್ರದಲ್ಲಿ ಮೂವರು ಕಾಯಂ ನೌಕರರು ಮತ್ತು ಮೂರು ಜನ ಲೈನ್‌ಮನ್‌ಗಳ ಅಗತ್ಯವಿದೆ. ಈ ಎಲ್ಲ ಕೆಲಸವನ್ನು ಈಗ ಮಹಿಳಾ ಸಿಬ್ಬಂದಿಯೇ ನಿರ್ವಹಿಸುತ್ತಿದ್ದಾರೆ!

ಜಿಲ್ಲೆಯಲ್ಲಿ ಭಟ್ಕಳ ಹೊರತುಪಡಿಸಿದರೆ ಗೋಕರ್ಣವೇ ಹೆಚ್ಚು ಆದಾಯ ತರುವ ಕೇಂದ್ರವಾಗಿದೆ. ಇಲ್ಲಿ 900ಕ್ಕೂ ಹೆಚ್ಚು ಸ್ಥಿರ ದೂರವಾಣಿಗಳು ಮತ್ತು ಮೂರು ಮೊಬೈಲ್ ಟವರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಸ್ಥಿರ ದೂರವಾಣಿಗಳ ದುರಸ್ತಿ ಮಾಡುವ ಲೈನ್‌ಮನ್‌ಗಳು ಕೂಡ ಎರಡು ವರ್ಷಗಳಿಂದ ನಿಯುಕ್ತರಾಗಿಲ್ಲ. ಈಗಿರುವ ಮಹಿಳಾ ಜೆ.ಟಿ.ಒ.ಗೆ ಕೋಡ್ಕಣಿ ಕೇಂದ್ರದ ಜವಾಬ್ದಾರಿಯೂ ಇದೆ. ಅಲ್ಲಿನ ಸಿಬ್ಬಂದಿ ರಜೆ ಹಾಕಿದರೆ ದೂರ ಸಂಪರ್ಕ ಕೇಂದ್ರದ ಗೇಟಿನ ಬೀಗ ತೆಗೆಯುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Post Comments (+)