ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ ತ್ಯಾಜ್ಯ ಸಾಕುಪ್ರಾಣಿ ಆಹಾರ!

ಸೂಕ್ತ ವಿಲೇವಾರಿಗೆ ಹೊಸ ಮಾರ್ಗ ಕಂಡುಕೊಂಡ ಜಿಲ್ಲಾ ಪಂಚಾಯಿತಿ
Last Updated 5 ಜನವರಿ 2021, 16:52 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವು ಇನ್ನುಮುಂದೆ ವ್ಯರ್ಥವಾಗುವುದಿಲ್ಲ. ಅದು ಸಾಕುಪ್ರಾಣಿಗಳ ಆಹಾರವಾಗಿ ಬದಲಾಗಲಿದೆ!

ಹೌದು, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯು ಮಾಂಸದ ತ್ಯಾಜ್ಯ ವಿಲೇವಾರಿಗೆ ಹೊಸ ವಿಧಾನವನ್ನು ಕಂಡುಕೊಂಡಿದೆ. ಇದಕ್ಕಾಗಿ ಸಾಕುಪ್ರಾಣಿಗಳ ಆಹಾರ ತಯಾರಿಸುವ ಮಂಗಳೂರಿನ ಕಾರ್ಖಾನೆಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಡಿಯಿಟ್ಟಿದೆ.

ಆರಂಭದಲ್ಲಿ ಕರಾವಳಿಯ ಎಂಟು ದೊಡ್ಡ ಗ್ರಾಮ ಪಂಚಾಯಿತಿಗಳನ್ನು ಈ ಯೋಜನೆಗೆ ಸೇರಿಸಿಕೊಳ್ಳಲಾಗಿದೆ. ಕಾರವಾರ ತಾಲ್ಲೂಕಿನ ಚಿತ್ತಾಕುಲಾ, ಅಂಕೋಲಾ ತಾಲ್ಲೂಕಿನ ಅವರ್ಸಾ ಮತ್ತು ಹಟ್ಟಿಕೇರಿ, ಕುಮಟಾ ತಾಲ್ಲೂಕಿನ ಗೋಕರ್ಣ, ಭಟ್ಕಳ ತಾಲ್ಲೂಕಿನ ಮಾವಳ್ಳಿ 1 ಮತ್ತು ಮಾವಳ್ಳಿ 2, ಶಿರಾಲಿ ಹಾಗೂ ಹೆಬಳೆ ಗ್ರಾಮ ಪಂಚಾಯಿತಿಗಳಲ್ಲಿ ಉತ್ಪತ್ತಿಯಾಗುವ ಮಾಂಸದ ತ್ಯಾಜ್ಯಗಳನ್ನು ಮಂಗಳೂರಿಗೆ ರವಾನೆ ಮಾಡಲಾಗುತ್ತದೆ. ಇಲ್ಲಿ ಈಗಾಗಲೇ ಸಂಗ್ರಹ ಕಾರ್ಯ ಆರಂಭವೂ ಆಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ, ‘ಮಾಂಸದ ತ್ಯಾಜ್ಯ ವಿಲೇವಾರಿಗೆ ಕಾರ್ಖಾನೆಯವರ ಜೊತೆ ಸಭೆ ನಡೆಸಲಾಗಿದ್ದು,
ಮುಂದಿನ ವಾರದಿಂದ ಪೂರ್ಣ ಪ್ರಮಾಣದಲ್ಲಿ ಸಂಗ್ರಹಿಸಲಿದ್ದಾರೆ. ಅವರು ನೀಡುವ ಟ್ರೇಗಳಲ್ಲಿ
ಪ್ರತಿ ಗ್ರಾಮ ಪಂಚಾಯಿತಿಯ ನಿರ್ದಿಷ್ಟ ಜಾಗದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಬೇಕು. ಅಲ್ಲಿಂದ ಅವರು ಸಂಪೂರ್ಣ ಮುಚ್ಚಿದ ಲಾರಿಯಲ್ಲಿ ಸಾಗಿಸಲಿದ್ದಾರೆ. ಇದರಿಂದ ಈ ಭಾಗದಲ್ಲಿ ಮಾಂಸದ ತ್ಯಾಜ್ಯ ವಿಲೇವಾರಿಯೂ ಆಗುತ್ತದೆ. ಕಾರ್ಖಾನೆಗೂ ಬೇಕಾದ ಸಾಮಗ್ರಿ ದೊರೆಯುತ್ತದೆ’ ಎಂದು ಹೇಳಿದರು.

‘ತ್ಯಾಜ್ಯ ಸಾಗಣೆಯ ಖರ್ಚು, ವೆಚ್ಚಗಳನ್ನು ಕಾರ್ಖಾನೆಯವರೇ ಭರಿಸಲಿದ್ದಾರೆ. ಮಾಂಸದಂಗಡಿಗಳು, ಗ್ರಾಮ ಪಂಚಾಯಿತಿ ಮತ್ತು ಅವರೊಂದಿಗೆ ಸಮನ್ವಯ ಸಾಧಿಸಲು ಒಬ್ಬರನ್ನು ಜಿಲ್ಲಾ ಪಂಚಾಯಿತಿಯಿಂದ ನಿಯುಕ್ತಿಗೊಳಿಸಲಾಗಿದೆ. ಅಲ್ಲದೇ ಎಂಟೂ ಗ್ರಾಮಗಳಲ್ಲಿ ತ್ಯಾಜ್ಯ ಸಂಗ್ರಹಿಸಿಡಲು ನಿರ್ದಿಷ್ಟ ಜಾಗವನ್ನು ಗುರುತಿಸಿಕೊಡಲಾಗಿದೆ’ ಎಂದು ವಿವರಿಸಿದರು.

ಕುರಿ ಮಾಂಸವೂ ವಿಲೇವಾರಿ

‘ಮಂಗಳೂರಿನ ಕಾರ್ಖಾನೆಯವರು ಕೋಳಿ ಮಾಂಸದ ತ್ಯಾಜ್ಯವನ್ನು ಹೆಚ್ಚು ಸಂಗ್ರಹಿಸುತ್ತಾರೆ. ನಮ್ಮ ಜಿಲ್ಲೆಯಿಂದ ಕುರಿ ಮಾಂಸದ ತ್ಯಾಜ್ಯವನ್ನೂ ತೆಗೆದುಕೊಂಡು ಹೋಗಲು ತಿಳಿಸಿದ್ದೇವೆ. ಈ ಬಗ್ಗೆ ಎರಡು ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ’ ಎಂದು ಪ್ರಿಯಾಂಗಾ ಹೇಳಿದರು.

‘ಉಡುಪಿಯಲ್ಲಿ ಮೀನು ತ್ಯಾಜ್ಯ ಸಂಗ್ರಹಿಸುವ ಘಟಕವೊಂದಿದೆ. ಅದಕ್ಕೆ ಜಿಲ್ಲೆಯಿಂದ ರವಾನಿಸುವ ಬಗ್ಗೆ ಮಾತುಕತೆ ನಡೆಸಲು ಚಿಂತಿಸಲಾಗಿದೆ’ ಎಂದೂ ತಿಳಿಸಿದರು.

***

ಜಿಲ್ಲೆಯಲ್ಲಿ ಮಾಂಸದ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲು. ಈ ಯೋಜನೆಯಿಂದ ಕಾರ್ಖಾನೆಗೂ ಸಾಮಗ್ರಿ ದೊರೆಯುತ್ತದೆ. ಜೊತೆಗೆ ಜಿಲ್ಲೆಯ ಸಮಸ್ಯೆಯೂ ಪರಿಹಾರವಾಗುತ್ತದೆ.

– ಪ್ರಿಯಾಂಗಾ, ಜಿ.ಪಂ ಸಿ.ಇ.ಒ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT