ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕ್ಕೆ ಸರಾಸರಿ ₹ 48 ಲಕ್ಷ ನಷ್ಟ

ಉ.ಕ ಸಾರಿಗೆ ವಿಭಾಗದಲ್ಲಿ ಬಸ್‌ ಸಂಚಾರಕ್ಕೆ ಪ್ರಯಾಣಿಕರ ಕೊರತೆ
Last Updated 28 ಮೇ 2020, 12:35 IST
ಅಕ್ಷರ ಗಾತ್ರ

ಶಿರಸಿ: ಲಾಕ್‌ಡೌನ್ ಬಳಿಕ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಪ್ರಾರಂಭಿಸಿ ಹತ್ತು ದಿನಗಳಾಗುತ್ತ ಬಂದರೂ, ಜಿಲ್ಲೆಯಲ್ಲಿ ಪ್ರಯಾಣಿಕರು ಬಸ್ ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮವಾಗಿ ಉತ್ತರ ಕನ್ನಡ ವಿಭಾಗವು ದಿನಕ್ಕೆ ಸರಾಸರಿ ₹ 48 ಲಕ್ಷ ನಷ್ಟ ಅನುಭವಿಸುತ್ತಿದೆ.

ಕೋವಿಡ್ 19 ನಿಯಂತ್ರಣಕ್ಕೆ ಘೋಷಿಸಿದ್ದ ಲಾಕ್‌ಡೌನ್ ತೆರವುಗೊಳಿಸಿದ ಮೇಲೆ, ಒಂದೂವರೆ ತಿಂಗಳ ನಂತರ ಮೇ 19ರಿಂದ ಬಸ್ ಸಂಚಾರ ಪ್ರಾರಂಭವಾಗಿದೆ. ಮೊದಲ ದಿನ 70 ಬಸ್ ಓಡಿಸುವ ಯೋಚನೆಯಲ್ಲಿದ್ದ ಅಧಿಕಾರಿಗಳಿಗೆ, ಪ್ರಯಾಣಿಕರ ಕೊರತೆಯಿಂದಾಗಿ ಕೇವಲ 11 ಬಸ್ ಸಂಚಾರಕ್ಕೆ ಸಾಧ್ಯವಾಯಿತು. ಪೇಟೆ–ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದು, ಜನಜೀವನ ಸಹಜ ಸ್ಥಿತಿಗೆ ಬಂದರೂ, ಜನರು ಬಸ್‌ನಲ್ಲಿ ಪ್ರಯಾಣಕ್ಕೆ ಮುಂದಾಗುತ್ತಿಲ್ಲ.

ಕೋವಿಡ್ ಪೂರ್ವದಲ್ಲಿ ಜಿಲ್ಲೆಯಿಂದ ದಿನಕ್ಕೆ 105 ಬಸ್‌ಗಳ ಕಾರ್ಯಾಚರಣೆ ಇರುತ್ತಿತ್ತು. ಈಗ ದಿನಕ್ಕೆ ಸರಾಸರಿ 35 ಬಸ್‌ ಕಾರ್ಯಾಚರಣೆ ನಡೆಸುತ್ತಿದೆ. ಆಗ ಪ್ರತಿದಿನ ₹ 50 ಲಕ್ಷದಷ್ಟು ಆದಾಯ ಸಂಗ್ರಹವಾಗುತ್ತಿತ್ತು. ಈಗ ದಿನವೊಂದಕ್ಕೆ ₹ 1.5 ಲಕ್ಷ ಸಂಗ್ರಹವಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕು, ಹೊರ ಜಿಲ್ಲೆ, ಬೆಂಗಳೂರಿಗೆ ಬಸ್ ಸಂಚರಿಸುತ್ತಿದೆ. ಆದರೆ, ಜನರ ಸಂಖ್ಯೆ ತೀರಾ ಕಡಿಮೆಯಿದೆ. ಇಲ್ಲಿಂದ ಹೊರಡುವ ಬಸ್‌ಗಳು ತಾಲ್ಲೂಕು ಕೇಂದ್ರದ ಬಸ್ ನಿಲ್ದಾಣದಲ್ಲಿ ಮಾತ್ರ ನಿಂತು, ಮುಂದೆ ಸಾಗುತ್ತವೆ ಎನ್ನುತ್ತಾರೆ ಅಧಿಕಾರಿಗಳು.

ಗ್ರಾಮೀಣ ಪ್ರದೇಶಕ್ಕೆ ಬಸ್ ಸಂಚಾರ ಪ್ರಾರಂಭಿಸುವ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಮೇ 31ಕ್ಕೆ ಲಾಕ್‌ಡೌನ್ 4.0 ಮುಗಿದು, ಹೊಸ ಮಾರ್ಗಸೂಚಿ ಪ್ರಕಟವಾಗಲಿದೆ. ಸರ್ಕಾರದ ಮಾರ್ಗಸೂಚಿ ಆಧರಿಸಿ ಸಾರಿಗೆ ಸಂಸ್ಥೆ ಹಳ್ಳಿ ಬಸ್ ಸಂಚಾರದ ಬಗ್ಗೆ ನಿರ್ಣಯ ಕೈಗೊಳ್ಳುತ್ತದೆ’ ಎಂದರು.

ಹೊಸ ಬಸ್‌ ನಿಲ್ದಾಣದಿಂದಲೇ ಬಸ್ ಕಾರ್ಯಾಚರಣೆ ನಡೆಸುತ್ತಿದೆ. ನಿಲ್ದಾಣ ಪ್ರವೇಶಿಸಲು ಒಂದೇ ಗೇಟ್ ಇಡಲಾಗಿದ್ದು, ಅಲ್ಲಿಂದ ಬರುವ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಅವರ ವಿವರ ಪಡೆದು ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುತ್ತದೆ. ಒಂದು ಬಸ್‌ನಲ್ಲಿ 30 ಜನ ಪ್ರಯಾಣಿಸಲು ಅವಕಾಶವಿದೆ. ಕೆಲವೊಮ್ಮೆ ಇಷ್ಟು ಜನ ಇಲ್ಲದಿದ್ದರೂ, ಸೇವಾ ಕ್ಷೇತ್ರವಾಗಿರುವ ಕಾರಣಕ್ಕೆ ಬಸ್ ಹೊರಡುತ್ತದೆ. ಎಲ್ಲ ಸುರಕ್ಷತಾ ಕ್ರಮ ಅನುಸರಿಸುವುದರಿಂದ ಪ್ರಯಾಣಿಕರು ಬಸ್‌ನಲ್ಲಿ ತೆರಳಲು ಭಯಪಡಬೇಕಾಗಿಲ್ಲ ಎಂದು ತಿಳಿಸಿದರು.

ಶಿಥಿಲವಾಗಿರುವ ಹಳೇ ಬಸ್ ನಿಲ್ದಾಣದ ಕಟ್ಟಡ ಕೆಡವಲು ಟೆಂಡರ್‌ ಆಗಿದೆ. ಗುತ್ತಿಗೆದಾರ ಸದ್ಯದಲ್ಲಿ ಕಾಮಗಾರಿ ಪ್ರಾರಂಭಿಸಬಹುದು ಎಂದರು.

ಏಪ್ರಿಲ್–ಮೇ ತಿಂಗಳುಗಳಲ್ಲಿ ವಿಭಾಗದಲ್ಲಿ ದಿನವೊಂದಕ್ಕೆ ₹ 60ಲಕ್ಷದವರೆಗೂ ಆದಾಯ ಬರುತ್ತಿತ್ತು. ಈಗ ತಿಂಗಳಿಗೆ ಸುಮಾರು ₹ 15 ಕೋಟಿ ನಷ್ಟವಾಗುತ್ತಿದೆ ಎಂದು ಸಾರಿಗೆಸಂಸ್ಥೆಉತ್ತರಕನ್ನಡ ವಿಭಾಗದ ಡಿಸಿ ವಿವೇಕ ಹೆಗಡೆ ತಿಳಿಸಿದ್ದಾರೆ.

ಉತ್ತರ ಕನ್ನಡ ಸಾರಿಗೆ ವಿಭಾಗ
ದಿನವೊಂದಕ್ಕೆ ಒಟ್ಟು ಟ್ರಿಪ್ 3400
ದಿನಕ್ಕೆ ಸಂಚರಿಸುತ್ತಿದ್ದ ಬಸ್‌ಗಳು 501
ಒಟ್ಟು ಇರುವ ಚಾಲಕ–ನಿರ್ವಾಹಕರು 1650

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT