ಬುಧವಾರ, ಆಗಸ್ಟ್ 4, 2021
23 °C

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜಾದ ಉತ್ತರ ಕನ್ನಡದ 122 ಕೇಂದ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಎಲ್ಲ 122 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಪೂರ್ಣಗೊಂಡಿದೆ. ಜುಲೈ 19ರಂದು ನಡೆಯಲಿರುವ ಮೊದಲ ಪರೀಕ್ಷೆ ಸಾಂಗವಾಗಿ ನೆರವೇರಲು ಇಲಾಖೆಯ ಸಿಬ್ಬಂದಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಈ ಬಾರಿ ಎರಡೇ ದಿನ ಪರೀಕ್ಷೆಗಳು ನಡೆಯಲಿವೆ. ಮೊದಲ ದಿನ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳನ್ನು ಒಳಗೊಂಡ ಪರೀಕ್ಷೆ ನಿಗದಿಯಾಗಿದೆ. ಜುಲೈ 22ರಂದು ನಡೆಯಲಿರುವ ಎರಡನೇ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳಿಗೆ ಸಂಬಂಧಿತ ಪ್ರಶ್ನೆಗಳು ಇರಲಿವೆ.

ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವವರು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 10,252 ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 10,033 ವಿದ್ಯಾರ್ಥಿಗಳಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಕೇವಲ 12 ವಿದ್ಯಾರ್ಥಿಗಳು ಕೂರಲು ಸಾಧ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಕೋವಿಡ್ ಕಾರಣದಿಂದಾಗಿ ತರಗತಿಗಳು ನಡೆಯಲಿಲ್ಲ. ಹಾಗಾಗಿ ಪರೀಕ್ಷೆಗೆ ಹಾಜರಾದ ಎಲ್ಲರನ್ನೂ ಉತ್ತೀರ್ಣಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದ್ದರಿಂದ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾತಿ ಹೆಚ್ಚಿರುವ ನಿರೀಕ್ಷೆ ಅಧಿಕಾರಿಗಳದ್ದಾಗಿದೆ.

ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಈ ಮೊದಲು ಒಟ್ಟು 73 ಪರೀಕ್ಷಾ ಕೇಂದ್ರಗಳಿದ್ದವು. ಆದರೆ, ಕೋವಿಡ್ ನಿಯಂತ್ರಣದ ನಿಯಮಾವಳಿಯ ಪ್ರಕಾರ ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳುವ ಸಲುವಾಗಿ 49 ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗಿದೆ.

ಪರೀಕ್ಷಾ ಕೇಂದ್ರಗಳನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದೆ. ಡೆಸ್ಕ್, ಬೆಂಚ್‌ಗಳಿಗೂ ಸೋಂಕು ನಿವಾರಕಗಳನ್ನು ಸಿಂಪಡಿಸಲಾಗಿದೆ. ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಮುಖಗವಸು ಧಾರಣೆ, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ.

ಬದಲಾದ ಪದ್ಧತಿ

‘ಈ ಬಾರಿ ಕೋವಿಡ್ ಕಾರಣದಿಂದಾಗಿ ಪರೀಕ್ಷಾ ಪದ್ಧತಿಯಲ್ಲಿ ಬದಲಾಗಿದೆ. ಬೆಳಿಗ್ಗೆ 10.30ರಿಂದ 11.30ರವರೆಗೆ ನಡೆಯುವ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿಯನ್ನು ಅನುಸರಿಸಲಾಗುತ್ತಿದೆ. ಒ.ಎಂ.ಆರ್. ಶೀಟ್ ರೂಪದಲ್ಲಿರುವ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಸರಿಯುತ್ತರವನ್ನು ಆಯ್ಕೆ ಮಾಡಿದರೆ ಸಾಕು’ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಹರೀಶ ಗಾಂವ್ಕರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು