ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ತೆರೆಯಲು ವಿರೋಧ

Last Updated 14 ಮೇ 2020, 15:55 IST
ಅಕ್ಷರ ಗಾತ್ರ

ಕುಮಟಾ: ಪಟ್ಟಣದ ವಿವೇಕನಗರದ ಹೆಗಡೆ ರಸ್ತೆಯಲ್ಲಿರುವ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸರ್ಕಾರಿ ಕ್ವಾರಂಟೈನ್ ಸ್ಥಾಪಿಸಬಾರದು ಎಂದು ಗುರುವಾರ ನೂರಾರು ಸ್ಥಳೀಯರು ವಿರೋಧಿಸಿದರು.

ಗುರುವಾರ ಮಧ್ಯಾಹ್ನ ಖಾಲಿಯಿದ್ದ ಹಾಸ್ಟೆಲ್ ಕಟ್ಟಡ ಶುಚಿ ಕಾರ್ಯ ನಡೆಸುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು, ಮಾಹಿತಿ ಸಂಗ್ರಹಿಸಿದರು. ಆಗ ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಬರುವವರಿಗಾಗಿ ಕ್ವಾರಂಟೈನ್ ಕೇಂದ್ರ ತೆರೆಯುವ ಸಂಗತಿ ಗೊತ್ತಾಯಿತು.ಸಂಜೆ ಹೊತ್ತಿಗೆ ನೂರಾರು ಜನರು ಸೇರಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹೊನ್ನಪ್ಪ ನಾಯಕ, ‘ಇಡೀ ದೇಶ ಸಂಕಷ್ಟದಲ್ಲಿದ್ದಾಗ ಜನರು ಸರ್ಕಾರದೊಂದಿಗೆ ಕೈ ಜೋಡಿಸಬೇಕು ನಿಜ. ಆದರೆ, ಈ ಹಾಸ್ಟೆಲ್ ಇರುವುದು ಜನದಟ್ಟಣೆ ಇರುವ ಪ್ರದೇಶದಲ್ಲಿ. ಹಾಸ್ಟೆಲ್ ಕಾಂಪೌಂಡ್ ಗೋಡೆಗೆ ಸಮೀಪದಲ್ಲೇ ಹಲವರಮನೆಗಳಿವೆ. ಹೊರಗಡೆಯಿಂದ ಬರುವವರಿಗೆ ಪಟ್ಟಣದಲ್ಲಿ ಖಾಲಿಯಿರುವ ಲಾಡ್ಜ್‌ನಲ್ಲಿ ಅಥವಾ ಪಟ್ಟಣದ ಹೊರವಲಯದಲ್ಲಿರುವ ಸಾಕಷ್ಟು ಕಲ್ಯಾಣ ಮಂಟಪಗಳಲ್ಲಿ ಅವಕಾಶ ಕಲ್ಪಿಸಬಹುದು’ ಎಂದರು.

ತಾಲ್ಲೂಕು ಉದ್ಯಮಿಗಳ ಸಂಘದ ಅಧ್ಯಕ್ಷ ಹರೀಶ ಶೇಟ್, ‘ಹಾಸ್ಟೆಲ್‌ನ 50 ಮೀಟರ್ ಅಂತರದಲ್ಲಿ ಕೈಗಾರಿಕಾ ವಸಾಹತು ಪ್ರದೇಶವಿದೆ. ನಿತ್ಯ ನೂರಾರು ಜನರು ಇಲ್ಲಿ ಕೆಲಸಕ್ಕೆ ಬರುತ್ತಾರೆ. ಇಂಥ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ ವೈಜ್ಞಾನಿಕವಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಹಶೀಲ್ದಾರ್ ಮೇಘರಾಜ ನಾಯ್ಕ ಪ್ರತಿಕ್ರಿಯಿಸಿ, ‘ಇದು ಸರ್ಕಾರದ ನಿರ್ಧಾರ. ಹೊರಗಡೆಯಿಂದ ಬಂದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ 14 ದಿವಸ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗುವುದು. ಲಾಡ್ಜ್‌ನಲ್ಲಿ ಇರಲು ಬಯಸುವವರಿಗೆ ಅಲ್ಲಿಯೇ ಅವಕಾಶ ಕಲ್ಪಿಸಲಾಗುವುದು’ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಮೀನುಗಾರ ಮುಖಂಡ ಬಾಬು ಕುಬಾಲ, ಜಯದೇವ ಬಳಗಂಡಿ, ಸಂಜಯ ಪಂಡಿತ, ವಿನಾಯಕ ಮುಕ್ರಿ, ಪುರಸಭೆ ಸದಸ್ಯೆ ಗೀತಾ ಮುಕ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT