ಶನಿವಾರ, ಏಪ್ರಿಲ್ 1, 2023
30 °C
ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯ ಕಂಗಾಲು

ಕಾರವಾರ: ಸರಳ ದೀಪಾವಳಿಗೆ ಜನರ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮವು ಜಿಲ್ಲೆಯಾದ್ಯಂತ ಆರಂಭವಾಗಿದೆ. ನಗರದಲ್ಲಿ ಮನೆಗಳಲ್ಲಿ ಸ್ವಚ್ಛತೆ, ಅಂಗಡಿಗಳಲ್ಲಿ ಪೂಜೆಗೆ ಸಿದ್ಧತೆಯು ಎರಡು ದಿನಗಳಿಂದ ನಡೆಯುತ್ತಿದೆ. ಬುಧವಾರ ರಸ್ತೆ ಬದಿಯಲ್ಲಿ ಹೂ, ಬೂದುಗುಂಬಳದ ವ್ಯಾಪಾರವೂ ಆರಂಭವಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಂಡಿಲ್ಲ.

ಕಳೆದ ವರ್ಷ ಕೋವಿಡ್ ಕಾರಣದಿಂದ ಕಳೆಗುಂದಿದ್ದ ಜನಜೀವನ, ಈ ಬಾರಿ ದೀಪಾವಳಿ ಸಂದರ್ಭದಲ್ಲಾದರೂ ತುಸು ಚೇತರಿಕೆ ಕಾಣುವ ನಿರೀಕ್ಷೆಯಿತ್ತು. ಆದರೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಸೇರಿದಂತೆ ದೈನಂದಿನ ಬಳಕೆಯ ವಸ್ತುಗಳ ದರ ಏರಿಕೆಯು ಇದನ್ನು ಹುಸಿಗೊಳಿಸಿದೆ. ಜನರ ಆದಾಯದಲ್ಲಿ ಕುಸಿತವಾಗಿದ್ದು, ಖರ್ಚು ಹೆಚ್ಚಾಗಿದೆ. ಹಾಗಾಗಿ ದೀಪಾವಳಿ ಸೇರಿದಂತೆ ಹಬ್ಬಗಳನ್ನು ಸರಳವಾಗಿ ಆಚರಿಸುವುದು ಬಹುಪಾಲು ಜನರ ಯೋಚನೆಯಾಗಿದೆ.

‘ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಸೂರ್ಯಕಾಂತಿ ಎಣ್ಣೆ ಒಂದು ಲೀಟರ್‌ಗೆ ₹ 150ರಿಂದ ₹ 200ರ ಆಸುಪಾಸಿನಲ್ಲಿತ್ತು. ಈಗ ಕನಿಷ್ಠ ದರವೇ ₹ 200ಕ್ಕಿಂತ ಮೇಲಿದೆ. ಬೇಳೆಕಾಳು ದರವೂ ಬಹಳ ಏರಿಕೆಯಾಗಿದೆ. ಇನ್ನು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಯ ಬಗ್ಗೆ ಆಕ್ರೋಶ ಹೊರ ಹಾಕಿದಷ್ಟೂ ಸಮಾಧಾನ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದವರು ಗೃಹಿಣಿ, ಕೋಡಿಬಾಗದ ಶೋಭಾ ನಾಯ್ಕ.

ನಗರದ ಅಲ್ಲಲ್ಲಿ ಹಣತೆ, ಆಕಾಶ ಬುಟ್ಟಿಗಳ ವ್ಯಾಪಾರವೂ ಕಂಡುಬರುತ್ತಿದೆ. ಹಬ್ಬದ ಸಂದರ್ಭದಲ್ಲಿ ದೇವರ ಪೂಜೆಗೆ ಬಳಸುವ ಹೂವಿನ ದರವೂ ಹೆಚ್ಚಳವಾಗಿದೆ. ಹಾವೇರಿ, ದಾವಣಗೆರೆ, ಬೆಳಗಾವಿ ಭಾಗದಿಂದ ನಗರಕ್ಕೆ ಬಂದಿರುವ ಮಾರಾಟಗಾರರು, ರಸ್ತೆಗಳ ಬದಿಯಲ್ಲಿ ಹೂವು ರಾಶಿ ಹಾಕಿ ಮಾರಾಟ ಮಾಡುತ್ತಿದ್ದಾರೆ. ಚೆಂಡು ಹೂವಿನ ಒಂದು ಮಾರು ಮಾಲೆಗೆ ₹ 50ರಿಂದ ₹ 60ರಂತೆ ಮಾರಾಟ ಮಾಡುತ್ತಿದ್ದಾರೆ.

ದೀಪಾವಳಿಗೆ ವಿಶೇಷವಾಗಿ ಬಳಕೆ ಮಾಡುವ ಹಿಂಡ್ಲ ಕಾಯಿಯನ್ನು ಸ್ಥಳೀಯ ಮಹಿಳಾ ವರ್ತಕರು ₹ 20ಕ್ಕೆ ಎಂಟರಂತೆ ಮಾರಾಟ ಮಾಡಿದರು. ಹಣ್ಣು ಹಂಪಲುಗಳ ದರದಲ್ಲಿ ಅಲ್ಪ ಸ್ವಲ್ಪ ಏರಿಕೆಯಾಗಿದೆ.

ಕೋವಿಡ್ ತಂದಿಟ್ಟ ಸಂಕಟ: ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದ ನೂರಾರು ಮಂದಿ ಮೃತಪಟ್ಟಿದ್ದಾರೆ. ಹಾಗಾಗಿ, ಅವರ ಮನೆಗಳಲ್ಲಿ ಮತ್ತು ಕುಟುಂಬಗಳಲ್ಲಿ ಒಂದು ವರ್ಷ ಹಬ್ಬಗಳನ್ನು ಆಚರಿಸುತ್ತಿಲ್ಲ. ದೀಪಾವಳಿಯಲ್ಲೂ ಇದು ಮುಂದುವರಿದಿದ್ದು, ಮಾರುಕಟ್ಟೆಯಲ್ಲಿ ಅಷ್ಟಾಗಿ ಜನಜಂಗುಳಿ ಕಾಣದಿರಲು ಕಾರಣಗಳಲ್ಲಿ ಒಂದು ಎಂಬ ಊಹೆ ವರ್ತಕರದ್ದಾಗಿದೆ.

‘ಹಸಿರು ಪಟಾಕಿ’ ಸಿಡಿಸಲು ಸರ್ಕಾರ ಅನುಮತಿ ನೀಡಿದ್ದು, ನಗರದಲ್ಲಿ ಮಳಿಗೆಗಳು ಇನ್ನಷ್ಟೇ ಆರಂಭವಾಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು