ಶನಿವಾರ, ಸೆಪ್ಟೆಂಬರ್ 18, 2021
23 °C

ಅಣಶಿಯಲ್ಲಿ ಭೂ ಕುಸಿತ: ಸುತ್ತಿ ಬಳಸಿ ಸಂಚರಿಸಬೇಕಾದ ಅನಿವಾರ್ಯ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅಣಶಿ ಘಟ್ಟದಲ್ಲಿ ಆಗಿರುವ ಭಾರಿ ಭೂಕುಸಿತವು, ಜೊಯಿಡಾ ತಾಲ್ಲೂಕಿನವರನ್ನು ಜಿಲ್ಲಾ ಕೇಂದ್ರದಿಂದ ಬಹಳ ದೂರ  ಮಾಡಿದೆ. ಮೊದಲು 85 ಕಿಲೋಮೀಟರ್ ದೂರದ ಕಾರವಾರ ತಲುಪಲು ಈಗ ಸುಮಾರು 165 ಕಿಲೋಮೀಟರ್ ಪ್ರಯಾಣಿಸಬೇಕಿದೆ.

ಅಣಶಿ ಘಟ್ಟದಲ್ಲಿ ಜುಲೈ 22ರಂದು ನಾಲ್ಕು ಕಡೆಗಳಲ್ಲಿ ಭೂ ಕುಸಿತವಾಗಿತ್ತು. ಬಳಿಕ ಸದಾಶಿವಗಡ– ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಣ್ಣಿನ ತೆರವಿಗೆ ಪ್ರಯತ್ನಿಸಿದರೂ ಮತ್ತೆ ಮತ್ತೆ ಕುಸಿಯುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇದರ ನೇರ ಪರಿಣಾಮವು ಜೊಯಿಡಾ ತಾಲ್ಲೂಕಿನ ಜನರ ಮೇಲಾಗಿದೆ. ಅವರೀಗ ಕಾರವಾರಕ್ಕೆ ಬರಲು ಕುಳಗಿ– ಬೊಮ್ಮನಹಳ್ಳಿ– ಭಾಗವತಿ– ಯಲ್ಲಾಪುರ– ಅಂಕೋಲಾ ಮೂಲಕ ಸುತ್ತಿಬಳಸಿ ಬರಬೇಕಿದೆ.

ಮೊದಲು ಬೆಳಿಗ್ಗೆ ಹೊರಟು ಮಧ್ಯಾಹ್ನದ ಒಳಗೆ ಕೆಲಸ ಮುಗಿಸಿಕೊಂಡು ಪುನಃ ಸಂಜೆಯ ವೇಳೆಗೆ ತಮ್ಮೂರಿನಲ್ಲಿ ಇರಲು ಸಾಧ್ಯವಿತ್ತು. ಆದರೆ, ಈಗ ಹೋಗಿ ಬರುವುದಕ್ಕೇ ಒಂದು ದಿನ ಬೇಕಿದೆ. ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಸೇರಿದಂತೆ ವಿವಿಧೆಡೆ ಕೆಲಸಕ್ಕಾಗಿ ಒಟ್ಟು ಮೂರು ದಿನ ಮೀಸಲಿಡುವಂತಾಗಿದೆ.

ಭೂಕುಸಿತಕ್ಕೂ ಮೊದಲು ಕಾರವಾರದಿಂದ ಅಣಶಿ– ಜೊಯಿಡಾದ ಮೂಲಕ 12 ಬಸ್‌ಗಳು, ಮೂರು ಟೆಂಪೊಗಳು ನಿತ್ಯವೂ ಸಂಚರಿಸುತ್ತಿದ್ದವು. ಬೆಳಗಾವಿ, ವಿಜಯಪುರ, ಹುಬ್ಬಳ್ಳಿ, ಪುಣೆ, ಕೊಲ್ಲಾಪುರ ಸೇರಿದಂತೆ ವಿವಿಧ ನಗರಗಳಿಗೆ ಈ ಮಾರ್ಗದಿಂದ ಸಂಪರ್ಕ ಸಾಧ್ಯವಿತ್ತು. ಆದರೆ, ಈಗ ಅದು ಕನಸಿನ ಮಾತಾಗಿದ್ದು, ರಸ್ತೆ ಮೊದಲಿನಂತಾಗದೇ ಸಂಚಾರ ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿಯಿದೆ.

ಜೊಯಿಡಾವು ಕಾರವಾರ ಉಪ ವಿಭಾಗಕ್ಕೆ ಒಳಪಡುತ್ತದೆ. ಅಧಿಕಾರಿಗಳು ಆ ಭಾಗಕ್ಕೆ ನಿರಂತರವಾಗಿ ಭೇಟಿ ನೀಡುವುದು ಅನಿವಾರ್ಯ. ಈಗ ಜೊಯಿಡಾಕ್ಕೆ ತೆರಳಲು ಎಲ್ಲರೂ ಯಲ್ಲಾಪುರದ ಮಾರ್ಗವನ್ನೇ ಅವಲಂಬಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್‌ನಲ್ಲಿ ಕುಸಿದ ಗುಡ್ಡದ ತಾತ್ಕಾಲಿಕ ದುರಸ್ತಿಯಾಗಿದೆ. ಆದರೆ, ವಾಹನಗಳ ಸಂಚಾರಕ್ಕೆ ನಿರ್ಬಂಧಿತ ಅವಕಾಶ ನೀಡಲಾಗಿದೆ. ಆ ಪ್ರದೇಶವನ್ನು ದಾಟಿ ಮುಂದೆ ಸಾಗಿ ಜೊಯಿಡಾ ತಲುಪಲು ಕನಿಷ್ಠವೆಂದರೂ ನಾಲ್ಕು ತಾಸುಗಳೇ ಬೇಕಿದೆ.

ಅಣಶಿಯಲ್ಲಿ ಗುಡ್ಡ ಕುಸಿತವಾಗಿರುವ ಪ್ರದೇಶದ ಕೆಳಭಾಗದಲ್ಲಿರುವ ಸುಳಗೇರಿಯು ಜೊಯಿಡಾ ತಾಲ್ಲೂಕಿನಲ್ಲಿದೆ. ಅಲ್ಲಿನ ನಿವಾಸಿಗಳು ತಾಲ್ಲೂಕು ಕೇಂದ್ರಕ್ಕೆ ಬರಲು ದಾರಿಯಿಲ್ಲದಂತಾಗಿದೆ. ರಸ್ತೆ ಇರುವಷ್ಟು ದೂರ ವಾಹನದಲ್ಲಿ ಸಾಗಿ, ರಾಶಿ ಬಿದ್ದ ಮಣ್ಣನ್ನು ದಾಟಿ ರಸ್ತೆಯ ಆಚೆ ತುದಿಯಿಂದ ಮತ್ತೊಂದು ವಾಹನದಲ್ಲಿ ಸಂಚರಿಸುತ್ತಿದ್ದಾರೆ.

ಚಿಕಿತ್ಸೆಗೆ ಬರಲು ಸಮಸ್ಯೆ: ಕುಂಬಾರವಾಡ, ಅಣಶಿ, ಜೊಯಿಡಾ. ಉಳವಿ ಭಾಗದ ಅನಾರೋಗ್ಯ ಪೀಡಿತರು ನೂರಾರು ಮಂದಿ ಜಿಲ್ಲಾ ಆಸ್ಪತ್ರೆಗೆ ಬಂದು ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದರು. ಅವರೀಗ ಸುತ್ತಿಬಳಸಿ ಕಾರವಾರಕ್ಕೆ ಬರುವ ಬದಲು 95 ಕಿಲೋಮೀಟರ್ ದೂರದ ಹುಬ್ಬಳ್ಳಿಗೆ ಹೋಗುತ್ತಿದ್ದಾರೆ.

ಉಳಿದಂತೆ, ಪ್ರಾಥಮಿಕ ಶಾಲಾ ಶಿಕ್ಷಕರು ಹಲವು ಮಂದಿ ಕಾರವಾರದಲ್ಲಿ ಮನೆ ಮಾಡಿಕೊಂಡು ನಿತ್ಯವೂ ಜೊಯಿಡಾಕ್ಕೆ ಹೋಗಿ ಬರುತ್ತಿದ್ದರು. ಅವರೀಗ ಅನಿವಾರ್ಯವಾಗಿ ಜೊಯಿಡಾದಲ್ಲೇ ವಾಸ್ತವ್ಯ ಹೂಡುವ ಸ್ಥಿತಿ ಉಂಟಾಗಿದೆ.

‘ನಾನು ಮೊದಲು ಕಾರವಾರದಿಂದಲೇ ದಿನವೂ ಹೋಗಿ ಬರುತ್ತಿದ್ದೆ. ಆದರೆ, ಭೂ ಕುಸಿತವಾದ ಬಳಿಕ ಜೊಯಿಡಾದಲ್ಲಿ  ಸ್ವಲ್ಪ ದಿನ ಉಳಿದುಕೊಂಡೆ. ಸ್ನೇಹಿತರೊಬ್ಬರು ಸದ್ಯಕ್ಕೆ ತಮ್ಮ ಮನೆಯಲ್ಲಿ ಒಂದು ವಾರ ಉಳಿದುಕೊಳ್ಳಲು ಅವಕಾಶ ಕೊಟ್ಟಿದ್ದಾರೆ. ಅಷ್ಟರಲ್ಲಿ ಬೇರೆ ಮನೆ ನೋಡಿಕೊಳ್ಳಬೇಕಿದೆ. ಅಣಶಿಯಲ್ಲಿ ರಸ್ತೆ ಆದಷ್ಟು ಬೇಗ ಸಂಚಾರ ಯೋಗ್ಯವಾಗಲಿ’ ಎನ್ನುತ್ತಾರೆ ಕುಂಬಾರವಾಡದ ಸರ್ಕಾರಿ ಪಿ.ಯು ಕಾಲೇಜಿನ ರಸಾಯನ ವಿಜ್ಞಾನ ಉಪನ್ಯಾಸಕ ವೆಂಕಟೇಶ ಪಿ.ಆರ್.

ಇದೇ ರೀತಿ, ಪ್ರವಾಸೋದ್ಯಮಕ್ಕೂ ದೊಡ್ಡ ಹೊಡೆತವೇ ಬಿದ್ದಿದೆ. ದಾಂಡೇಲಿ, ಜೊಯಿಡಾಕ್ಕೆ ಪ್ರವಾಸ ಬಂದವರು ಕರಾವಳಿಯ ತಾಣಗಳನ್ನೂ ನೋಡಿಕೊಂಡು ಹೋಗುತ್ತಿದ್ದರು. ಆದರೆ, ಈಗ ರಸ್ತೆಯಿಲ್ಲದ ಕಾರಣ ಸಂಚಾರ ಅಸಾಧ್ಯವಾಗಿದೆ.

‘ಸುರಕ್ಷಿತ ದಾರಿ ಸೂಕ್ತ’:

‘ಜೊಯಿಡಾ ಭಾಗದವರು ಕಾರವಾರಕ್ಕೆ ಸದ್ಯದ ಸ್ಥಿತಿಯಲ್ಲಿ ಯಲ್ಲಾಪುರದ ಮೂಲಕವೇ ಬರಬೇಕಿದೆ. ಮಳೆ ಮುಂದುವರಿದಿದ್ದು, ಅಲ್ಲಿನ ಮಣ್ಣು ಮತ್ತಷ್ಟು ಸಡಿಲಾಗಿದೆ. ಇದರಿಂದ ಅಪಾಯವಾಗುವ ಸಾಧ್ಯತೆಯಿದೆ. ಹಾಗಾಗಿ ಸ್ವಲ್ಪ ದೂರವಾದರೂ ಸುರಕ್ಷಿತವಾಗಿರುವ ರಸ್ತೆಯಲ್ಲೇ ಪ್ರಯಾಣಿಸುವುದು ಸೂಕ್ತ’ ಎಂದು ಅವರು ಸಲಹೆ ನೀಡಿದ್ದಾರೆ.

-------

* ಅಣಶಿಗೆ ಭೇಟಿ ನೀಡಿದ ತಾಂತ್ರಿಕ ಪರಿಣತರ ತಂಡ ಮಣ್ಣಿನ ಮಾದರಿ ಸಂಗ್ರಹಿಸಿದೆ. ತಜ್ಞರು ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

- ವಿದ್ಯಾಶ್ರೀ ಚಂದರಗಿ, ‌ಕಾರವಾರ ಉಪ ವಿಭಾಗಾಧಿಕಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು