ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆರಾಯಿನ್ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿದ ಪೊಲೀಸರು

ಅಂಕೋಲಾದ ಬಾಳೆಗುಳಿಯಲ್ಲಿ ₹ 2 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ
Last Updated 18 ಮಾರ್ಚ್ 2020, 12:30 IST
ಅಕ್ಷರ ಗಾತ್ರ

ಕಾರವಾರ:₹ 2 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಹೆರಾಯಿನ್ (ಬ್ರೌನ್ ಶುಗರ್) ಸಾಗಿಸುತ್ತಿದ್ದ ನಾಲ್ವರನ್ನು ಜಿಲ್ಲಾ ಅಪರಾಧ ಮಾಹಿತಿ ದಳದ (ಡಿ.ಸಿ.ಐ.ಬಿ) ಪೊಲೀಸರು ಮಂಗಳವಾರ ರಾತ್ರಿ ಅಂಕೋಲಾ ತಾಲ್ಲೂಕಿನ ಬಾಳೆಗುಳಿಯಲ್ಲಿ ಬಂಧಿಸಿದ್ದಾರೆ.

ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರದವರಾದ ನಾರಾಯಣ ಭಾಗ್ವತ (35), ಚಂದ್ರಹಾಸ (29), ಸಿದ್ದಾಪುರ ತಾಲ್ಲೂಕಿನ ಕ್ಯಾದಗಿ ಹೂವಿನಮನೆಯ ವೀರಭದ್ರ ಹೆಗಡೆ (43), ಹಳ್ಳಿಬೈಲ್ ನಿವಾಸಿ ಪ್ರವೀಣ ಭಟ್ (30) ಬಂಧಿತರು.ಆರೋಪಿಗಳಿಂದ 2.6 ಕೆ.ಜಿ. ತೂಕದ ಮಾದಕ ವಸ್ತುಗಳ ಮೂರುಪೊಟ್ಟಣಗಳು,ಸಾಗಣೆಗೆ ಬಳಸಿದ ಎರಡು ಕಾರುಗಳು ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನುಜಪ್ತಿ ಮಾಡಲಾಗಿದೆ.

ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಶಿವ‍ಪ್ರಕಾಶ ದೇವರಾಜು, ‘ಆರೋಪಿಗಳು ಕಾರುಗಳಲ್ಲಿ ಯಲ್ಲಾಪುರ ದಿಕ್ಕಿನಿಂದ ಅಂಕೋಲಾದತ್ತ ಬರುತ್ತಿದ್ದರು. ಅವರಿಗೆ ಮಾದಕ ವಸ್ತು ನೀಡಿದವರು ಯಾರು, ಅದನ್ನು ಎಲ್ಲಿಗೆ ಸಾಗಿಸುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆದಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮತ್ತು ಅವರಿಗೆ ಯಾರ‍್ಯಾರ ಜೊತೆ ನಂಟು ಇದೆ ಎಂಬ ಬಗ್ಗೆ ವಿಸ್ತೃತ ತನಿಖೆ ನಡೆಯಲಿದೆ’ ಎಂದು ತಿಳಿಸಿದರು.

‘ವಶ ಪಡಿಸಿಕೊಳ್ಳಲಾದ ಹೆರಾಯಿನ್‌ನ ಗುಣಮಟ್ಟದ ಪರಿಶೀಲನೆಗೆ ಅದರ ಮಾದರಿಯನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎರಡು ದಿನಗಳಲ್ಲಿ ಅದರ ವರದಿ ಕೈಸೇರಬಹುದು. ಯೂರಿಯಾ ಮಾದರಿಯ ವಸ್ತುವಿದ್ದ 600 ಗ್ರಾಂ ತೂಕದ ಮತ್ತೊಂದು ಪೊಟ್ಟಣವೂ ಕಾರಿನಲ್ಲಿ ಸಿಕ್ಕಿದೆ. ಅದನ್ನೂ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಹೆರಾಯಿನ್ ಮಾರಾಟ ಜಾಲವು ಈ ಹಿಂದೆ ಬೆಂಗಳೂರಿನಲ್ಲಿ ಸಕ್ರಿಯವಾಗಿತ್ತು. ಅಲ್ಲಿ ಆಫ್ರಿಕಾ ಗ್ಯಾಂಗ್ ಅಕ್ರಮದಲ್ಲಿ ತೊಡಗಿಕೊಂಡಿತ್ತು. ಅದನ್ನುಪೊಲೀಸರು ಮಟ್ಟಹಾಕಿದ್ದರು. ಈಗ ಇಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಯಾರ ಜೊತೆ ಸಂಪರ್ಕವಿದೆ ಎಂದು ತನಿಖೆಯಿಂದ ಗೊತ್ತಾಗಲಿದೆ’ ಎಂದು ತಿಳಿಸಿದರು.

‘ಮಟ್ಟ ಹಾಕುವುದು ಖಚಿತ’:‘ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲವನ್ನು ಮಟ್ಟ ಹಾಕಲು ಆರು ತಿಂಗಳಿನಿಂದ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ದಾಂಡೇಲಿ ಮತ್ತು ಶಿರಸಿಯಲ್ಲಿ ದಾಳಿ ಮಾಡಲಾಗಿದೆ. ಈ ಅಕ್ರಮ ಚಟುವಟಿಕೆಯ ಕೇಂದ್ರ ಸ್ಥಾನ ಎಲ್ಲಿ ಎಂಬುದನ್ನು ಪತ್ತೆ ಹಚ್ಚಲಾಗುವುದು.ಇದರ ಹಿಂದೆ ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸಮೀಪದ ಉಡುಪಿ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಜಿಲ್ಲೆಗಳ ಪೊಲೀಸರಿಂದಲೂ ಮಾಹಿತಿ ಪಡೆದುಕೊಳ್ಳಲಾಗುವುದು’ ಎಂದು ಶಿವಪ್ರಕಾಶ ದೇವರಾಜು ಹೇಳಿದರು.

ಕಾರ್ಯಾಚರಣೆಯಲ್ಲಿ ಡಿ.ಸಿ.ಐ.ಬಿ ಇನ್‌ಸ್ಪೆಕ್ಟರ್ ನಿಶ್ಚಲಕುಮಾರ್, ಎ.ಎಸ್.ಐ ವಿನ್ಸೆಂಟ್ ಫರ್ನಾಂಡಿಸ್, ಮಂಜುನಾಥ ಎನ್.ನಾಯ್ಕ, ಕಾನ್‌ಸ್ಟೆಬಲ್‌ಗಳಾದ ಸದಾನಂದ ಸಾವಂತ, ಗಣೇಶ ನಾಯ್ಕ, ರುದ್ರೇಶ ಮೇತ್ರಾಣಿ, ಮಾಧವ ನಾಯಕ ಭಾಗವಹಿಸಿದ್ದರು. ಯಶಸ್ವಿ ಕಾರ್ಯಾಚರಣೆ ಮಾಡಿದ ತಂಡಕ್ಕೆ ಎಸ್.ಪಿ ಶಿವಪ್ರಕಾಶ ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT