ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ಸಮರ’ಕ್ಕೆ ಪೊಲೀಸ್ ತಂಡ

10 ದಿನಗಳಿಗೆ ಒಮ್ಮೆ ತಂಡದ ಸಿಬ್ಬಂದಿ ಬದಲಾವಣೆ: ಪ್ರತ್ಯೇಕ ವಾಸ್ತವ್ಯದ ವ್ಯವಸ್ಥೆ
Last Updated 28 ಮೇ 2020, 11:51 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮೊದಲ ಸಾಲಿನ ‘ಸೈನಿಕ’ರಾಗಿರುವ ಪೊಲೀಸರನ್ನು ಸೋಂಕಿನಿಂದ ರಕ್ಷಿಸಲು ಕಾರ್ಯತಂತ್ರವೊಂದು ಜಿಲ್ಲೆಯಲ್ಲಿ ಸಿದ್ಧವಾಗಿದೆ. ಅದಕ್ಕೆ ಅನುಗುಣವಾಗಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಾರ್ಪಾಟು ಮಾಡಲಾಗುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ‘ಜಿಲ್ಲೆಯಲ್ಲಿರುವ ಎಲ್ಲ ಸಿಬ್ಬದಿಯನ್ನುಎರಡು ತಂಡಗಳಾಗಿ ಗುರುತಿಸಲಾಗುತ್ತದೆ. ಒಂದು ತಂಡದ ಸಿಬ್ಬಂದಿ ದೈನಂದಿನ ಕರ್ತವ್ಯಗಳನ್ನು ಮಾಡುತ್ತಾರೆ. ಮತ್ತೊಂದು ತಂಡದವರನ್ನು ಕೊರೊನಾ ಮೊದಲ ಸಾಲಿನ ಸೈನಿಕರು ಎಂದು ಗುರುತಿಸಲಾಗುತ್ತದೆ’ ಎಂದು ವಿವರಿಸಿದರು.

‘ಕೊರೊನಾ ಸೈನಿಕರ ತಂಡದಸದಸ್ಯರಿಗೆವೈಯಕ್ತಿಕ ಸುರಕ್ಷತಾ ಸಲಕರಣೆಗಳನ್ನು (ಪಿ.ಪಿ.ಇ ಕಿಟ್) ನೀಡಲಾಗುತ್ತದೆ. ಅವರು ಕೊರೊನಾಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ನಿಭಾಯಿಸುತ್ತಾರೆ. 10 ದಿನಗಳಿಗೆ ಒಮ್ಮೆ ಈ ತಂಡದ ಸದಸ್ಯರು ಬದಲಾಗುತ್ತಾರೆ. ಎಲ್ಲರಿಗೂ ಪ್ರತ್ಯೇಕ ವಾಸ್ತವ‌್ಯದ ವ್ಯವಸ್ಥೆ ಮಾಡಲಾಗುತ್ತದೆ. ಅವರ ಆರೋಗ್ಯಕ್ಕೆ ಸಂಬಂಧಿಸಿದ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನುಕಡ್ಡಾಯವಾಗಿ ಅನುಸರಿಸಲಾಗುತ್ತದೆ. ಇದನ್ನುಶೀಘ್ರವೇ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ’ ಎಂದು ತಿಳಿಸಿದರು.

‘ಉಳಿದಂತೆ, ಸಾರ್ವಜನಿಕರು ಪೊಲೀಸ್ ಠಾಣೆಗಳ ಒಳಗೆ ಹೋಗುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಪೊಲೀಸ್ ಠಾಣೆಗಳು ಇಕ್ಕಟ್ಟಾಗಿರುತ್ತವೆ. ಒಳಗೆ ಬರುವ ಸಾರ್ವಜನಿಕರು ಅನಿವಾರ್ಯವಾಗಿನಮ್ಮ ಸಿಬ್ಬಂದಿಯ ಸಮೀಪ ಬರಬೇಕಾಗುತ್ತದೆ. ಹಾಗಾಗಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ.ಇದಕ್ಕಾಗಿಪರ್ಯಾಯ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಠಾಣೆಯ ಹೊರಗೆ ಶಾಮಿಯಾನ: ಪ್ರತಿ ಪೊಲೀಸ್ ಠಾಣೆಯ ಹೊರಗೆ ಶಾಮಿಯಾನ ಅಳವಡಿಸಿ, ಸಿಬ್ಬಂದಿಯನ್ನು ಅಲ್ಲಿ ಸಾಕಷ್ಟು ಅಂತರದಲ್ಲಿ ಕೂರುವಂತೆ ಸೂಚಿಸಲಾಗಿದೆ.ದೂರು ಬರೆದುಕೊಳ್ಳಲು ಇಬ್ಬರು ಪೊಲೀಸರು ಒಂದು ಕಡೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಮತ್ತೊಂದು ಬದಿಯಲ್ಲಿ ಮತ್ತಿಬ್ಬರು ಪೊಲೀಸರು ಇರುತ್ತಾರೆ. ಒಟ್ಟು ನಾಲ್ವರು ಸಿಬ್ಬಂದಿ ಅಲ್ಲಿರುತ್ತಾರೆ.

ಇವರ ಹೊರತಾಗಿ ಪೊಲೀಸ್ ಠಾಣೆಯ ಒಳಗೆ ಅನಗತ್ಯವಾಗಿ ಯಾರೂ ನಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಒಳಗೆ ಸಿಬ್ಬಂದಿಯನ್ನು ಹೊರತುಪಡಿಸಿ ಮತ್ಯಾರೂ ಹೋಗುವಂತಿಲ್ಲ. ಈಗಾಗಲೇ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ. ಜಿಲ್ಲೆಯ ಎಲ್ಲ ಠಾಣೆಗಳಲ್ಲೂಶೀಘ್ರವೇ ಇದೇ ಮಾದರಿಯನ್ನು ಜಾರಿಮಾಡಲಾಗುತ್ತದೆ ಎಂದು ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದರು.

‘ಮುಖಗವಸು, ಕೈಗವಸು ಧರಿಸಿ’: ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಮತ್ತು ಕೈಗವಸು ಧರಿಸಿಕೊಂಡು ಬರಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದ್ದಾರೆ.

ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ಠಾಣೆಯ ಪ್ರವೇಶ ದ್ವಾರದಲ್ಲಿರುವ ಸ್ಯಾನಿಟೈಸರ್‌ನಿಂದ ಕೈಗಳನ್ನು ತೊಳೆದುಕೊಳ್ಳಬೇಕು. ಗುಂಪಾಗಿ ಬರಬಾರದು. ತಮ್ಮ ಸಮಸ್ಯೆಗಳಿಗೆ ಠಾಣೆಯ ಹೊರಗಿರುವ ಸಿಬ್ಬಂದಿಯಸಹಾಯ ಪಡೆಯಬಹುದು.ಅಲ್ಲಿರುವಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಜೊತೆ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ: ಅಂಕಿ ಅಂಶ

28

ಪೊಲೀಸ್ ಠಾಣೆಗಳು

ತಲಾ 1

ಸಂಚಾರ, ಮಹಿಳಾ ಪೊಲೀಸ್ ಠಾಣೆ

1,300

ಪೊಲೀಸ್ ಸಿಬ್ಬಂದಿ

370

ಡಿ.ಎ.ಆರ್ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT