ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರಿಗೆ ಸೂರು ಮರೀಚಿಕೆ

ಎರಡು ವರ್ಷ ಕಳೆದರೂ ಪೂರ್ಣಗೊಳ್ಳದ ವಸತಿ ಗೃಹ ಸಮುಚ್ಚಯ
Last Updated 18 ಡಿಸೆಂಬರ್ 2019, 11:58 IST
ಅಕ್ಷರ ಗಾತ್ರ

ಶಿರಸಿ: ನಿತ್ಯ ನಸುಕಿನಲ್ಲಿ ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಕೈಗೆತ್ತಿಕೊಂಡಿದ್ದ ವಸತಿ ಗೃಹ ನಿರ್ಮಾಣ ಕುಂಟುತ್ತ ಸಾಗಿದೆ. ಪೌರ ಕಾರ್ಮಿಕರಿಗೆ ಸೂರು ಮರೀಚಿಕೆಯಾಗಿದೆ.

ಗೃಹ ಭಾಗ್ಯ ಯೋಜನೆಯಡಿ ಮೊದಲ ಹಂತದಲ್ಲಿ ಆರು ವಸತಿ ಗೃಹ ನಿರ್ಮಾಣಕ್ಕೆ ನಗರಸಭೆ ₹ 45 ಲಕ್ಷ ನಿಗದಿಪಡಿಸಿತ್ತು. 2017ರ ಅಕ್ಟೋಬರ್‌ನಲ್ಲಿ ಇಲ್ಲಿನ ಮರಾಠಿಕೊಪ್ಪದಲ್ಲಿ ಕಾಮಗಾರಿಯ ಗುದ್ದಲಿ ಪೂಜೆ ನಡೆಸಿ, ಕಟ್ಟಡ ಪೂರ್ಣಗೊಳ್ಳಲು ಮಳೆಗಾಲ ಹೊರತುಪಡಿಸಿ, ಒಂಬತ್ತು ತಿಂಗಳುಗಳ ಕಾಲಾವಕಾಶವನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು.

ಆದರೆ, ಎರಡು ವರ್ಷ ಕಳೆದರೂ ಇನ್ನೂ ಕಟ್ಟಡ ಅರೆಬರೆಯ ಸ್ಥಿತಿಯಲ್ಲಿದೆ. ಪ್ರತಿ ಮನೆಗೆ ಹಾಲ್, ಅಡುಗೆ ಮನೆ, ಒಂದು ಕೊಠಡಿ, ಶೌಚಾಲಯ ನಿರ್ಮಿಸಲಾಗಿದೆ. ಕಟ್ಟಡದ ಕಾಂಕ್ರೀಟ್ ಕೆಲಸ ಮಾತ್ರ ಆಗಿದ್ದು, ಇನ್ನುಳಿದ ಕಾಮಗಾರಿ ಆಗಬೇಕಾಗಿದೆ. ‘ಗೃಹ ಭಾಗ್ಯ ಯೋಜನೆಯಡಿ ಒಬ್ಬ ಪೌರಕಾರ್ಮಿಕರಿಗೆ ₹ 7.5 ಲಕ್ಷದಂತೆ, ಆರು ಮನೆಗಳಿಗೆ ಅನುದಾನ ನಿಗದಿಪಡಿಸಲಾಗಿತ್ತು. ಆದರೆ, ಯೋಜನೆ ರೂಪಿಸಿದವರು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಟ್ಟಡ ಪೂರ್ಣಗೊಳ್ಳಲು ಹೆಚ್ಚುವರಿಯಾಗಿ ₹ 25 ಲಕ್ಷ ಅನುದಾನ ಬೇಕಾಗಿದೆ. ಈ ಪ್ರಸ್ತಾವವನ್ನು ಇಲಾಖೆಗೆ ಕಳುಹಿಸಲಾಗಿದೆ’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

‘ಪೌರ ಕಾರ್ಮಿಕರಿಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಸತಿಗೃಹ ಯೋಜನೆ ಶಿರಸಿಯಲ್ಲಿ ಅನುಷ್ಠಾನಗೊಂಡಿತ್ತು. ಇದರ ಗುದ್ದಲಿ ಪೂಜೆ ನಡೆದ ನಂತರ ಕಾರವಾರದಲ್ಲಿ ಕಾಮಗಾರಿ ಶುರುವಾಗಿದ್ದರೂ, ಅಲ್ಲಿನ ಕಟ್ಟಡ ಪೂರ್ಣಗೊಂಡು, ಪೌರ ಕಾರ್ಮಿಕರಿಗೆ ಅದನ್ನು ಹಸ್ತಾಂತರಿಸಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಆರೋಪಿಸಿದರು.

‘ಕಾಮಗಾರಿಯನ್ನು ಇ–ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿತ್ತು. ನಿಗದಿತ ಮೊತ್ತದಲ್ಲಿ ಕಟ್ಟಡ ಪೂರ್ಣಗೊಂಡಿಲ್ಲ. ಹೆಚ್ಚುವರಿ ಮೊತ್ತದ ಬೇಡಿಕೆ ಇಟ್ಟಿದ್ದು, ಶೀಘ್ರ ಕಟ್ಟಡ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಎಲ್ಲ ಪೌರ ಕಾರ್ಮಿಕರಿಗೂ ವಸತಿ ಒದಗಿಸುವ ಉದ್ದೇಶದಿಂದ ₹ 2.32 ಕೋಟಿ ವೆಚ್ಚದ ಮತ್ತೊಂದು ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಪೌರಾಯುಕ್ತ ರಮೇಶ ನಾಯಕ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT