ಮಂಗಳವಾರ, ಸೆಪ್ಟೆಂಬರ್ 21, 2021
27 °C

ತ್ಯಾಗ ಮಾಡಿದವರನ್ನು ಸರಿಯಾಗಿ ನಡೆಸಿಕೊಳ್ಳದ ಬಿ.ಜೆ.ಪಿ: ಸ್ವಾಮೀಜಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಬಿ.ಜೆ.ಪಿ ಸರ್ಕಾರ ರಚನೆಯಾಗಲು ತ್ಯಾಗ ಮಾಡಿ ಬಂದವರನ್ನು ಪಕ್ಷದ ಹೈಕಮಾಂಡ್ ಸರಿಯಾಗಿ ನಡೆಸಿಕೊಂಡಿಲ್ಲ’ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಲ್ಲಾಪುರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿ.ಜೆ.ಪಿ ಸರ್ಕಾರ ರಚನೆಯಾಗಲು ಆನಂದ ಸಿಂಗ್, ರಮೇಶ್ ಜಾರಕಿಹೊಳಿ ಅವರಂತಹ 16 ಮಂದಿ ಶಾಸಕರ ತ್ಯಾಗ ಕಾರಣ. ಈಚೆಗೆ ಮುಖ್ಯಮಂತ್ರಿ ಬದಲಾಗಿ ಹೊಸ ಸಂಪುಟ ರಚನೆಯಾದಾಗ ಪಕ್ಷದ ಹೈಕಮಾಂಡ್ ಸರಿಯಾಗಿ ನಡೆಸಿಕೊಳ್ಳಬೇಕಿತ್ತು. ಆದರೆ, ಹಾಗಾಗಿಲ್ಲ ಎಂಬ ಭಾವನೆ ನಮ್ಮದಾಗಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿಯಾಗಿ, ಸಚಿವರಾಗಿ ಅಧಿಕಾರ ಅನುಭವಿಸುತ್ತಿರುವವರ ಹಿಂದೆ ಇವರೆಲ್ಲರ ಶ್ರಮವಿದೆ. ಹಾಗಾಗಿ ಅವರ ಶ್ರಮಕ್ಕೆ ಸರಿಯಾಗಿ ಸಚಿವ ಸ್ಥಾನಗಳನ್ನು ಕೊಡಬೇಕು ಎಂಬುದು ನಮ್ಮ ಮನವಿ’ ಎಂದರು.

‘ಹಿಂದಿನ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರು ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ಸಂದರ್ಭದಲ್ಲಿ, ವಾಲ್ಮೀಕಿ ಸಮುದಾಯಕ್ಕೆ ಶೇ 7.5ರ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೂ ಈ ವಿಚಾರ ತಿಳಿದಿದೆ. ಈ ಬಗ್ಗೆ ಸಮಾಜದ ಮುಖಂಡರ ಜೊತೆ ಅವರನ್ನು ಭೇಟಿ ಮಾಡಿ, ಮೀಸಲಾತಿಗೆ ಒತ್ತಾಯಿಸಲಾಗುತ್ತದೆ. ಅವರ ಭರವಸೆ ಅಥವಾ ಮಾತನ್ನು ಆಧರಿಸಿ ನಮ್ಮ ಮುಂದಿನ ನಿರ್ಧಾರ ಇರಲಿದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು