ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿ.ಯು ಇಂಗ್ಲಿಷ್ ಪರೀಕ್ಷೆಗೆ ಸಿದ್ಧತೆ ಪೂರ್ಣ

ಜಿಲ್ಲೆಯಲ್ಲಿ 30 ಪರೀಕ್ಷಾ ಕೇಂದ್ರಗಳು: ಮುಂಚಿತವಾಗಿ ಬರಲು ವಿದ್ಯಾರ್ಥಿಗಳಿಗೆ ಸೂಚನೆ
Last Updated 17 ಜೂನ್ 2020, 13:42 IST
ಅಕ್ಷರ ಗಾತ್ರ

ಕಾರವಾರ: ದ್ವಿತೀಯ ಪಿ.ಯು ಇಂಗ್ಲಿಷ್ ಪರೀಕ್ಷೆಯು ಜೂನ್ 18ರಂದು ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ.ಜಿಲ್ಲೆಯ ಎಲ್ಲ 30 ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಕೊಠಡಿಗಳಲ್ಲಿ ಸರ್ಕಾರದ ಮಾರ್ಗಸೂಚಿಯಷ್ಟು ಅಂತರ ಕಾಯ್ದುಕೊಳ್ಳುವ ಮಾದರಿಯಲ್ಲೇ ಡೆಸ್ಕ್‌ಗಳನ್ನು ಜೋಡಿಸಲಾಗಿದೆ. ಪ್ರತಿ ಡೆಸ್ಕ್‌ಅನ್ನೂಒಂದು ಮೀಟರ್ ಅಂತರದಲ್ಲಿ ಇಡಲಾಗಿದೆ. ಅವುಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಪರೀಕ್ಷಾ ಸಿಬ್ಬಂದಿ ಬುಧವಾರ ಬರೆದರು.

ಕೊರೊನಾ ಭೀತಿಯಕಾರಣದಿಂದ ಪ್ರತಿ ವಿದ್ಯಾರ್ಥಿಯನ್ನೂ ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಥರ್ಮಲ್ ಸ್ಕ್ರೀನಿಂಗ್ ಮೂಲಕ ಅವರ ದೇಹದ ಉಷ್ಣಾಂಶವನ್ನು ಪರೀಕ್ಷಿಸಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಒಂದುಮುಕ್ಕಾಲು ಗಂಟೆ ಮೊದಲೇ ಬರುವಂತೆ ತಿಳಿಸಲಾಗಿದೆ.

ದ್ವಿತೀಯ ಪಿ.ಯು ಇಂಗ್ಲಿಷ್ ಪರೀಕ್ಷೆಯು ಮಾರ್ಚ್ 23ರಂದೇ ನಡೆಯಬೇಕಿತ್ತು. ಆದರೆ, ಕೇಂದ್ರ ಸರ್ಕಾರವು ಅಷ್ಟರಲ್ಲಿ ಲಾಕ್‌ಡೌನ್ ಘೋಷಿಸಿದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿತ್ತು. ವಿದ್ಯಾರ್ಥಿಗಳಲ್ಲಿ ಬಹುತೇಕರು ಸ್ವಂತ ವಾಹನಗಳ‌ಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಉಳಿದವರಿಗೆ 105 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳನ್ನು ಅದೇ ಬಸ್‌ಗಳಲ್ಲಿ ಪುನಃ ಅವರ ಊರಿಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲದೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ಇಲ್ಲ’:ಜಿಲ್ಲೆಯಲ್ಲಿ ಒಟ್ಟು 13,568 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಅವರ ಪೈಕಿ 577 ವಿದ್ಯಾರ್ಥಿಗಳು ಹೊರ ಜಿಲ್ಲೆವರು ಹಾಗೂ 17 ವಿದ್ಯಾರ್ಥಿಗಳು ಹೊರ ರಾಜ್ಯದವರಿದ್ದಾರೆ. ಈ ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಲು ಪರೀಕ್ಷೆಯ ಆರಂಭದಿಂದ ಮುಕ್ತಾಯದವರೆಗೆ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ200ಮೀಟರ್ ವ್ಯಾಪ್ತಿಯಲ್ಲಿನಿಷೇಧಾಜ್ಞೆ ಜಾರಿಗೊಳಿಸಿ ಅವರು ಆದೇಶಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಕಾರ್ಯಕರ್ತರನ್ನು ನೇಮಿಸಲಾಗುತ್ತದೆ. ಜ್ವರ, ಶೀತ ಮುಂತಾದ ಸಮಸ್ಯೆಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಡಿ.ಡಿ.ಪಿ.ಯು ಎಸ್.ಎನ್.ಬಗಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT