ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ 18ಕ್ಕೆ: ಸುರಕ್ಷತೆಗೆ ಸಿದ್ಧತೆ ಆರಂಭ

18ರಂದು ದ್ವಿತೀಯ ಪಿ.ಯು ಕೊನೆಯ ಪರೀಕ್ಷೆ: ಕೇಂದ್ರಗಳಲ್ಲಿ ಸುರಕ್ಷತೆಗೆ ಸಿದ್ಧತೆ
Last Updated 15 ಜೂನ್ 2020, 11:40 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ವೈರಸ್ ಹರಡುತ್ತಿರುವ ಆತಂಕದ ನಡುವೆಯೇ ದ್ವಿತೀಯ ಪಿ.ಯು ಇಂಗ್ಲಿಷ್ ಪರೀಕ್ಷೆಯ ದಿನಾಂಕವೂ ಹತ್ತಿರವಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.

ಇಂಗ್ಲಿಷ್ ವಿಷಯದ ಪರೀಕ್ಷೆಯು ಮಾರ್ಚ್ 23ರಂದು ನಡೆಯಬೇಕಿತ್ತು. ಆದರೆ, ಅಷ್ಟರಲ್ಲಿ ಕೊರೊನಾ ವೈರಸ್ ನಿಯಂತ್ರಣ ಸಂಬಂಧ ದೇಶದಾದ್ಯಂತ ಲಾಕ್‌ಡೌನ್ ಪ್ರಕಟಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಹಾಗಾಗಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪರೀಕ್ಷೆ ನಡೆಸಬೇಕು ಅಥವಾ ಬೇಡ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳೂ ಆಗಿದ್ದವು. ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಜೂನ್ 18ರಂದು ಪರೀಕ್ಷೆ ನಡೆಸಲು ಪಿ.ಯು ಶಿಕ್ಷಣ ಮಂಡಳಿ ತೀರ್ಮಾನಿಸಿತು.

‘ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬರಲು ಅನುಕೂಲವಾಗುವಂತೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ. ಕೆಲವು ವಿದ್ಯಾರ್ಥಿಗಳು ತಮ್ಮ ಸ್ವಂತ ವಾಹನದಲ್ಲಿ ಬರುವುದಾಗಿ ತಿಳಿಸಿದ್ದಾರೆ’ ಎಂದು ಪಿ.ಯು ಶಿಕ್ಷಣ ಮಂಡಳಿಯ ಉಪನಿರ್ದೇಶಕ ಎಸ್.ಎನ್.ಬಗಲಿ ತಿಳಿಸಿದ್ದಾರೆ.

‘ಲಾಕ್‌ಡೌನ್ ಸಂದರ್ಭದಲ್ಲಿ ಉತ್ತರ ಕನ್ನಡದಿಂದ ಹೊರ ಜಿಲ್ಲೆಗಳಿಗೆ ವಿದ್ಯಾರ್ಥಿಗಳು ತಮ್ಮಪಾಲಕರ ಜೊತೆಗೆ ಹೋಗಿದ್ದಾರೆ. ಅದೇರೀತಿ, ಬೇರೆ ಜಿಲ್ಲೆಗಳಿಂದಲೂ ಬಂದಿದ್ದಾರೆ. ಗೋವಾದಂತಹನೆರೆಯ ರಾಜ್ಯಗಳಲ್ಲಿರುವವಿದ್ಯಾರ್ಥಿಗಳು ಕೂಡ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಎಲ್ಲರಿಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಿಲ್ಲ’ ಎಂದರು.

ಪ್ರತಿ ಕೊಠಡಿಯಲ್ಲಿ ಕನಿಷ್ಠ 12 ಹಾಗೂ ಗರಿಷ್ಠ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡಬಹುದು. ಡೆಸ್ಕ್‌ಗಳ ನಡುವೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ತಮ್ಮದೇ ನೀರಿನ ಬಾಟಲಿತೆಗೆದುಕೊಂಡು ಬಾರದವಿದ್ಯಾರ್ಥಿಗಳಿಗೆ ಒಂದೇ ಸಲ ಬಳಸಿ ಬಿಸಾಡುವ ಪ್ಲಾಸ್ಟಿಕ್ ಲೋಟದಲ್ಲಿ ನೀರನ್ನು ನೀಡಬೇಕು. ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ನೀಡುವಾಗ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವಂತೆಯೂ ತಿಳಿಸಲಾಗಿದೆ ಎಂದರು.

ಪ್ರತಿ ಕಾಲೇಜಿಗೆ ಒಂದರಂತೆ ಥರ್ಮಲ್ ಸ್ಕ್ಯಾನರ್‌ ಖರೀದಿಸಿ, ಪರೀಕ್ಷೆ ಮುಗಿಯುವವರೆಗ ಆಯಾ ಕೇಂದ್ರಗಳ ಮುಖ್ಯಸ್ಥರಿಗೆ ನೀಡಬೇಕು. ಎಲ್ಲ 30 ಪರೀಕ್ಷಾ ಕೇಂದ್ರಗಳಿಗೆ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಲು ಜಿಲ್ಲಾ ವೈದ್ಯಾಧಿಕಾರಿ ಸಹಮತ ಸೂಚಿಸಿದ್ದಾರೆ ಎಂದೂ ತಿಳಿಸಿದರು.

ಒಂದು ಗಂಟೆ ಮುಂಚೆ ಹಾಜರಿ:‘ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯವಾಗಿ ಒಂದು ತಾಸು ಮುಂಚಿತವಾಗಿ ಹಾಜರಾಗಬೇಕು. ಪರೀಕ್ಷಾ ಕೇಂದ್ರಗಳಿಗೆ ಬರುವಾಗ ಗುಂಪಾಗಿ ಬರಬಾರದು’ ಎಂದು ಸೂಚಿಸಲಾಗಿದೆ ಎಂದು ಎಸ್.ಎನ್.ಬಗಲಿ ತಿಳಿಸಿದ್ದಾರೆ.

‘ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕೈತೊಳೆಯಲು ನೀರು, ಸಾಬೂನು ಮತ್ತು ಲಿಕ್ವಿಡ್‌ಗಳನ್ನು ಒದಗಿಸಬೇಕು. ಪ್ರತಿ ವಿದ್ಯಾರ್ಥಿಯೂ ಸ್ಯಾನಿಟೈಸ್ ಮಾಡಿಕೊಂಡು, ಮುಖಗವಸು ಧರಿಸಿದ್ದನ್ನು ಖಾತರಿ ಪಡಿಸಿಕೊಳ್ಳಬೇಕು. ಸಿಬ್ಬಂದಿ ಕೂಡ ಮುಖಗವಸು ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ಪಿ.ಯು ವಿದ್ಯಾರ್ಥಿಗಳು: ಅಂಕಿ ಸಂಖ್ಯೆ

ನೋಂದಣಿ ಮಾಡಿಸಿಕೊಂಡವರು-13,568

ಬೇರೆ ಜಿಲ್ಲೆಗಳಿಗೆ ಹೋದವರು- 145

ಬೇರೆ ಜಿಲ್ಲೆಗಳಿಂದ ಬಂದವರು- 572

ಬೇರೆ ರಾಜ್ಯಗಳಿಂದ ಬಂದವರು-9

ಒಟ್ಟು ಪರೀಕ್ಷಾ ಕೇಂದ್ರಗಳು- 30

ಒಟ್ಟು ಬ್ಲಾಕ್‌ಗಳು- 757

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT