ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಮರಿಗಳ ನಿರ್ದಯ ಬೇಟೆಯೇ ಸಮಸ್ಯೆ

ಆಹಾರಕ್ಕಾಗಿ ಸಮುದ್ರದ ಮೇಲೆ ಮನುಷ್ಯನ ಅವಲಂಬನೆ ಕಡಿಮೆಯಾಗಲಿ: ತಜ್ಞರ ಅಭಿಮತ
Last Updated 5 ಸೆಪ್ಟೆಂಬರ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

ಕಾರವಾರ: ‘ಮೀನಿನ ಮರಿಗಳನ್ನು ನಿರ್ದಯವಾಗಿ ಸಾಯಿಸುತ್ತಿರುವುದೇ ಮತ್ಸ್ಯ ಸಂಕುಲದ ಪ್ರಮಾಣದಲ್ಲಿ ಇಳಿಕೆಯಾಗಲು ಮುಖ್ಯ ಕಾರಣ’ಎನ್ನುತ್ತಾರೆ ನಗರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಜಗನ್ನಾಥ ರಾಥೋಡ್.

‘ಸಮುದ್ರದಲ್ಲಿ ಅವೈಜ್ಞಾನಿಕವಾಗಿ ಬಲೆ ಹಾಕಿ ಹಿಡಿಯುವುದೇ ಇರಲಿ, ನದಿಯಲ್ಲಿ ದುರಾಸೆಯಿಂದ ಪಟಾಕಿಯಂತಹ ಸ್ಫೋಟಕಗಳನ್ನು ಬಳಸುವುದೇ ಇರಲಿ, ಇದನ್ನು ತಡೆಯದಿದ್ದರೆ ತೊಂದರೆ ತಪ್ಪಿದ್ದಲ್ಲ. ಮೊಟ್ಟೆ ಇಡಲು ಸುರಕ್ಷಿತ ಜಾಗಕ್ಕೆ ಬಂದ ಮೀನನ್ನು ಹಿಡಿಯಲು ಸ್ಫೋಟಕಗಳನ್ನು ಕೆಲವರು ಬಳಸುತ್ತಾರೆ. ಅದರ ಕಂಪನಕ್ಕೇ ಮತ್ತಷ್ಟು ಮರಿಗಳು ಸಾಯುತ್ತವೆ. ಈ ರೀತಿಯ ಪರಿಸರ ಸ್ನೇಹಿಯಲ್ಲದ ಕ್ರಮದಿಂದ ಮೀನುಗಾರಿಕೆ ಅಪಾಯದಲ್ಲಿದೆ’ ಎನ್ನುವುದು ಅವರ ಅನಿಸಿಕೆ.

ಡಾ.ಜಗನ್ನಾಥ ರಾಥೋಡ್

‘ಸಮುದ್ರದಲ್ಲಿ ರಾತ್ರಿ ಪ್ರಖರವಾದ ಬೆಳಕನ್ನು ಬೀರುತ್ತ ಮೀನುಗಾರಿಕೆ ಮಾಡುವ ಪದ್ಧತಿಯಿಂದ ಮತ್ಸ್ಯಕುಲದ ಸ್ವಾಭಾವಿಕ ಜೀವನಕ್ಕೆ ಅಡ್ಡಿಯಾಗುತ್ತದೆ. ಅವು ವಲಸೆ ಹೋಗುವುದು, ಮೊಟ್ಟೆ ಇಡುವುದಕ್ಕೆ ತೊಂದರೆಯಾಗುತ್ತದೆ. ಬಿಸಿಲು ಬಂದಾಗ ಸಮುದ್ರದ ತಳಕ್ಕೆ ಚಲಿಸುವ ಮೀನುಗಳು, ರಾತ್ರಿ ಮೇಲ್ಮೈಗೆ ಬರುತ್ತವೆ. ಆದರೆ, ರಾತ್ರಿ ಬೆಳಕು ಬಳಕೆ ಮಾಡುವುದರಿಂದ ಅವುಗಳಿಗೆ ಹಗಲು, ರಾತ್ರಿಗಳ ವ್ಯತ್ಯಾಸವೇ ತಿಳಿಯುವುದಿಲ್ಲ. ಅವುಗಳ ಮೇಲ್ಮುಖ ಮತ್ತು ಕೆಳಮುಖ ವಲಸೆಗೆ (ವರ್ಟಿಕಲ್ ಮೈಗ್ರೇಷನ್) ಅವಕಾಶವಾಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ.

‘ಮೀನುಗಾರಿಕೆಗೆ ಬಳಸುವ ಬಲೆಯಲ್ಲೂ ಬಿ.ಆರ್.ಡಿ (ಬೈಕ್ಯಾಚ್ ರೆಡ್ಯೂಸಿಂಗ್ ಡಿವೈಸ್) ಉಪಕರಣ ಅಳವಡಿಸಬೇಕು. ಇದರಿಂದ ಸಣ್ಣ ಮೀನುಗಳು ಬಲೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಈ ನಿರ್ದೇಶನವನ್ನು ಬಹುತೇಕರು ಪಾಲನೆ ಮಾಡುವುದಿಲ್ಲ’ ಎನ್ನುತ್ತಾರೆ ಅವರು.

‘ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕಾ ಉದ್ಯಮದಲ್ಲಿ ತೊಡಗಿಕೊಂಡಿರುವ ಕಾರ್ಮಿಕರಲ್ಲಿ ಬಿಹಾರ, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮುಂತಾದ ರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಮಿಷನ್ ಆಸೆಗೆ ಅವರು ಸಣ್ಣ ಮೀನುಗಳನ್ನು ಕೂಡ ಹಿಡಿಯದಂತೆ ತಿಳಿವಳಿಕೆ ನೀಡಬೇಕು. ಮರಿ ಮೀನುಗಳನ್ನು ಹಿಡಿಯುವುದು ಒಂದು ರೀತಿಯಲ್ಲಿ ರಾಷ್ಟ್ರಕ್ಕೇ ನಷ್ಟ. ಅವು ಆಹಾರಕ್ಕೂ ಬಳಕೆಯಾಗುವುದಿಲ್ಲ. ದೊಡ್ಡದಾಗಿ ಬೆಳೆಯಲೂ ಅವಕಾಶ ಸಿಗುವುದಿಲ್ಲ’ ಎಂದು ವಿಶ್ಲೇಷಿಸುತ್ತಾರೆ.

ಅಗತ್ಯ ನೆರವು: ‘ಜಿಲ್ಲೆಯಲ್ಲಿ ಮೀನುಗಾರಿಕೆಗೆ ಒತ್ತು ನೀಡಲಾಗುತ್ತಿದೆ. ಆಳಸಮುದ್ರ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಅಗತ್ಯ ನೆರವು ನೀಡಲಾಗುತ್ತಿದೆ’ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೆಶಕ ಪಿ.ನಾಗರಾಜು ತಿಳಿಸಿದ್ದಾರೆ.

ಪಿ.ನಾಗರಾಜು

‘ಜಿಲ್ಲೆಯಲ್ಲಿ ಒಟ್ಟು 1.50 ಲಕ್ಷ ಮೀನುಗಾರರಿದ್ದು, ಸುಮಾರು 69 ಸಾವಿರ ಮಂದಿ ಸಕ್ರಿಯರಾಗಿದ್ದಾರೆ. ಯಾಂತ್ರೀಕೃತ ದೋಣಿಗಳಿಗೆ ಹೊಸದಾಗಿ ಅನುಮತಿ ಕೊಡುತ್ತಿಲ್ಲ. 75 ಅರ್ಜಿಗಳು ಪ್ರಸ್ತುತ ಇಲಾಖೆಯಲ್ಲಿ ಅನುಮತಿಗೆ ಬಾಕಿ ಇವೆ. ಉಳಿದಂತೆ, ವರ್ಷದಿಂದ ವರ್ಷಕ್ಕೆ ಸಾಂಪ್ರದಾಯಿಕ ದೋಣಿಗಳ ಸಂಖ್ಯೆ ಸುಮಾರು 150ರಷ್ಟು ಏರಿಕೆಯಾಗುತ್ತಿದೆ. ಬುಲ್ ಟ್ರಾಲ್, ಲೈಟ್‌ ಫಿಶಿಂಗ್ ನಿಷೇಧಿಸಲಾಗಿದೆ’ ಎಂದು ಅಂಕಿ ಅಂಶ ನೀಡಿದ್ದಾರೆ.

‘ಜಿಲ್ಲೆಯಲ್ಲಿ 2,600 ಯಾಂತ್ರೀಕೃತ ದೋಣಿಗಳಿವೆ. 200ರಿಂದ 300 ನೋಂದಣಿಯಾಗದ ದೋಣಿಗಳಿದ್ದು, ಮೀನುಗಾರರಿಗೆ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಜಿಲ್ಲೆಯಲ್ಲಿರುವ ಒಟ್ಟು ದೋಣಿಗಳಲ್ಲಿ ಶೇ 25ರಷ್ಟು ವಿವಿಧ ಕಾರಣಗಳಿಂದ ಕೆಲಸ ಮಾಡುತ್ತಿಲ್ಲ‌’ ಎಂದೂ ವಿವರ ನೀಡಿದರು.

ಸಂಪನ್ಮೂಲ ಮೊದಲಿದ್ದಷ್ಟೇ ಇದ್ದರೂ ಅದರ ಮೇಲೆ ಅವಲಂಬಿತರ ಸಂಖ್ಯೆ ಬಹಳ ಹೆಚ್ಚಾಗಿದೆ. ಇದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದುಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಜಗನ್ನಾಥ ರಾಥೋಡ್ ಪ್ರತಿಕ್ರಿಯಿಸಿದರು.

ಮೀನುಗಾರರಿಗೆ ಸುಧಾರಿತ ಬಲೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಇಲಾಖೆ ನಿಗದಿಪಡಿಸಿದ ಅಳತೆಯ ಮೀನನ್ನು ಮಾತ್ರ ಹಿಡಿಯಬೇಕು ಎಂದೂ ಅವರಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕಪಿ. ನಾಗರಾಜು ಹೇಳಿದರು.

‘ಪರ್ಯಾಯ ಮೂಲ ಸೃಷ್ಟಿಯಾಗಲಿ’

ಜಿಲ್ಲೆಯ ಕಾರವಾರ, ಹೊನ್ನಾವರದ ವಿವಿಧೆಡೆ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿ.ಎಂ.ಎಫ್.ಆರ್.ಐ) ಸಹಯೋಗದಲ್ಲಿ ‘ಪಂಜರ ಮೀನು ಕೃಷಿ’ ಮಾಡಲಾಗುತ್ತಿದೆ. ಇಂತಹ ಕಾರ್ಯವನ್ನು ಹೆಚ್ಚು ಮಾಡಿ ಸಮುದ್ರದ ಮೇಲಿನ ಅವಲಂಬನೆ ತಪ್ಪಿಸಬೇಕು ಎನ್ನುವುದು ಡಾ.ಜಗನ್ನಾಥ ರಾಥೋಡ್ ಅವರ ಸಲಹೆ.

‌ಮೀನುಗಾರರಿಗೆ ಆದಾಯ ಬರುವ ರೀತಿಯಲ್ಲಿ ನೀಲೆ, ಏಡಿ, ಸಮುದ್ರ ಕಳೆ (ಸೀ ವೀಡ್) ಮುಂತಾದವನ್ನು ಬೆಳೆಸಲು ಪ್ರೋತ್ಸಾಹಿಸಬೇಕು. ಅವರ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ 2–3 ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇದರಿಂದ ಸಮುದ್ರದ ಸಂಪತ್ತು ವೃದ್ಧಿಯಾಗುತ್ತದೆ. ನಾರ್ವೆ, ಪೋಲೆಂಡ್ ಮುಂತಾದೆಡೆ ಈ ಕ್ರಮ ಯಶಸ್ವಿಯಾಗಿದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT