ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ: ಮಾರ್ದನಿಸಿದ ಉಧೋ ಉಧೋ ಮಾರಮ್ಮ

ಶೋಭಾಯಾತ್ರೆ ಮೂಲಕ ದೇವಿ ಮೆರವಣಿಗೆ: ಭಕ್ತಿಪರವಶರಾದ ಜನ
Last Updated 16 ಮಾರ್ಚ್ 2022, 14:29 IST
ಅಕ್ಷರ ಗಾತ್ರ

ಶಿರಸಿ: ಮಾರಿಕಾಂಬಾ ದೇವಿಯ ಜಾತ್ರೆ ಬುಧವಾರ ನಡೆದ ರಥೋತ್ಸವದೊಂದಿಗೆ ಕಳೆಗಟ್ಟಿದೆ. ಸಾವಿರಾರು ಭಕ್ತರ ಜಯಘೋಷ, ಭಕ್ತಿಪರವಶ ಸೇವೆಯೊಂದಿಗೆ ಮಾರಿಕಾಂಬೆಯನ್ನು ಭವ್ಯ ಶೋಭಾಯಾತ್ರೆ ಮೂಲಕ ಗದ್ದುಗೆಗೆ ಕರೆತರಲಾಯಿತು.

ದೇವಸ್ಥಾನದಿಂದ ಬೆಳಿಗ್ಗೆ 7.27ಕ್ಕೆ ದೇವಿಯ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. 8.36ಕ್ಕೆ ಸರಿಯಾಗಿ ಅಲ್ಲಿಂದ ದೇವಿಯ ಮೆರವಣಿಗೆ ಆರಂಭಗೊಂಡಿತು. ಬಣ್ಣದ ಪತಾಕೆಗಳಿಂದ ಕಂಗೊಳಿಸುತ್ತಿದ್ದ ರಥದಲ್ಲಿ ಆಸೀನಳಾಗಿದ್ದ ಮಾರಿಕಾಂಬೆ ಪೇಟೆಯುದ್ದಕ್ಕೂ ಇಣುಕಿಣುಕಿ ನೋಡುತ್ತ ಸಾಗುವಂತೆ ಭಾಸವಾಯಿತು.

ದೇವಿ ಮೆರವಣಿಗೆ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಭಾವಪರವಶರಾದರು. ಆವೇಶದೊಂದಿಗೆ ಹರಕೆ ಒಪ್ಪಿಸಿದರು. ಅಡಿಕೆ ಸಿಂಗಾರ, ಬೇವಿನ ಸೊಪ್ಪು ಹಿಡಿದು ಮೈತುಂಬ ಕುಂಕುಮ ಸೋಕಿಕೊಂಡಿದ್ದ ದುರ್ಮುರ್ಗಿಯರು, ಲಂಬಾಣಿ ಮಹಿಳೆಯರು ಭಕ್ತಿಪರವಶಗೊಂಡು ಅರಚಾಡುತ್ತಿದ್ದರು. ಗಾಳಿಮಾರಿಗಳು ಮೈಗೆ ಚಾಟಿ ಬೀಸಿಕೊಂಡು ದೇವಿಯ ಲಕ್ಷ ತಮ್ಮತ್ತ ತಿರುಗಲಿ ಎಂದು ಪ್ರಯತ್ನಿಸುತ್ತಿದ್ದರು.

ಡೊಳ್ಳು ಕುಣಿತ, ಜಾಂಜ್ ಬಾರಿಸುವವರು ಶೋಭಾಯಾತ್ರೆಗೆ ಮೆರಗು ತಂದರು. ಸುಮಾರು ಒಂದೂವರೆ ಗಂಟೆಗಳ ಅವಧಿಯಲ್ಲಿ ದೇವಿಯ ರಥ ಬಿಡಕಿಬೈಲಿನ ಗದ್ದುಗೆ ಸಮೀಪ ತೆರಳಿತು. ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ಮೇಟಿದೀಪ ಕರೆತಂದ ಬಳಿಕ 12.40ರ ನಂತರ ರಥದಿಂದ ದೇವಿಯನ್ನು ಇಳಿಸಿ ಬಾಬುದಾರರು ಗದ್ದುಗೆಗೆ ಕರೆದೊಯ್ದರು. ಈ ವೇಳೆ ‘ಉಧೋ ಉಧೋ ಮಾರಮ್ಮ’, ‘ಮಾರಿಕಾಂಬೆ ಕಿ ಜೈ’ ಎಂದು ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.

ಘಟ್ಟ ಏರುವ ರಥ: ಬಹುತೇಕ ರಥೋತ್ಸವಗಳು ಸಮತಟ್ಟಾದ ರಥಬೀದಿಯಲ್ಲಿ ನಡೆಯುತ್ತವೆ. ಆದರೆ ಶಿರಸಿಯ ಮಾರಿಕಾಂಬಾ ದೇವಿ ರಥ ಮಾತ್ರ ಘಟ್ಟವನ್ನೂ ಏರಿ ಸಾಗುತ್ತದೆ. ಇದು ಅಪರೂಪದ ಸಂಗತಿಯೂ ಹೌದು ಎನ್ನುತ್ತಾರೆ ದೇವಸ್ಥಾನದ ಬಾಬುದಾರರು. ಮರ್ಕಿದುರ್ಗಿ ದೇವಸ್ಥಾನದ ಬಳಿ ಬಂದು ತಿರುಗುವ ರಥ ನಂತರ 70 ಮೀ.ಗೂ ಹೆಚ್ಚು ದೂರದ ಘಟ್ಟ ಏರಿ ಮುಖ್ಯರಸ್ತೆಗೆ ತಲುಪುತ್ತದೆ.

ರಥೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿತ್ತು. ನೂರಾರು ಸಂಖ್ಯೆಯ ಪೊಲೀಸರು ಮೆರವಣಿಗೆಯಲ್ಲಿ ಇದ್ದು ಜನರನ್ನು ನಿಯಂತ್ರಿಸುತ್ತಿದ್ದರು. ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಭಕ್ತರಿಗೆ ಪಾನಕ, ನೀರು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT