ಭಾನುವಾರ, ಮಾರ್ಚ್ 26, 2023
23 °C

ಬಾಣಂತಿ ಸಾವು: ಸಂಬಂಧಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಬಾಣಂತಿಯೊಬ್ಬರು ಮೃತಪಟ್ಟಿದ್ದರಿಂದ ಸಂಬಂಧಿಕರು, ನಾಗರಿಕರು ಪ್ರತಿಭಟನೆ ನಡೆಸಿದರು. ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸರ್ವೋದಯ ನಗರದ ನಿವಾಸಿ ಗೀತಾ ಶಿವನಾಥ ಬಾನಾವಳಿಕರ್ (30) ಎಂಬುವವರು ಮೃತಪಟ್ಟವರು. ಮೂರು  ದಿನಗಳ ಹಿಂದೆ ಅವರಿಗೆ ಹೆರಿಗೆಯಾಗಿತ್ತು. ಇದು ಅವರ ಎರಡನೇ ಹೆರಿಗೆಯಾಗಿರುವ ಕಾರಣ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆಂದು ಗುರುವಾರ ಬೆಳಿಗ್ಗೆ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ತುರ್ತು ನಿಗಾ ಘಟಕದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಸಂಜೆಯ ವೇಳೆಗೆ ಮೃತಪಟ್ಟಿದ್ದರು.

ಈ ವಿಷಯ ತಿಳಿದ ಅವರ ಸಂಬಂಧಿಕರು ಹಾಗೂ ಪರಿಚಯಸ್ಥರು, ಆಸ್ಪತ್ರೆಯ ಬಳಿ ಸೇರಿದರು. ಆರೋಗ್ಯವಂತರಾಗಿದ್ದ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಮೂರು ದಿನಗಳ ಹಸುಳೆಗೆ ತಾಯಿ ಇಲ್ಲದಂತಾಗಿದೆ ಎಂದು ಕಣ್ಣೀರು ಸುರಿಸಿದರು. ಪೊಲೀಸರು ಸ್ಥಳಕ್ಕೆ ಬಂದು ಭದ್ರತೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

‘ಹೃದಯಾಘಾತದಿಂದ ಸಾವು’:

‘ಬಾಣಂತಿಗೆ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತವಾಯಿತು. ಕೂಡಲೇ ಅನಸ್ತೇಶಿಯಾ ತಜ್ಞರು ಮತ್ತು ಮಕ್ಕಳ ತಜ್ಞರು ಬಂದು ಚಿಕಿತ್ಸೆ ಮುಂದುವರಿಸಿದರು. ಈ ನಿಟ್ಟಿನಲ್ಲಿ ಸುಮಾರು ಎರಡೂವರೆ ತಾಸು ಪ್ರಯತ್ನಿಸಿದರು. ಆದರೆ, ಹೃದಯಾಘಾತವಾದ ಕಾರಣ ಮಹಿಳೆ ಮೃತಪಟ್ಟರು. ಅವರಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯವಾಗಿಲ್ಲ. ಶವದ ಮರಣೋತ್ತರ ಪರೀಕ್ಷೆ ಮಾಡಲಾಗುವುದು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಕುಡ್ತರಕರ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.