ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ | ವ್ಯಾಪಾರಕ್ಕೆ ಅನುಕೂಲ: ಜನರಿಗೆ ಪ್ರತಿಕೂಲ

45 ಮೀಟರ್ ಬದಲು 30 ಮೀಟರ್‌ಗೆ ಚತುಷ್ಪಥ ಸೀಮಿತ: ಮೂಲ ಸೌಕರ್ಯದ ಕೊರತೆ
Last Updated 11 ಮಾರ್ಚ್ 2022, 20:30 IST
ಅಕ್ಷರ ಗಾತ್ರ

ಭಟ್ಕಳ: ಪಟ್ಟಣದ ರಂಗಿನಕಟ್ಟೆ ಹಾಗೂ ಶಿರಾಲಿಯಂತಹ ವಾಹನ ದಟ್ಟಣೆ, ಜನವಸತಿ ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿಯನ್ನು 45 ಮೀಟರ್ ಬದಲಾಗಿ 30 ಮೀಟರ್‌ಗೆ ಸೀಮಿತಗೊಳಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿ ಅಂಚಿನ ಕಟ್ಟಡಗಳನ್ನು ಉಳಿಸಲು ಹೋದ ಜನ್ರಪ್ರತಿನಿಧಿಗಳು, ಅಧಿಕಾರಿಗಳು ಸಾಮಾನ್ಯ ಜನರನ್ನು ಮೃತ್ಯಕೂಪಕ್ಕೆ ದೂಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಬೈಪಾಸ್ ರಸ್ತೆಗಾಗಿ ಆಗ್ರಹಿಸಿದ್ದರು:

ತಾಲ್ಲೂಕಿನಲ್ಲಿ ಚತುಷ್ಪಥ ಕಾಮಗಾರಿ ನಡೆಸುವ ಪೂರ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ, ಪಟ್ಟಣ ವ್ಯಾಪ್ತಿಯಲ್ಲಿ ಹೆದ್ದಾರಿ ಸಾಗಲು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ವ್ಯಾಪಾರಸ್ಥರ ಸಂಘ ಸೇರಿದಂತೆ ಹಲವು ಪ್ರಜ್ಞಾವಂತ ನಾಗರಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಮನವಿ ಕೂಡ ನೀಡಿದ್ದರು. ಆದರೆ, ಅದಕ್ಕೆ ಕೆಲವು ಸಂಘ ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿತ್ತು. ಬೈಪಾಸ್ ಮೂಲಕ ಹೆದ್ದಾರಿ ಸಾಗಿದರೆ ಭಟ್ಕಳ ಸಂಪರ್ಕ ತಪ್ಪಿಹೋಗುತ್ತದೆ ಎನ್ನುವುದು ಅವರ ವಾದವಾಗಿತ್ತು. ಅದರ ಫಲವಾಗಿ ಭಟ್ಕಳದ ಜನ ಇಂದು ತೊಂದರೆ ಅನುಭವಿಸುವಂತಾಗಿದೆ ಎಂದು ಅಂದು ವಿರೋಧಿಸಿದವರ ವಾದವಾಗಿದೆ.

2016ರಲ್ಲಿ ಹೆದ್ದಾರಿ ಪ್ರಾಧಿಕಾರವು 45 ಮೀಟರ್ ರಸ್ತೆಯ ನೀಲನಕ್ಷೆ ಸಿದ್ಧಪಡಿಸಿ ಭೂಸ್ವಾಧೀನ ಕಾರ್ಯ ಆರಂಭಿಸಿತು. ತಮ್ಮ ಕಟ್ಟಡ ಹಾಗೂ ಅಂಗಡಿ ಮಳಿಗೆಗಳ ರಕ್ಷಣೆಗಾಗಿ ಭಟ್ಕಳದ ರಂಗಿನಕಟ್ಟೆ, ನವಾಯತ್ ಕಾಲೊನಿ ಹಾಗೂ ಶಿರಾಲಿ ಭಾಗದ ಹೆದ್ದಾರಿ ಅಂಚಿನ ನಿವಾಸಿಗಳು 30 ಮೀಟರ್‌ಗೆ ಸೀಮಿತಗೊಳಿಸುವಂತೆ ಜನಪ್ರತಿನಿಧಿಗಳ ಮೂಲಕ ಒತ್ತಡ ಹೇರಿದರು. ವ್ಯಾಪಾರಿಗಳ ಬೇಡಿಕೆಗೆ ಮಣಿದ ಹೆದ್ದಾರಿ ಪ್ರಾಧಿಕಾರವು ಈ ಪ್ರದೇಶದಲ್ಲಿ 30 ಮೀಟರ್ ರಸ್ತೆ ನಿರ್ಮಿಸಿದೆ.

ಬೀದಿ ದೀಪ ಇಲ್ಲ:

30 ಮೀಟರ್ ರಸ್ತೆಯ ಮಧ್ಯಭಾಗದಲ್ಲಿ ಸಿಮೆಂಟ್ ರಸ್ತೆ ವಿಭಜಕ ನಿರ್ಮಿಸಲಾಗುತ್ತಿದೆ. ಇದರಿಂದ ಕ್ರಾಸಿಂಗ್ ಸ್ಥಳದಲ್ಲಿ ಎದುರಿನ ವಾಹನದ ವೇಗ ತಿಳಿಯದೆ ಅಪಘಾತ ಸಂಭವ ಜಾಸ್ತಿಯಾಗಲಿದೆ. ಪಟ್ಟಣ ವ್ಯಾಪ್ತಿಯಲ್ಲಿ ಡಿವೈಡರ್ ನಿರ್ಮಿಸಿದರೆ ಬೀದಿದೀಪದ ವ್ಯವಸ್ಥೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಬೀದಿದೀಪ ಅಳವಡಿಸದೇ ಹೋದರೆ ಪಟ್ಟಣದ 30 ಮೀಟರ್ ರಸ್ತೆ ಕತ್ತಲೆಯಾಗಲಿದೆ.

ನಿತ್ಯವೂ ಅಫಘಾತ:

30 ಮೀಟರ್ ರಸ್ತೆ ನಿರ್ಮಾಣದಿಂದ ಹೆದ್ದಾರಿ ಅಂಚಿನ ನಿವಾಸಿಗಳ ಅಂಗಡಿ, ಮನೆಗಳು ಉಳಿದವು. ಆದರೆ, ತಾವು ಮಾತ್ರ ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ ಎನ್ನುವುದು ಸಾರ್ವಜನಿಕರ ಮಾತಾಗಿದೆ. ಪಟ್ಟಣದ ವೆಂಕಟಾಪುರದಿಂದ ರಂಗಿನಕಟ್ಟೆ ತನಕ 30 ಮೀಟರ್ ರಸ್ತೆ ನಿರ್ಮಿಸಲಾಗುತ್ತಿದೆ.

ಈ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲು ಹೆಚ್ಚುವರಿ ಭೂಸ್ವಾಧೀನ ಕೂಡ ಇಲ್ಲ. ಹನಿಫಾಬಾದ್‌ನಿಂದ ರಂಗಿನಕಟ್ಟೆ ತನಕ ವ್ಯಾಪಾರ ವಹಿವಾಟು ಪ್ರದೇಶವಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಶಾಲೆ, ಮಸೀದಿ, ಆಸ್ಪತ್ರೆ ಸೇರಿದಂತೆ ಸಾವಿರಾರು ಮನೆಗಳು, ಜನರು ವಾಸಿಸುತ್ತಿದ್ದಾರೆ.

ಸರ್ವೀಸ್ ರಸ್ತೆ ಇರದ ಕಾರಣ ಇಲ್ಲಿ ಈಗಾಗಲೇ ದಿನನಿತ್ಯ ಅಪಘಾತ ಸಂಭವಿಸುತ್ತಿದೆ. ಈ ಪ್ರದೇಶದಲ್ಲಿ ಹೆಚ್ಚವರಿ ಭೂಸ್ವಾಧೀನ ಪಡಿಸಿಕೊಂಡು ಸರ್ವೀಸ್ ರಸ್ತೆ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

----

* 30 ಮೀಟರ್ ರಸ್ತೆ ಇಕ್ಕಟ್ಟಾಗಿದ್ದು, ಇದರಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ 45 ಮೀಟರ್ ರಸ್ತೆಯ ಅಗತ್ಯವಿದೆ.

- ಕೈಸರ್ ಮೊಹತಶ್ಯಾಂ, ಪುರಸಭೆ ಉಪಾಧ್ಯಕ್ಷ

****

* ಹೆದ್ದಾರಿ ಪ್ರಾಧಿಕಾರ ಮುಂದಾಲೋಚನೆ ಇಲ್ಲದೆ 30 ಮೀಟರ್ ರಸ್ತೆ ನಿರ್ಮಿಸಿದೆ. ನಿತ್ಯವೂ ಈ ಭಾಗದಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸರ್ವೀಸ್ ರಸ್ತೆ ಬಗ್ಗೆಯೂ ಸ್ಪಷ್ಟತೆಯಿಲ್ಲ.

– ರಜಾಮಾನ್ವಿ, ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT