ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ಬಂದವರಿಗೆ ಸತ್ಕಾರ; ಪತಿ ಅನಂತಕುಮಾರ್ ಪರ ಪತ್ನಿ ರೂಪಾ ಪ್ರಚಾರ

ಎಲ್ಲವನ್ನೂ ಸಂಯಮದಿಂದ ನಿಭಾಯಿಸುವ ಕಲೆ
Last Updated 30 ಏಪ್ರಿಲ್ 2019, 16:59 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಬಹಿರಂಗ ಪ್ರಚಾರ ಸಭೆಗಳಲ್ಲಿ ಸಕ್ರಿಯರಾಗಿದ್ದರೆ, ಅವರ ಪತ್ನಿ ರೂಪಾ ಅನಂತಕುಮಾರ್ ಚುನಾವಣೆ ಪೂರ್ವಸಿದ್ಧತೆಯ ಎಲ್ಲವನ್ನೂ ಮನೆಯಲ್ಲಿದ್ದು ನಿಭಾಯಿಸುತ್ತಾರೆ.

ಬೆಳಿಗ್ಗೆ 7 ಗಂಟೆಯಿಂದಲೇ ಅವರ ದಿನಚರಿ ಆರಂಭವಾಗುತ್ತದೆ. ಅಷ್ಟೊತ್ತಿಗೆಲ್ಲ ಪಕ್ಷ ಕಾರ್ಯಕರ್ತರು ಮನೆಗೆ ಭೇಟಿ ನೀಡಲು ಆರಂಭಿಸುತ್ತಾರೆ. ಸಂಪ್ರದಾಯದಂತೆ ಮನೆಗೆ ಬಂದ ಅತಿಥಿಗಳಿಗೆ ಆತಿಥ್ಯ ನೀಡುವ ಜತೆಗೆ, ನಿಗದಿತ ಸ್ಥಳಕ್ಕೆ ಹೋಗಬೇಕಾದ ಕರಪತ್ರಗಳು, ಬ್ಯಾನರ್‌ಗಳೆಲ್ಲ ಹೋಗಿವೆಯೋ ಇಲ್ಲವೋ ಎಂಬುದರ ಜವಾಬ್ದಾರಿ ನೋಡಿಕೊಳ್ಳುವುದು ಕೂಡ ಅವರೇ.

ಅಭ್ಯರ್ಥಿ ಸಂದರ್ಶನಕ್ಕೆ ಬರುವವರು, ಭೇಟಿಗೆ ಬರುವವರಿಗೆ ಸಮಯ ಹೊಂದಾಣಿಕೆ ಮಾಡಿಕೊಂಡು ಪತಿಗೆ ತಿಳಿಸುವುದು, ಸಮಸ್ಯೆ ಹೇಳಿಕೊಂಡು ಬಂದವರ ಮಾತನ್ನು ಸಂಯಮದಿಂದ ಕೇಳಿ ಅದಕ್ಕೆ ಪರಿಹಾರ ಒದಗಿಸುವುದು ಸಹ ಇವರದೇ ಹೊಣೆಗಾರಿಕೆ. ‘ಚುನಾವಣೆಯೆಂದರೆ ಇದನ್ನೆಲ್ಲ ನಿಭಾಯಿಸುವುದು ಅನಿವಾರ್ಯ. ಕಾರ್ಯಕರ್ತರ ಜತೆಗೆ ಕರಪತ್ರಗಳ ಪ್ಯಾಕಿಂಗ್ ಕೂಡ ಮಾಡಿದ್ದೇನೆ. ನೂರಾರು ದೂರವಾಣಿ ಕರೆಗಳು ಬರುತ್ತವೆ. ಅವುಗಳಿಗೆಲ್ಲ ಉತ್ತರಿಸಬೇಕು. ಬೆಳಿಗ್ಗೆ 7 ಗಂಟೆಗೆ ಕೆಲಸ ಶುರುವಾದರೆ, ರಾತ್ರಿ ನಿರ್ದಿಷ್ಟ ಸಮಯವಿಲ್ಲ. 12 ಆದರೂ ಆಯಿತು, 1 ಗಂಟೆ ದಾಟಿದೂ ಅಚ್ಚರಿಯೇನಿಲ್ಲ’ ಎನ್ನುತ್ತಾರೆ ರೂಪಕ್ಕ.

ಇದರ ನಡುವೆಯೇ ಸಮಯ ಹೊಂದಿಸಿಕೊಂಡು ಅವರು ಪ್ರಚಾರಕ್ಕೆ ಹೋಗುತ್ತಿದ್ದಾರೆ. ಗುರುವಾರ ಇಸಳೂರು, ಬಪ್ಪನಳ್ಳಿ ಭಾಗದ ಪ್ರಚಾರದಲ್ಲಿ ಭಾಗಿಯಾಗಿದ್ದ ಅವರು, ಶುಕ್ರವಾರ ನೆಗ್ಗು ಪಂಚಾಯ್ತಿಯ ಅಮ್ಮಚ್ಚಿ, ಹಾರೂಗಾರ, ಕೊಪ್ಪೇಸರ, ಹಳದಕೈ ಮೊದಲಾದ ಹಳ್ಳಿಗಳಿಗೆ ಭೇಟಿ ನೀಡಿದ್ದರು. ರೂಪಾ ಹೆಗಡೆ ಅಲ್ಲಿ ಭಾಷಣ ಮಾಡುವುದಿಲ್ಲ, ಬದಲಾಗಿ ಮನೆಯ ಜಗುಲಿಯಲ್ಲಿ ಕುಳಿತು, ಸುತ್ತಲಿನವರನ್ನೆಲ್ಲ ಸೇರಿಸಿಕೊಂಡು ಆತ್ಮೀಯವಾಗಿ ಮಾತನಾಡುತ್ತಾರೆ. ಅನಂತಕುಮಾರ್ ಅವರಿಗೆ ಮತ ನೀಡುವಂತೆ ವಿನಂತಿಸುತ್ತಾರೆ.

‘ಎಲ್ಲ ಕೆಲಸಗಳ ಉಸ್ತುವಾರಿ ನೋಡಿಕೊಳ್ಳುವ ಕಾರಣಕ್ಕೆ ಪ್ರತಿದಿನ ಪ್ರಚಾರಕ್ಕೆ ಹೋಗಲು ಆಗದು. ಅವಕಾಶ ಇದ್ದಾಗ ಹೋಗುತ್ತೇನೆ. ಸಂಬಂಧಿಗಳು ಮನೆಯ ಕೆಲಸಕ್ಕೆ ಸಹಕರಿಸುತ್ತಾರೆ. ‍ಪ್ರಚಾರಕ್ಕೆ ಹೋಗುವುದಾದರೆ ಬೆಳಿಗ್ಗೆ 10 ಗಂಟೆಯೊಳಗಾಗಿ ಎಲ್ಲವನ್ನೂ ಮುಗಿಸಿ, ಹೊರಟು ಬಿಡುತ್ತೇನೆ’ ಎಂದು ಹೇಳಿದರು.

ಲೆಕ್ಕಪತ್ರ, ಕರಪತ್ರ, ಪ್ರಚಾರ ಹೀಗೆ ಎಲ್ಲ ವಿಭಾಗಗಳು ಪ್ರತ್ಯೇಕವಾಗಿಯೇ ನಿರ್ವಹಣೆಯಾಗುತ್ತವೆ. ಆದರೆ, ಇವೆಲ್ಲ ವ್ಯವಸ್ಥಿತವಾಗಿ ಆಗುತ್ತಿವೆಯೇ ಎಂಬುದನ್ನು ಮನೆಯ ಯಜಮಾನಿಯಾಗಿರುವ ರೂಪಾ ನೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT