ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಹಲಗೆ ಅಳವಡಿಸಿದರೂ ನಿಲ್ಲದ ಉಪ್ಪುನೀರು

ಅಂಬಿವಾಡದಲ್ಲಿ ಅಸಮರ್ಪಕ ಕಾಮಗಾರಿ: ಗ್ರಾಮಸ್ಥರ ಆರೋಪ
Last Updated 23 ಏಪ್ರಿಲ್ 2021, 14:47 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಿವಾಡದಲ್ಲಿ ಕಾಳಿ ನದಿಯಿಂದ ಉಪ್ಪು ನೀರು ನುಗ್ಗದಂತೆ ಬಾಂದಾರಕ್ಕೆ ಈಚೆಗೆ ಹಲಗೆಗಳನ್ನು ಅಳವಡಿಸಲಾಗಿದೆ. ಆದರೆ, ಆ ಕಾಮಗಾರಿಯು ಸಮರ್ಪಕವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಕಾಳಿ ನದಿಯ ಮೂಲಕ ಸಮುದ್ರದ ಉಪ್ಪು ನೀರು ಸಮೀಪದ ಜಮೀನಿಗೆ ನುಗ್ಗುತ್ತಿದೆ. ಅದರಿಂದಾಗಿ, ಊರಿನಲ್ಲಿರುವ ಕುಡಿಯುವ ನೀರಿನ 20 ಬಾವಿಗಳ ನೀರು ಹಾಳಾಗಿದ್ದು, ಬಳಕೆ ಯೋಗ್ಯವಾಗಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮಾರ್ಚ್ 22ರಂದು ‘ಉಪ್ಪು ನೀರಿನಿಂದ ಕಂಗೆಟ್ಟ ಅಂಬಿಗವಾಡ’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು.

ಈ ನಡುವೆ, ಸಣ್ಣ ನೀರಾವರಿ ಇಲಾಖೆಯಿಂದ ಬಾಂದಾರದ ಗೇಟ್‌ಗಳಿಗೆ ಎರಡು ಹಲಗೆಗಳನ್ನು ಅಳವಡಿಸಲಾಗಿದೆ. ಆದರೆ, ಕಾಮಗಾರಿ ಸೂಕ್ತ ರೀತಿಯಲ್ಲಿ ಆಗದ ಕಾರಣ ಉಪ್ಪು ನೀರು ಒಳಗೆ ಹರಿಯುತ್ತಿದೆ. ಇದರಿಂದ ಊರಿನ ಸಮಸ್ಯೆ ಬಗೆ ಹರಿದಿಲ್ಲ ಎಂದು ಗ್ರಾಮಸ್ಥ ಜಗದೀಶ ಹೇಳಿದ್ದಾರೆ.

ಈ ಬಗ್ಗೆ ಗ್ರಾಮಸ್ಥರು ಸಭೆ ನಡೆಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು. ಅಂಬಿಗವಾಡ, ಪಾಟ್ಲೊವಾಡ ಮತ್ತು ಬಾಬು ನಾಯ್ಕವಾಡದಲ್ಲಿ 35ಕ್ಕೂ ಹೆಚ್ಚು ಮನೆಗಳಿವೆ. ಬಹುತೇಕ ಎಲ್ಲರ ಮನೆಗಳಲ್ಲೂ ಬಾವಿಗಳಿದ್ದರೂ ಡಿಸೆಂಬರ್ ತಿಂಗಳಿನಿಂದ ಉಪ್ಪು ನೀರು ತುಂಬಿಕೊಳ್ಳುತ್ತಿದೆ. ಈ ಊರಿಗೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ಪ್ರತ್ಯೇಕ ಯೋಜನೆಯೂ ಇಲ್ಲ. ಆದ್ದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಕಾಮಗಾರಿಯನ್ನು ಪರಿಶೀಲಿಸಿ, ಬಾಂದಾರ ದುರಸ್ತಿ ಮಾಡಿಸಿಕೊಡಬೇಕು. ಊರಿನೊಳಗೆ ಉಪ್ಪು ನೀರು ಬರುವುದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT