ಭಾನುವಾರ, ಸೆಪ್ಟೆಂಬರ್ 15, 2019
23 °C

ಸೌರ ವಿದ್ಯುತ್ ದೀಪ ಅಳವಡಿಕೆಯಲ್ಲಿ ಅವ್ಯವಹಾರ: ಆರೋಪ

Published:
Updated:

ಕಾರವಾರ: ಕುಮಟಾ ತಾಲ್ಲೂಕಿನ ಕಾಗಾಲದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಪರಿಶಿಷ್ಟ ಜಾತಿಯವರ ಕಾಲೊನಿ ರಸ್ತೆಗೆ ಸೌರ ವಿದ್ಯುತ್ ದೀಪ ಅಳವಡಿಸಿದ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ. ಅಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷೆ, ಪಿಡಿಒ ಹಾಗೂ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಬುಧವಾರ ದೂರು ಸಲ್ಲಿಕೆಯಾಗಿದೆ.

ಉತ್ತರ ಕನ್ನಡ ಜಿಲ್ಲಾ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಮತ್ತು ಪ್ರತಿಬಂಧ) ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯ ಮಂಜುನಾಥ ಬಿ.ಆಗೇರ ದೂರು ನೀಡಿದ್ದಾರೆ. 

ಕಾಗಾಲ ಗ್ರಾಮಕ್ಕೆ 2017–18ನೇ ಸಾಲಿನಲ್ಲಿ ಯೋಜನೆ ಮಂಜೂರಾಗಿದೆ. ಇದಕ್ಕಾಗಿ ₹ 8 ಲಕ್ಷ ವಿನಿಯೋಗಿಸಲಾಗಿದೆ. ಆದರೆ, ಈ ಕಾಮಗಾರಿಯನ್ನು ಟೆಂಡರ್ ಕರೆಯದೇ ಪೂರ್ಣಗೊಳಿಸಲಾಗಿದೆ. ಮಾದನಗೇರಿಯ ‘ಕರಾವಳಿ ಸೋಲರ್ ಪವರ್ ಸಿಸ್ಟಮ್’ ಎಂಬ ಸಂಸ್ಥೆಗೆ ತುಂಡುಗುತ್ತಿಗೆ ನೀಡಲಾಗಿದೆ. ಆದರೆ, ಆ ಹೆಸರಿನ ಸಂಸ್ಥೆಯೇ ಅಲ್ಲಿಲ್ಲ. ಅಲ್ಲದೇ ಸಂಸ್ಥೆಯು ನೀಡಿದ ದರಪಟ್ಟಿಯಲ್ಲಿ ಜಿಎಸ್‌ಟಿ ಸಂಖ್ಯೆ, ಏಜೆನ್ಸಿ ಪರವಾನಗಿ ಸಂಖ್ಯೆಗಳನ್ನು ಫೋರ್ಜರಿ ಮಾಡಲಾಗಿದೆ. ಅಳವಡಿಸಿದ ಉಪಕರಣಗಳೂ ಕಳಪೆಯಾಗಿವೆ. ಸರಿಯಾಗಿ ಬೆಳಕು ನೀಡುತ್ತಿಲ್ಲ ಎಂದು ದೂರಿದ್ದಾರೆ.

ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಪಿಡಿಒ ಹಾಗೂ ಅಧ್ಯಕ್ಷರು ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ. ಕಾಮಗಾರಿಯ ಕುರಿತು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸಂಸ್ಥೆಯ ನಡುವಿನ ಕರಾರನ್ನು ನೋಟರಿ ಮುಖಾಂತರ ನೋಂದಣಿ ಮಾಡಿಸಿಲ್ಲ. ಸಂಸ್ಥೆಯು ನೀಡಿದ ಎರಡು ದರಪಟ್ಟಿಗಳಲ್ಲಿ ₹ 1.55 ಲಕ್ಷ ವ್ಯತ್ಯಾಸ ಕಂಡುಬಂದಿದೆ. ಆದ್ದರಿಂದ ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.

Post Comments (+)