ಮಂಗಳವಾರ, ಮೇ 18, 2021
30 °C
ಭೂ ತಾಂತ್ರಿಕ ಸಾಧ್ಯತಾ ಸರ್ವೆ ಕೈಗೊಂಡಿರುವ ‘ಐ–ಡೆಕ್’ ಎಂಜಿನಿಯರ್‌ಗಳು

ಬೇಲೆಕೇರಿ ಬಂದರು: ಎರಡನೇ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಬೇಲೆಕೇರಿ ಬಂದರಿನ ಅಭಿವೃದ್ಧಿಗೆ ಸಂಬಂಧಿಸಿದ ಎರಡನೇ ಸಮೀಕ್ಷೆ ಆರಂಭವಾಗಿದೆ. ಮೂಲ ಸೌಕರ್ಯ ಅಭಿವೃದ್ಧಿ ನಿಗಮದ (ಐ-ಡೆಕ್) ಮಂಗಳೂರಿನ ಎಂಜಿನಿಯರ್‌ಗಳು ಭೂ ತಾಂತ್ರಿಕ ಸಾಧ್ಯತಾ ಸಮೀಕ್ಷೆ (ಜಿಯೋಟೆಕ್ನಿಕಲ್ ಫೀಸಿಬಿಲಿಟಿ ಸರ್ವೆ) ಮಾಡುತ್ತಿದ್ದಾರೆ. ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ. 

ಎಂಜಿನಿಯರ್‌ಗಳು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಸಲ್ಲಿಸುವ ವರದಿಯನ್ನು ಆಧರಿಸಿ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ, ‘ಬೇಲೆಕೇರಿ ಬಂದರು ಅಭಿವೃದ್ಧಿ ಕುರಿತು ವಿಸ್ತೃತ ಸಾಧ್ಯತಾ ವರದಿ ಸಿದ್ಧಪಡಿಸಲಾಗುತ್ತಿದೆ. ಇದರ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ‘ಐಡೆಕ್’ಗೆ ನೀಡಲಾಗಿದೆ. ಅದರ ವರದಿಯ ಬಳಿಕ ಮುಂದಿನ ನಿರ್ಧಾರಗಳು ಜಾರಿಯಾಗಲಿವೆ’ ಎಂದು ಹೇಳಿದ್ದಾರೆ.

2016ರಲ್ಲಿ ಅಮೆರಿಕದ ‘ಏಕಾಂ’ ಎಂಬ ಸಂಸ್ಥೆಯು ಇಲ್ಲಿ ತಾಂತ್ರಿಕ ಹಾಗೂ ವಾಣಿಜ್ಯ ಸಾಧ್ಯತಾ ಅಧ್ಯಯನ ವರದಿ ಸಿದ್ಧಪಡಿಸಿತ್ತು. ಆಗಿನ ವರದಿಯ ಪ್ರಕಾರ ಬಂದರು ನಿರ್ಮಾಣ ಹಾಗೂ ಇತರ ಮೂಲ ಸೌಕರ್ಯಗಳಿಗೆ ಒಟ್ಟು ₹ 2,595 ಕೋಟಿ ಬೇಕು. ಆ ವರದಿಯಂತೆ, ಮೊದಲ ಹಂತದಲ್ಲಿ ಎರಡು ಧಕ್ಕೆಗಳನ್ನು ನಿರ್ಮಿಸಲಾಗುವುದು. ಅವುಗಳಲ್ಲಿ ಒಂದು ಕಲ್ಲಿದ್ದಲಿಗಾಗಿ ಹಾಗೂ ಇನ್ನೊಂದು ಇತರ ಸಾಮಗ್ರಿಯ ಸಾಗಣೆಗೆ ಬಳಸಲಾಗುವುದು.

ಈ ಬಂದರು ಬಳಕೆಗೆ ಸಿದ್ಧವಾದ ಕೂಡಲೇ ವರ್ಷಕ್ಕೆ 5.7 ಮಿಲಿಯನ್ ಟನ್ ಸರಕನ್ನು ನಿರ್ವಹಿಸಲು ಸಾಧ್ಯವಿದೆ. 2036ರ ವೇಳೆಗೆ ವಿಸ್ತರಣೆ ಮಾಡಿ ಈ ಪ್ರಮಾಣವನ್ನು ವರ್ಷಕ್ಕೆ 37 ಮಿಲಿಯನ್ ಟನ್‌ಗೆ ಹೆಚ್ಚಿಸಲು ಅವಕಾಶವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಮಂಗಳೂರಿನ ನವ ಮಂಗಳೂರು ಬಂದರು ಟ್ರಸ್ಟ್ ಮೂಲಕ ಬೇಲೆಕೇರಿ ಬಂದರನ್ನು ಅಭಿವೃದ್ಧಿ ಮಾಡುವುದು, ಬಳಿಕ ವಿವಿಧ ಕಂಪನಿಗಳಿಗೆ ಬಾಡಿಗೆ ಕೊಡುವುದು, ಸಂಪೂರ್ಣವಾಗಿ ಖಾಸಗಿಯವರೇ ಅಭಿವೃದ್ಧಿ ಮಾಡುವುದು, ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ) ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ ಎಂಬ ಮೂರು ಪ್ರಸ್ತಾವಗಳನ್ನು ವರದಿಯಲ್ಲಿ ಹೇಳಲಾಗಿತ್ತು. ಕೊನೆಗೆ ರಾಜ್ಯ ಸರ್ಕಾರವು ಪಿ.ಪಿ.ಪಿ ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ.

ಬೇಲೆಕೇರಿ ಬಂದರಿನ ಅಭಿವೃದ್ಧಿ ವಿಚಾರ ಒಂದೆಡೆಯಾದರೆ, ಅದರ ಸುತ್ತಮುತ್ತ ಇರುವ ಸುಮಾರು ಎರಡು ಸಾವಿರ ಜನಸಂಖ್ಯೆಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವುದು ಮತ್ತೊಂದೆಡೆ ಸವಾಲಾಗಿದೆ. ಸಮೀಪದ ಕೇಣಿ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯೂ ಇದೆ. 2010ಕ್ಕೂ ಮೊದಲು ಈ ಬಂದರಿನ ಮೂಲಕ ಆಗಿದ್ದ ಅದಿರು ಅಕ್ರಮ ಸಾಗಣೆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಹಾಗಾಗಿ ಬಂದರಿನ ಅಭಿವೃದ್ಧಿ ಸವಾಲಾಗಿದೆ.

ಪಿ.ಪಿ.ಪಿ ಅಡಿ ಅಭಿವೃದ್ಧಿ:

ಬೇಲೆಕೇರಿಯಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಬಂದರು ನಿರ್ಮಾಣಕ್ಕೆ ಸರ್ಕಾರ ಯೋಜಿಸಿದೆ. ಇದಕ್ಕೆ ಪೂರಕವಾಗಿ ಸಾಗರಮಾಲಾ ಯೋಜನೆಯಡಿ ಹೆದ್ದಾರಿಗೆ ಸಂಪರ್ಕ ಏರ್ಪಡಲಿದೆ. ಶಿರಸಿ– ಕುಮಟಾ–ಬೇಲೆಕೇರಿ ರಾಷ್ಟ್ರೀಯ ಹೆದ್ದಾರಿ 766ಇ ಕಾಮಗಾರಿ ಈಗಾಗಲೇ ಶುರುವಾಗಿದೆ. ಬೇಲೆಕೇರಿಗೆ ಕೊಂಕಣ ರೈಲ್ವೆ ಮಾರ್ಗವನ್ನು ಸೇರಿಸುವ ಸಾಧ್ಯತೆಗಳ ಬಗ್ಗೆಯೂ ಸಮೀಕ್ಷೆ ಮಾಡಲಾಗಿದೆ. ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣ ಮಂಜೂರಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು