ಗುರುವಾರ , ಮೇ 6, 2021
25 °C
ಪರಿಷ್ಕೃತ ಮಾರ್ಗಸೂಚಿ ಜಾರಿ: ಶುಕ್ರವಾರವೇ ಹಲವು ವಹಿವಾಟು ಸ್ಥಗಿತ

ವಾರಾಂತ್ಯದ ಕರ್ಫ್ಯೂ: ಅಂಗಡಿಗಳು ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೋವಿಡ್ ಸೋಂಕು ಹರಡುವುದನ್ನು ತಡೆಯುವ ಕ್ರಮದ ಭಾಗವಾಗಿ ಸರ್ಕಾರವು ಪ್ರಕಟಿಸಿರುವ ಪರಿಷ್ಕೃತ ಮಾರ್ಗಸೂಚಿಗಳನ್ನು ನಗರದಲ್ಲೂ ಶುಕ್ರವಾರ ಜಾರಿ ಮಾಡಲಾಯಿತು. ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದು ಕಂಡುಬಂತು.

ಭಾಗಶಃ ಲಾಕ್‌ಡೌನ್ ಕ್ರಮದ ಅಂಗವಾಗಿ ನಗರದಲ್ಲಿ ಕಿರಾಣಿ, ನ್ಯಾಯಬೆಲೆ ಅಂಗಡಿಗಳು, ದಿನಸಿ, ಹಣ್ಣು, ತರಕಾರಿ, ಹಾಲಿನ ಬೂತ್, ಪೆಟ್ರೋಲ್ ಬಂಕ್ ಮುಂತಾದ ವಹಿವಾಟುಗಳು ತೆರೆದಿದ್ದವು. ಉಳಿದಂತೆ, ಬಟ್ಟೆ ವ್ಯಾಪಾರ, ಚಿನ್ನಾಭರಣ ಮಳಿಗೆಗಳು, ಕೆಲವು ಹಾರ್ಡ್‌ವೇರ್ ಅಂಗಡಿಗಳು, ಫ್ಯಾನ್ಸಿ ಸ್ಟೋರ್‌ ಮುಂತಾದ ಮಳಿಗೆಗಳನ್ನು ಮುಚ್ಚಲಾಗಿತ್ತು.

ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 9ರ ತನಕ ವಾರಾಂತ್ಯದ ಕರ್ಫ್ಯೂ ಜಾರಿಯಾಗುವ ಕಾರಣ, ಕಿರಾಣಿ, ತರಕಾರಿ, ಮೊಟ್ಟೆ ಅಂಗಡಿಗಳ ಮುಂದೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ನಗರದಲ್ಲಿ ಭಾನುವಾರ ನಡೆಯುವ ಸಂತೆಯೂ ರದ್ದಾಗಿದೆ. ಹಾಗಾಗಿ ಎರಡು ದಿನಗಳಿಗೆ ಬೇಕಾದ ಅಗತ್ಯ ಸಾಮಗ್ರಿ ಖರೀದಿಯಲ್ಲಿ ಹೆಚ್ಚಿನ ಜನ ನಿರತರಾಗಿದ್ದರು.

ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು ಮತ್ತು ಬಾರ್‌ಗಳಿಂದ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಹೋಟೆಲ್‌ಗಳ ಸಿಬ್ಬಂದಿ ಮೇಜು, ಕುರ್ಚಿಗಳನ್ನು ದಾರಿಗೆ ಅಡ್ಡಲಾಗಿ ಇಟ್ಟು ಜನ ಒಳಗೆ ಹೋಗದಂತೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಹಲವು ಹೋಟೆಲ್‌ಗಳ ಮುಂದೆ, ಪಾರ್ಸೆಲ್ ವ್ಯವಸ್ಥೆ ಮಾತ್ರ ಲಭ್ಯ ಎಂಬ ಫಲಕವನ್ನೂ ಅಳವಡಿಸಿದ್ದಾರೆ. ಉಳಿದಂತೆ, ನಗರದಲ್ಲಿ ಶುಕ್ರವಾರ ಜನರ ಸಂಚಾರ ಎಂದಿನಷ್ಟು ಇರಲಿಲ್ಲ.

ವ್ಯಾಪಾರಿಗಳಿಗೆ ಚಿಂತೆ: ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್ ಮಾಡಲಾಗಿತ್ತು. ಆಗ ಆಗಿರುವ ನಷ್ಟವೇ ಇನ್ನೂ ಸರಿಹೋಗಿಲ್ಲ. ಈಗ ಎರಡನೇ ಅಲೆ ಶುರುವಾಗಿದ್ದು, ಕಠಿಣ ನಿಯಮಾವಳಿಗಳನ್ನು ಜಾರಿ ಮಾಡಲಾಗುತ್ತಿದೆ. ಇದರಿಂದ ಮತ್ತಷ್ಟು ಸಂಕಷ್ಟ ಎದುರಿಸಬೇಕಾದೀತು ಎಂಬ ಆತಂಕ ಹೋಟೆಲ್ ಸೇರಿದಂತೆ ವಿವಿಧ ವ್ಯವಹಾರಗಳು ಹಾಗೂ ಅವುಗಳ ಮೂಲಕ ದುಡಿಮೆ ಕಂಡುಕೊಳ್ಳುತ್ತಿರುವ ಜನರದ್ದಾಗಿದೆ.

‘ಗೊಂದಲಕಾರಿ ಮಾರ್ಗಸೂಚಿ’: ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಜಾರಿ ಮಾಡಿರುವ ನಿಯಮಾವಳಿಗಳು ಮತ್ತಷ್ಟು ಸ್ಪಷ್ಟವಾಗಿರಬೇಕಿತ್ತು ಎಂಬುದು ಹಲವರ ಆಗ್ರಹವಾಗಿದೆ.

‘ಮದುವೆ ಹಮ್ಮಿಕೊಳ್ಳಲು ಷರತ್ತಿಗೆ ಒಳಪಟ್ಟು ಅವಕಾಶ ನೀಡಲಾಗಿದೆ. ಆದರೆ, ಮದುವೆಗೆ ಅಗತ್ಯವಿರುವ ಆಭರಣ, ಬಟ್ಟೆ ಖರೀದಿಸಲು ಸಂಬಂಧಪಟ್ಟ ಮಳಿಗೆಗಳು ತೆರೆದಿರುವುದಿಲ್ಲ. ಅದೇರೀತಿ, ಬಸ್, ಆಟೊ  ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಜನ ಮನೆಯಿಂದ ಹೊರಗೆ ಬರುವಂತಿಲ್ಲ. ಇದು ಗೊಂದಲ ಮೂಡಿಸುತ್ತದೆ’ ಎನ್ನುವುದು ನಗರದ ಕಮಲೇಶ ನಾಯ್ಕ ಅವರ ಅಭಿಪ್ರಾಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.